
ಕನ್ನಡದ ನಟ ಮಡೆನೂರು ಮನು (Madenur Manu) ಅವರು ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರು. ಇಷ್ಟು ದಿನ ನ್ಯಾಯಾಂಗ ಬಂಧನದಲ್ಲಿ ಇದ್ದ ಅವರಿಗೆ ಈಗ ಸಣ್ಣ ರಿಲೀಫ್ ಸಿಕ್ಕಿದೆ. ಮಡೆನೂರು ಮನು ಅವರಿಗೆ ಈ ಕೇಸ್ನಲ್ಲಿ ಜಾಮೀನು (Bail) ನೋಡಲಾಗಿದೆ. ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರು ಶನಿವಾರ (ಜೂನ್ 7) ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ‘ಕುಲದಲ್ಲಿ ಕೀಳಾವುದೋ’ (Kuladalli Keelyavudo) ಸಿನಿಮಾದಲ್ಲಿ ಮಡೆನೂರು ಮನು ಹೀರೋ ಆಗಿ ನಟಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಅವರು ಅರೆಸ್ಟ್ ಆಗಿದ್ದರು.
ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಮಡೆನೂರು ಮನು ಅವರು ಗುರುತಿಸಿಕೊಂಡರು. ಬಳಿಕ ಅವರು ಸಿನಿಮಾ ಹೀರೋ ಆಗುವ ಕನಸು ಕಂಡರು. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಆ ಕನಸು ನನಸು ಮಾಡಿಕೊಂಡರು. ಆ ಚಿತ್ರಕ್ಕಾಗಿ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದರು. ಆದರೆ ಚಿತ್ರದ ಬಿಡುಗಡೆ ಹೊಸ್ತಿನಲ್ಲೇ ವಿವಾದ ಮಾಡಿಕೊಂಡರು.
ಸಹ-ನಟಿ ಹಾಗೂ ಸ್ನೇಹಿತೆ ಆಗಿದ್ದ ಮಹಿಳೆಯ ಜೊತೆ ಮಡೆನೂರು ಮನು ಆಪ್ತವಾಗಿದ್ದರು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಎದುರಾಯಿತು. ಮಹಿಳೆ ನೀಡಿದ ದೂರಿನ ಮೇರೆಗೆ ಮಡೆನೂರು ಮನು ಅವರನ್ನು ಪೊಲೀಸರು ಅರೆಸ್ಟ್ ಮಾಡಿದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮಡೆನೂರು ಮನು ಅರೆಸ್ಟ್ ಆಗುತ್ತಿದ್ದಂತೆಯೇ ಕೆಲವು ಆಡಿಯೋ ತಣುಕುಗಳು ವೈರಲ್ ಆದವು. ಸಂತ್ರಸ್ತ ಮಹಿಳೆಗೆ ತಾವು ತಾಳಿ ಕಟ್ಟಿರುವುದಾಗಿ ಮನು ಹೇಳಿಕೊಂಡಿದ್ದು ಆ ಆಡಿಯೋದಲ್ಲಿ ಬಹಿರಂಗ ಆಯಿತು. ಅಲ್ಲದೇ ಆಕೆಯನ್ನು ತನ್ನ 2ನೇ ಪತ್ನಿ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಕೂಡ ಮನು ಹೇಳಿರುವುದು ಆಡಿಯೋದಲ್ಲಿದೆ. ಇದರಿಂದ ಮನುಗೆ ಸಂಕಷ್ಟ ಹೆಚ್ಚಿತು.
ಇದನ್ನೂ ಓದಿ: ಶಿವಣ್ಣ ಬಗ್ಗೆ ಅವಹೇಳನಕಾರಿ ಮಾತು: ಮಡೆನೂರು ಮನು ವಿರುದ್ಧ ಚೇಂಬರ್ ಖಡಕ್ ನಿರ್ಧಾರ
ಚಿತ್ರರಂಗದ ಕೆಲವು ಖ್ಯಾತ ನಟರ ಬಗ್ಗೆ ಮಡೆನೂರು ಮನು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದೆ. ಇದರಿಂದಾಗಿ ಕನ್ನಡ ಚಿತ್ರರಂಗ ಗರಂ ಆಗಿದೆ. ಮನು ಜೊತೆ ಯಾವುದೇ ಸಿನಿಮಾ ಮಾಡಬಾರದು, ಅವರಿಗೆ ಸಹಕಾರ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.