ಕರಾವಳಿ ಭಾಗದವರಿಗೆ ಸಿಹಿ ಸುದ್ದಿ; ತುಳು ಭಾಷೆಯಲ್ಲೂ ರಿಲೀಸ್ ಆಗಲಿದೆ ‘ಕಾಂತಾರ’ ಸಿನಿಮಾ
‘ಕಾಂತಾರ’ ಸಿನಿಮಾಗೂ ತುಳುನಾಡಿಗೂ ಸಂಬಂಧ ಇದೆ. ತುಳುನಾಡಿನಲ್ಲಿ ಆಚರಣೆಯಲ್ಲಿರುವ ದೈವಾರಾಧನೆಯ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ (Kantara Movie) ಮಾಡಿದ ಮೋಡಿ ತುಂಬಾನೇ ದೊಡ್ಡದು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿದೆ. ಸಿನಿಮಾ ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದರೂ ಚಿತ್ರದ ಅಬ್ಬರ ಕಡಿಮೆ ಆಗಿಲ್ಲ. ಈ ಸಿನಿಮಾ ಬಗ್ಗೆ ನಿತ್ಯ ಒಂದಿಲ್ಲೊಂದು ಅಪ್ಡೇಟ್ ಸಿಗುತ್ತಲೇ ಇದೆ. ಈಗ ‘ಕಾಂತಾರ’ ಸಿನಿಮಾ ತುಳುವಿನಲ್ಲಿ ರಿಲೀಸ್ ಆಗಲಿದೆ ಎಂಬ ವಿಚಾರ ಹೊರಬಿದ್ದಿದೆ.
‘ಕಾಂತಾರ’ ಸಿನಿಮಾಗೂ ತುಳುನಾಡಿಗೂ ಸಂಬಂಧ ಇದೆ. ತುಳುನಾಡಿನಲ್ಲಿ ಆಚರಣೆಯಲ್ಲಿರುವ ದೈವಾರಾಧನೆಯ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಚಿತ್ರದ ಹೈಲೈಟ್ ಕೂಡ ಹೌದು. ಸಿನಿಮಾದ ಮೈಲೇಜ್ ಹೆಚ್ಚಲು ಸಿನಿಮಾದಲ್ಲಿ ತೋರಿಸಿರುವ ದೈವಗಳ ವಿಚಾರವೂ ಕೂಡ ಪ್ರಮುಖವಾಗಿದೆ. ಈಗ ‘ಕಾಂತಾರ’ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗುತ್ತಿದೆ. ಈ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಖಚಿತಪಡಿಸಿದ್ದಾರೆ.
ಇಡೀ ಸಿನಿಮಾದ ಕಥೆ ಸಾಗೋದು ತುಳುನಾಡಿನಲ್ಲಿ. ಸಿನಿಮಾದ ಕೆಲ ದೃಶ್ಯಗಳಲ್ಲಿ ತುಳು ಭಾಷೆ ಕೂಡ ಬಳಕೆ ಆಗಿದೆ. ತುಳುನಾಡಿನ ವಿಚಾರಗಳನ್ನು ಹೇಳುವ ಈ ಚಿತ್ರವನ್ನು ತುಳುವಿನಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ನಲ್ಲಿ ಚಿತ್ರತಂಡ ಇದೆ. ಸದ್ಯ, ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ತುಳುವಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರ ಕೇಳಿ ಕರಾವಳಿ ಮಂದಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಹಿಂದಿಯಲ್ಲಿ 70 ಕೋಟಿ ರೂಪಾಯಿ ಗಡಿ ಮುಟ್ಟಿದ ‘ಕಾಂತಾರ’ ಕಲೆಕ್ಷನ್
ಒಟಿಟಿ ವಿಚಾರದಲ್ಲೂ ‘ಕಾಂತಾರ’ ಸಿನಿಮಾ ಸುದ್ದಿಯಲ್ಲಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ಮೊದಲು ಮಾಡಿಕೊಂಡ ಒಪ್ಪಂದದ ಪ್ರಕಾರ ನವೆಂಬರ್ 18ಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಥಿಯೇಟರ್ನಲ್ಲಿ ಸಿನಿಮಾ ಇನ್ನೂ ಅಬ್ಬರಿಸುತ್ತಿರುವುದರಿಂದ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ವಿಳಂಬವಾಗುತ್ತಿದೆ ಎನ್ನಲಾಗಿದೆ. ನವೆಂಬರ್ ಅಂತ್ಯಕ್ಕೆ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಮನೆಯಲ್ಲೇ ಕುಳಿತು ಸಿನಿಮಾ ನೋಡಬೇಕು ಎಂದುಕೊಂಡವರು ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ.
Published On - 7:26 pm, Tue, 15 November 22