Dharmanna: ಕೂಡಿಬಂತು ‘ರಾಜಯೋಗ’; ಹಾಸ್ಯ ನಟ ಧರ್ಮಣ್ಣ ಕಡೂರು ಈಗ ಹೀರೋ

Rajayoga Kannada Movie: ‘ಅನಂತ್​ ನಾಗ್​, ಶಶಿಕುಮಾರ್​, ಕಾಶಿನಾಥ್​ ಅವರು ಆ ಕಾಲದಲ್ಲಿ ಮಾಡಿದಂತಹ ಸಿನಿಮಾಗಳನ್ನು ‘ರಾಜಯೋಗ’ ಚಿತ್ರ ನೆನಪಿಸುತ್ತದೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ ನಟ ಧರ್ಮಣ್ಣ.

Dharmanna: ಕೂಡಿಬಂತು ‘ರಾಜಯೋಗ’; ಹಾಸ್ಯ ನಟ ಧರ್ಮಣ್ಣ ಕಡೂರು ಈಗ ಹೀರೋ
ನಿರೀಕ್ಷಾ ರಾವ್, ಧರ್ಮಣ್ಣ

Updated on: Mar 14, 2023 | 6:51 PM

‘ರಾಮಾ ರಾಮಾ ರೇ..’ ಸಿನಿಮಾ ಮೂಲಕ ನಟ ಧರ್ಮಣ್ಣ ಕಡೂರು (Dharmanna Kadur) ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಆ ಬಳಿಕ ಅವರಿಗೆ ಭರ್ಜರಿ ಆಫರ್​ಗಳು ಬರಲು ಆರಂಭವಾದವು. ಅನೇಕ ಸ್ಟಾರ್​ ನಟರು ಕೂಡ ಧರ್ಮಣ್ಣನ ಪ್ರತಿಭೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದುಂಟು. ಹಲವಾರು ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡಿದ ಫೇಮಸ್​ ಆಗಿರುವ ಅವರು ಈಗ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ. ಆ ಸಿನಿಮಾಗೆ ‘ರಾಜಯೋಗ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಟೈಟಲ್​ ಅನಾವರಣದ ಜೊತೆಗೆ ಫಸ್ಟ್​ ಲುಕ್​ ಕೂಡ ಬಿಡುಗಡೆ ಆಗಿದೆ. ಹಳ್ಳಿ ವಾತಾವರಣದಲ್ಲಿ ಈ ಸಿನಿಮಾದ ಕಥೆ ಸಾಗಲಿದೆ. ಧರ್ಮಣ್ಣ (Dharmanna) ಅವರಿಗೆ ಜೋಡಿಯಾಗಿ ನಿರೀಕ್ಷಾ ರಾವ್​ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ರಾಜಯೋಗ’ ಸಿನಿಮಾದ (Rajayoga Movie) ಸುದ್ದಿಗೋಷ್ಠಿ ನಡೆಯಿತು.

ಲಿಂಗರಾಜ ಉಚ್ಚಂಗಿದುರ್ಗ ಅವರು ‘ರಾಜಯೋಗ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಕೂಡ ಅವರದ್ದೇ. ಈ ಸಿನಿಮಾಗೆ 6 ಮಂದಿ ನಿರ್ಮಾಪಕರು. ‘ಕನ್ನಡ್​ ಗೊತ್ತಿಲ್ಲ’ ಖ್ಯಾತಿಯ ಕುಮಾರ ಕಂಠೀರವ ಅವರ ಜೊತೆ ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ.ಎನ್., ಅರ್ಜುನ್ ಅಣತಿ ಹಾಗೂ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರು ಕೂಡ ಬಂಡವಾಳ ಹೂಡುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ‘ರಾಜಯೋಗ’ ಸಿನಿಮಾ ತಂಡ

‘ರಾಜಯೋಗ’ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಶೂಟಿಂಗ್​ ಮುಗಿದಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದು ಈ ಸಿನಿಮಾದ ಕಾನ್ಸೆಪ್ಟ್. ಜೋತಿಷ್ಯದ ವಿಚಾರವನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಗಂಭೀರವಾದ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಹೊರಟಿರುವುದಾಗಿ ತಿಳಿಸಿದ್ದಾರೆ ನಿರ್ದೇಶಕರು.

