ಮೈಸೂರಿನಲ್ಲಿ ಫಿಲ್ಮ್ ಸಿಟಿ (Film City in Mysore) ನಿರ್ಮಾಣ ಆಗಬೇಕು ಎಂಬುದು ಚಂದನವನದ ಕಲಾವಿದರು, ನಿರ್ಮಾಪಕರು ಮತ್ತು ತಂತ್ರಜ್ಞರ ಬಹುವರ್ಷಗಳ ಬೇಡಿಕೆ. ಕನ್ನಡ ಚಿತ್ರರಂಗದ (Sandalwood) ಲೆಜೆಂಡರಿ ನಟರಾದ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಕನಸು ಕೂಡ ಇದೇ ಆಗಿತ್ತು. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎಂದು ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (SV Rajendra Singh Babu) ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಲಾಗಿದೆ. ಈ ಪತ್ರದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಹಿ ಮಾಡಿರುವುದು ವಿಶೇಷ.
ಕನ್ನಡ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ. ಆದರೆ ಇಂದಿಗೂ ಕನ್ನಡಿಗರು ಸಿನಿಮಾ ನಿರ್ಮಾಣದ ಕೆಲವು ಚಟುವಟಿಕೆಗಳ ಸಲುವಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅದರ ಬದಲು ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣವಾದರೆ ಹೆಚ್ಚು ಅನುಕೂಲ ಆಗುತ್ತದೆ. ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ಚಿತ್ರರಂಗದ ಮಂದಿಗೆ ಅಚ್ಚುಮೆಚ್ಚಿನ ತಾಣ. ಪ್ರವಾಣಿ ಸ್ಥಳವಾಗಿರುವ ಈ ಊರಿನ ಆಸುಪಾಸು ಅಂದಾಜು 250ಕ್ಕೂ ಅಧಿಕ ಪ್ರೇಕ್ಷಣೀಯ ಸ್ಥಳಗಳಿವೆ. ಇಂತಹ ಪರಂಪರೆ ಇರುವ ಐತಿಹಾಸಿಕ ನಗರಿಯಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕೆಂಬುದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಭಾಷೆಯ ಸೆಲೆಬ್ರಿಟಿಗಳ ಅಭಿಪ್ರಾಯ ಕೂಡ ಹೌದು.
ಇದನ್ನೂ ಓದಿ: Basavaraj Bommai: ಮಾರ್ಚ್ ಮೊದಲ ವಾರದಲ್ಲಿ ಅಂಬರೀಷ್ ಸ್ಮಾರಕ ಉದ್ಘಾಟನೆ: ಸಿಎಂ ಬಸವರಾಜ ಬೊಮ್ಮಾಯಿ
ಈ ಹಿಂದೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿತ್ತು. ಆಗ ಹಲವು ವಿಷಯಗಳನ್ನು ಚರ್ಚಿಸಲಾಗಿತ್ತು. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬ ವಿಷಯವನ್ನು ಕೂಡ ಅದರಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕುರಿತು ರಿಪೋರ್ಟ್ ಸಿದ್ಧ ಮಾಡಿಕೊಡುವಂತೆ ಸಿಎಂ ಹೇಳಿದ್ದರು.
ರಾಜೇಂದ್ರ ಸಿಂಗ್ ಬಾಬು ಹಾಗೂ ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಇಂದು (ಫೆ.9) ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿದೆ. ಮನವಿ ಪತ್ರಕ್ಕೆ ಶಿವರಾಜ್ಕುಮಾರ್, ರಾಕ್ ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ ಸೇರಿದಂತೆ 20ಕ್ಕೂ ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ನಟರಾದ ಧರ್ಮೇಂದ್ರ, ಹೇಮಾ ಮಾಲಿನಿ ಕೂಡ ಸಹಿ ಮಾಡಿ, ಒಂದು ಲೆಟರ್ ಕಳುಹಿಸಿದ್ದಾರೆ.
‘ಧರ್ಮೇಂದ್ರ ಅವರಿಗೂ ಮೈಸೂರು ಅಚ್ಚುಮೆಚ್ಚು. ಅವರ ವೃತ್ತಿಜೀವನ ಆರಂಭವಾಗಿದ್ದೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ’ ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ನಟರು ಮತ್ತು ತಂತ್ರಜ್ಞರಿಗೂ ಮೈಸೂರು ಮೆಚ್ಚಿನ ತಾಣ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Thu, 9 February 23