TSAFF2021: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡದ ‘ನಾನು ಲೇಡೀಸ್’
Naanu Ladies: ಕನ್ನಡದ ‘ನಾನು ಲೇಡೀಸ್’ ಚಿತ್ರವು ಅಮೇರಿಕಾದ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಕನ್ನಡದಲ್ಲಿ ಇದುವರೆಗೆ ಹೇಳದೇ ಉಳಿದ ಕತೆಗಳನ್ನು ಜನರಿಗೆ ಮುಟ್ಟಿಸಲು ಈಗಿನ ತಲೆಮಾರಿನ ಚಲನಚಿತ್ರ ನಿರ್ದೇಶಕರು ಮುಂದಾಗುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ‘ನಾನು ಲೇಡೀಸ್’(Naanu Ladies). ಸ್ಯಾಂಡಲ್ವುಡ್ ಇತಿಹಾಸದಲ್ಲೇ ಮೊದಲ ಲೆಸ್ಬಿಯನ್ ಸಂವೇದನೆಯುಳ್ಳ ಚಿತ್ರ ಇದು ಎನ್ನುವುದು ವಿಶೇಷ. ಚಿತ್ರದ ಗಟ್ಟಿತನಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ 16ನೇ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವದಲ್ಲಿ(Tasveer South Asian Film Festival) ಅಕ್ಟೋಬರ್ 1ರಿಂದ ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನು ಶೈಲಜಾ ಪಡಿಂಡಾಲ(Shailaja Padindala) ನಿರ್ದೇಶನ ಮಾಡಿದ್ದಾರೆ.
ಐದು ವರ್ಷದ ಕೆಳಗೆ ಶೈಲಜಾ ಅವರು ‘ಮೆಮೋರೀಸ್ ಆಫ್ ಮೆಷೀನ್’ ಎಂಬ ಕಿರುಚಿತ್ರವನ್ನು ಮಾಡಿದ್ದರು. ಆ ಚಿತ್ರ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಜೊತೆಗೆ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಈ ಬಾರಿ ಕನ್ನಡಕ್ಕೆ ಅಪರೂಪವಾದ ಕಥಾ ಎಳೆಯನ್ನು ಶೈಲಜಾ ಹೇಳಲು ಹೊರಟಿದ್ದಾರೆ. ಚಿತ್ರದ ಕುರಿತು ತಸ್ವೀರ್ ಫಿಲ್ಮ್ ಫೆಸ್ಟಿವಲ್ನ ಸ್ಥಾಪಕಿ ರೀಟಾ ಮೆಹರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೊಂದು ಸುಂದರ ಪ್ರೇಮಕಥೆ ಎಂದಿದ್ದಾರೆ.
ಚಿತ್ರದ ಟ್ರೈಲರ್ ಇಲ್ಲಿದೆ:
ಈ ಚಿತ್ರವು ಭಾರತೀಯ ಕೌಟುಂಬಿಕತೆಯನ್ನು ಚರ್ಚೆಗೊಳಪಡಿಸಿರುವದರ ಜೊತೆಗೆ ಸಾಂಗತ್ಯ, ಪೋಷಕತನ, ಶಿಕ್ಷಣ ವ್ಯವಸ್ಥೆ ಮೊದಲಾದವುಗಳನ್ನು ಡಾರ್ಕ್ ಕಾಮಿಡಿ ರೂಪದಲ್ಲಿ ಚರ್ಚಿಸಲಿದೆ. ಇದು ಕನ್ನಡ ನೆಲಕ್ಕೆ ವಿನೂತನ ಪ್ರಯತ್ನವಾಗಿದೆ. ಚಿತ್ರದಲ್ಲಿ ಸ್ವತಃ ಶೈಲಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೇದಿನಿ ಕೆಳಮನೆ, ಗುರು ಸೋಮಸುಂದರಮ್ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ:
ಜಾಹೀರಾತಿಗೆ ಮೂರು ಕೋಟಿ ರೂ. ಮಾಸ್ಕ್ ಧರಿಸಿದ್ದ ಊರ್ವಶಿ ರೌಟೆಲಾ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾಳೆ!
ಅರೇ! ಇದರಲ್ಲಿ ವಿಜಯ್ ಯಾರು?; ಖ್ಯಾತ ನಟನನ್ನೇ ಹೋಲುವ ಯುವಕನನ್ನು ನೋಡಿ ಅಚ್ಚರಿಗೊಂಡ ಅಭಿಮಾನಿಗಳು
(Kannada film Naanu Ladies directed by Shailaja Padindala selected for 16th Tasveer South Asian Film Festival)