ನಟಿ ಕರೀನಾ ಕಪೂರ್ ಖಾನ್ ಅವರು ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಗಾಸಿಪ್ ಹರಡಿತ್ತು. ಆದರೆ ಇತ್ತೀಚೆಗೆ ಕೇಳಿಬಂದ ಗುಸುಗುಸು ಪ್ರಕಾರ, ಅವರು ಈ ಚಿತ್ರತಂಡದಿಂದ ಹೊರನಡೆದಿದ್ದಾರಂತೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅದರ ಬೆನ್ನಲ್ಲೇ ಕರೀನಾ ಕಪೂರ್ ಖಾನ್ (Kareena Kapoor Khan) ಅವರು ಮಾರ್ಮಿಕವಾಗಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಬಳಿಕ, ಯಶ್ (Yash) ಜೊತೆ ಕರೀನಾ ನಟಿಸುವುದು ಬಹುತೇಕ ಅನುಮಾನ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
ಕರೀನಾ ಕಪೂರ್ ಅವರಿಗೆ ಸಖತ್ ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ ‘ಕ್ರೂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಹಾಗಾಗಿ ಅವರು ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಕೇಳಿರಬಹುದು. ಅದನ್ನು ಕೊಡಲು ಚಿತ್ರತಂಡ ಒಪ್ಪಿಲ್ಲ ಎನಿಸುತ್ತದೆ. ಅದೇ ಕಾರಣದಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಅನುಮಾನ ಮೂಡಿದೆ.
‘ಪದೇ ಪದೇ ಕಾಣಿಸಿಕೊಳ್ಳಬೇಕು ಎಂಬ ಆಸೆ ನನಗೆ ಇಲ್ಲ. ಕಣ್ಣಿಗೆ ಕಾಣದಂತೆ ಇರಬೇಕು, ತಲುಪಲು ಕಷ್ಟವಾಗುವಂತೆ ಇರಬೇಕು ಮತ್ತು ಸಂಭಾವನೆ ಪಡೆಯಬೇಕು’ ಎಂಬ ಸಾಲುಗಳನ್ನು ಕರೀನಾ ಕಪೂರ್ ಖಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗಾಗಿ ‘ಟಾಕ್ಸಿಕ್’ ಚಿತ್ರತಂಡದ ಜೊತೆಗಿನ ಸಂಭಾವನೆ ವಿಚಾರವಾಗಿಯೇ ಕರೀನಾ ಕಪೂರ್ ಅವರಿಗೆ ಭಿನ್ನಾಭಿಪ್ರಾಯ ಮೂಡಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ನಯನತಾರಾ?
ಕರೀನಾ ಕಪೂರ್ ಖಾನ್ ಅವರು ‘ಟಾಕ್ಸಿಕ್’ ಸಿನಿಮಾ ತಂಡಕ್ಕೆ ಗುಡ್ಬೈ ಹೇಳಿದ ಬಳಿಕ ನಟಿ ನಯನಾತಾರಾ ಅವರಿಗೆ ಆಫರ್ ನೀಡಲಾಗಿದೆ ಎಂಬ ಗುಸುಗುಸು ಹಬ್ಬಿದೆ. ಇದೆಲ್ಲ ನಿಜವೋ ಅಲ್ಲವೋ ಎಂಬ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಹೇಳಕೆ ನೀಡಬೇಕಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾಗೆ ಗೀತು ಮೂಹನ್ದಾಸ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:18 pm, Thu, 9 May 24