ಇದನ್ನೂ ಓದಿ
ಬರ್ತ್​ಡೇ ದಿನ ಧರ್ಮಣ್ಣನಿಗೆ ಸರ್​ಪ್ರೈಸ್; ಭಾವುಕರಾದ ಹಾಸ್ಯ ನಟ
Chikkanna: ‘ಉಪಾಧ್ಯಕ್ಷ’ ಶೂಟಿಂಗ್​ ಮುಕ್ತಾಯ: ಮಲೈಕಾ ಜತೆ ನಟಿಸಿದ ಅನುಭವ ಹಂಚಿಕೊಂಡ ನಟ ಚಿಕ್ಕಣ್ಣ
‘ನನ್ನ ಎರಡ್ಮೂರು ಲವ್​​ಸ್ಟೋರಿ ಹೊಗೇನೆ’; ಪ್ರೀತಿ-ಪ್ರೇಮದ ವಿಚಾರ ಮಾತನಾಡಿದ ಧರ್ಮಣ್ಣ
40 ಕೆಜಿ ಇದ್ದ ಅಕ್ಕ 15 ಕೆಜಿಗೆ ಇಳಿದ್ರು, ಆಮೇಲೆ ತೀರೋದ್ರು; ಭಾವುಕರಾದ ಧರ್ಮಣ್ಣ

ಇದನ್ನೂ ಓದಿ: ‘ನನ್ನ ಎರಡ್ಮೂರು ಲವ್​​ಸ್ಟೋರಿ ಹೊಗೇನೆ’; ಪ್ರೀತಿ-ಪ್ರೇಮದ ವಿಚಾರ ಮಾತನಾಡಿದ ಧರ್ಮಣ್ಣ

ಈ ಸಿನಿಮಾಗೆ ಧರ್ಮಣ್ಣ ಹೀರೋ ಆಗಿದ್ದರೂ ಕೂಡ ‘ನಾನು ನಾಯಕ ಅಲ್ಲ’ ಎನ್ನುತ್ತಲೇ ಅವರು ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸಿದರು. ‘ಈ ಚಿತ್ರದಲ್ಲಿ ಕಥೆ ಮತ್ತು ನಿರ್ದೇಶಕರೇ ಹೀರೋಗಳು. ರಾಮಾ ರಾಮಾ ರೇ ಸಿನಿಮಾ ಆದ ಬಳಿಕ 6 ಚಿತ್ರಗಳಿಗೆ ಹೀರೋ ಆಗುವ ಅವಕಾಶ ಬಂತು. ಅವು ನನಗೆ ಹೊಂದಿಕೆ ಆಗುವಂತೆ ಇರಲಿಲ್ಲ. ಆದರೆ ‘ರಾಜಯೋಗ’ ಸಿನಿಮಾ ಕಥೆ ಕೇಳಿದ ಬಳಿಕ ಖುಷಿ ಆಯಿತು. ಈ ಸಿನಿಮಾದ ಕಥೆ ನನ್ನ ಬದುಕಿಗೆ ಹತ್ತಿರವಾಗಿದೆ. ಒಪ್ಪಿಕೊಳ್ಳುವುದಕ್ಕೂ ಮುನ್ನ 15 ದಿನ ಸಮಯ ತೆಗೆದುಕೊಂಡೆ. ಅನೇಕ ಆಪ್ತರ ಸಲಹೆ ಪಡೆದ ಬಳಿಕ ಸಿನಿಮಾ ಒಪ್ಪಿಕೊಂಡೆ’ ಎಂದಿದ್ದಾರೆ ಧರ್ಮಣ್ಣ.

ಇದನ್ನೂ ಓದಿ: ಬರ್ತ್​ಡೇ ದಿನ ಧರ್ಮಣ್ಣನಿಗೆ ಸರ್​ಪ್ರೈಸ್; ಭಾವುಕರಾದ ಹಾಸ್ಯ ನಟ

‘ನನ್ನನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಎಲ್ಲ ನಿರ್ಮಾಪಕರಿಗೆ ಧನ್ಯವಾದಗಳು. ಎಲ್ಲರಿಗೂ ಕಥೆ ಮೇಲೆ ನಂಬಿಕೆ ಇದೆ. ಅಂದುಕೊಂಡಿದ್ದಕ್ಕಿಂತ ಬಜೆಟ್​ ಜಾಸ್ತಿ ಆಗಿದೆ. ಅನಂತ್​ ನಾಗ್​, ಶಶಿಕುಮಾರ್​, ಕಾಶಿನಾಥ್​ ಅವರು ಮಾಡಿದಂತಹ ಸಿನಿಮಾಗಳನ್ನು ‘ರಾಜಯೋಗ’ ಚಿತ್ರ ನೆನಪಿಸುತ್ತದೆ ಎಂಬ ಭರವಸೆ ನನಗೆ ಇದೆ. ಆ ಕಾಲದ ಫ್ಯಾಮಿಲಿ ಡ್ರಾಮಾ ಮತ್ತೆ ತೆರೆಗೆ ಬರಲಿದೆ’ ಎಂದು ಧರ್ಮಣ್ಣ ಹೇಳಿದ್ದಾರೆ.

ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸ ಗೌಡ, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಷಯ್ ರಿಷಭ್ ಸಂಗೀತ ನಿರ್ದೇಶನ, ವಿಷ್ಣುಪ್ರಸಾದ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಅವರ ಸಂಕಲನದಲ್ಲಿ ‘ರಾಜಯೋಗ’ ಸಿನಿಮಾ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.