ವಿರೋಧದ ನಡುವೆಯೂ ‘ಕಾಂತಾರ’ ಪರ ನಿಂತ ಪವನ್ ಕಲ್ಯಾಣ್: ಹೇಳಿದ್ದೇನು?
Kantara Chapter 1 ticket price: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಕರ್ನಾಟಕದಲ್ಲಿ ಸಿನಿಮಾದ ಟಿಕೆಟ್ ದರ ಹೆಚ್ಚಳ ಆಗುವುದು ಖಾತ್ರಿ ಆಗಿದೆ. ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿಯೂ ಸಹ ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ವಿರೋಧದ ನಡುವೆಯೂ ಸ್ವತಃ ಪವನ್ ಕಲ್ಯಾಣ್ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಇನ್ನೊಂದು ದಿನವಷ್ಟೆ ಬಾಕಿ ಇದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿ ಸರ್ಕಾರ ಆದೇಶ ಹೊರಡಿಸಿತ್ತು, ಆದರೆ ‘ಕಾಂತಾರ: ಚಾಪ್ಟರ್ 1’ ನಿರ್ಮಿಸಿರುವ ಹೊಂಬಾಳೆ ಫಿಲಮ್ಸ್, ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆ ತಂದಿದ್ದು, ರಾಜ್ಯದಲ್ಲಿ ಹೆಚ್ಚುವರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲು ಸಜ್ಜಾಗಿದೆ. ಅದರ ಬೆನ್ನಲ್ಲೆ ಈಗ ನೆರೆಯ ಆಂಧ್ರ ಪ್ರದೇಶದಲ್ಲೂ ಸಹ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ದೊರೆತಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾಗಳ ಟಿಕೆಟ್ ದರ ಹೆಚ್ಚು ಮಾಡಬೇಕೆಂದರೆ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಅಂತೆಯೇ ‘ಕಾಂತಾರ: ಚಾಪ್ಟರ್ 1’ ನಿರ್ಮಾಪಕರು ಸರ್ಕಾರಕ್ಕೆ ಮನವಿ ಸಲ್ಲಿಸಿ ಟಿಕೆಟ್ ದರವನ್ನು ಹೆಚ್ಚು ಮಾಡಿಸಿಕೊಂಡಿದ್ದಾರೆ. ವಿರೋಧದ ನಡುವೆಯೂ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೇ ಈಗ ‘ಕಾಂತಾರ’ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.
ಪರ ಭಾಷೆಯ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂಬ ಒತ್ತಾಯ ಈ ಮೊದಲಿಂದಲೂ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಕರ್ನಾಟಕದಲ್ಲಿ ಬಿಡುಗಡೆ ಆಗುವ ಪರ ಭಾಷೆಯ ಸಿನಿಮಾಗಳಿಗೆ ಕನ್ನಡಪರ ಸಂಘಟನೆಗಳು ಪ್ರತಿರೋಧ ತೋರಿದ್ದನ್ನು ಕಾರಣವಾಗಿ ಇರಿಸಿಕೊಂಡು ಕನ್ನಡ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಬಾರದು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಅದನ್ನೆಲ್ಲ ಬದಿಗಿ ಸರಿಸಿ ಪವನ್ ಕಲ್ಯಾಣ್ ಅವರು ‘ಕಾಂತಾರ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ:ದಳಪತಿ ದೆಸೆಯಿಂದ ರದ್ದಾಯ್ತು ‘ಕಾಂತಾರ: ಚಾಪ್ಟರ್ 1’ ಅದ್ಧೂರಿ ಪ್ರೀ ರಿಲೀಸ್
ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪವನ್ ಕಲ್ಯಾಣ್, ‘ಸಿನಿಮಾಗಳು ಜೋಡಿಸುವ ಕಾರ್ಯವನ್ನು ಮಾಡಬೇಕು, ಮುರಿಯುವ ಕಾರ್ಯವನ್ನು ಮಾಡಬಾರದು. ಕರ್ನಾಟಕದ ಸಿನಿಮಾಗಳು, ಕಲಾವಿದರನ್ನು ನಾವು ದಶಕಗಳಿಂದಲೂ ಸ್ವಾಗತಿಸಿದ್ದೇವೆ. ಡಾ ರಾಜ್ಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಈಗ ರಿಷಬ್ ಶೆಟ್ಟಿ. ಇನ್ನು ತೆಲುಗು ಸಿನಿಮಾಗಳಿಗೆ ಅಲ್ಲಿ ಸಮಸ್ಯೆ ಆಗಿದೆ ಎಂಬ ವಿಚಾರವನ್ನೂ ಎರಡೂ ಚಿತ್ರರಂಗದವರು ಒಟ್ಟಾಗಿ ಕೂತು ಬಗೆಹರಿಸಿಕೊಳ್ಳುವ ವಿಷಯ’ ಎಂದಿದ್ದಾರೆ ಪವನ್ ಕಲ್ಯಾಣ್.
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’, ಇತ್ತೀಚೆಗೆ ಬಿಡುಗಡೆ ಆದ ‘ಓಜಿ’ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಇನ್ನೂ ಕೆಲವು ಸಿನಿಮಾಗಳು ಬೆಂಗಳೂರಿನಲ್ಲಿ ಬಿಡುಗಡೆ ಆದಾಗ, ಆ ಸಿನಿಮಾಗಳ ಪೋಸ್ಟರ್ಗಳಲ್ಲಿ ಕನ್ನಡ ಇಲ್ಲ ಎಂದು ಆಕ್ಷೇಪಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಪೋಸ್ಟರ್ಗಳನ್ನು ಹರಿದಿದ್ದರು. ಇದೇ ಕಾರಣಕ್ಕೆ ಆಂಧ್ರ-ತೆಲಂಗಾಣಗಳಲ್ಲಿ ಕನ್ನಡ ಸಿನಿಮಾಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯ ಕೇಳಿ ಬಂದಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Tue, 30 September 25




