ಸೆಸ್ ಹೇರಿದ ಸರ್ಕಾರ: ಸೆ. 30ರಿಂದ ಸಿನಿಮಾ ಟಿಕೆಟ್ ದುಬಾರಿ

ಕರ್ನಾಟಕದಲ್ಲಿ ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್ ದರಗಳು ಏರಿಕೆ ಆಗಲಿವೆ. ಕರ್ನಾಟಕ ಸರ್ಕಾರವು ಪ್ರತಿ ಸಿನಿಮಾ ಟಿಕೆಟ್ ಮೇಲೆ 2 ಪರ್ಸೆಂಟ್ ಸೆಸ್ ಹೇರಿಕೆ ಮಾಡಿದೆ. ‘ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ 2024’ ಅಡಿಯಲ್ಲಿ ಸಿನಿಮಾ ಮತ್ತು ಇತರೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ ಹಾಗೂ ಇನ್ನಿತರೆ ಕಾರ್ಯಗಳಿಗೆ ಬಳಸಲೆಂದು ಈ ಸೆಸ್ ವಿಧಿಸಲಾಗಿದೆ.

ಸೆಸ್ ಹೇರಿದ ಸರ್ಕಾರ: ಸೆ. 30ರಿಂದ ಸಿನಿಮಾ ಟಿಕೆಟ್ ದುಬಾರಿ
Movie Ticket

Updated on: Sep 18, 2026 | 11:36 PM

ಸಿನಿಮಾ ಟಿಕೆಟ್ ಈಗಾಗಲೇ ದುಬಾರಿ ಆಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ನಿಯಂತ್ರಣವೇ ಇಲ್ಲದಾಗಿದ್ದು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆ ಬಹಳ ಹೆಚ್ಚಿದೆ. ಇದರ ನಡುವೆ ಸರ್ಕಾರ ಇದೀಗ ಬೆಲೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸರ್ಕಾರದ ಹೊಸ ಅಧಿಸೂಚನೆಯಂತೆ ಸಿನಿಮಾ ಟಿಕೆಟ್​​ ಮೇಲೆ ಶೇ 2 ಸೆಸ್ ಹೆಚ್ಚಳ ಮಾಡಿದ್ದು, ಇದರಿಂದ ಸಿನಿಮಾ ಟಿಕೆಟ್ ದರ ಏರಿಕೆ ಆಗಲಿದೆ. ಸೆಪ್ಟೆಂಬರ್ 30ರಿಂದ ಈ ಸೆಸ್ ಜಾರಿ ಆಗಲಿದ್ದು, ಆಗಿನಿಂದ ಟಿಕೆಟ್ ದರ ಹೆಚ್ಚಳ ಆಗಲಿದೆ.

‘ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ 2024’ ಅಡಿಯಲ್ಲಿ ಸಿನಿಮಾ ಮತ್ತು ಇತರೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ ಹಾಗೂ ಇನ್ನಿತರೆ ಕಾರ್ಯಗಳಿಗೆ ಬಳಸಲೆಂದು ಈ ಸೆಸ್ ವಿಧಿಸಲಾಗಿದೆ. ಸೆಸ್​ನಿಂದ ಸಂಗ್ರಹವಾಗುವ ಹಣವನ್ನು ಸಿನಿಮಾ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.

2024ರಲ್ಲಿಯೇ ಈ ಕಾಯ್ದೆಯು ಶಾಸನ ಸಭೆಯಲ್ಲಿ ಮಂಡನೆ ಆಗಿ ರಾಜ್ಯಪಾಲರ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ ಅನುಷ್ಠಾನ ಆಗಿರಲಿಲ್ಲ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​​ ಈ ಕಾಯ್ದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಇದೀಗ ಕಾಯ್ದೆ ಅನುಷ್ಠಾನಗೊಳ್ಳಲಿದೆ. ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್ ಮೇಲೆ 2% ಹೆಚ್ಚುವರಿ ಸೆಸ್ ಬೀಳಲಿದೆ.

ಇದನ್ನೂ ಓದಿ:ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ

1 ಅಥವಾ 2 ಪ್ರತಿಶತ ಸೆಸ್ ಸಂಗ್ರಹಿಸಲು ಅವಕಾಶ ಇದೆ. ಸರ್ಕಾರವು ಗರಿಷ್ಠ ಮಿತಿಯನ್ನೇ ಹೇರಿಕೆ ಮಾಡಿದೆ. ಟಿಕೆಟ್ ಮೇಲೆ ಮಾತ್ರವೇ ಅಲ್ಲದೆ, ಮಲ್ಟಿಪ್ಲೆಕ್ಸ್​​ಗಳು ವಾರ್ಷಿಕವಾಗಿ ಗಳಿಸುವ ಒಟ್ಟಾರೆ ಲಾಭದ ಮೇಲೂ ಸಹ ಸೆಸ್ ವಿಧಿಸಲಾಗಿದೆ. ಸೆಸ್ ಹೇರಿಕೆ ನೇರವಾಗಿ ಪ್ರೇಕ್ಷಕನ ಮೇಲೆ ಹೊರೆಯಾಗಿ ಬೀಳಲಿದ್ದು, ಕರ್ನಾಟಕದಲ್ಲಿ ಈಗ ಸಿನಿಮಾ ಟಿಕೆಟ್ ದರದ ಮೇಲೆ ಯಾವುದೇ ಹಿಡಿತ ಇಲ್ಲ. ಮಲ್ಟಿಪ್ಲೆಕ್ಸ್​ಗಳು, ನಿರ್ಮಾಪಕರು, ವಿತರಕರು ನಿರ್ಧರಿಸಿದಷ್ಟು ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಈಗ ತಮ್ಮ ಪಾಲಿನ ಸೆಸ್ ದರವನ್ನು ಮಲ್ಟಿಪ್ಲೆಕ್ಸ್​​ಗಳು ಪ್ರೇಕ್ಷಕರ ಮೇಲೆಯೇ ಹೇರುವುದು ಖಾತ್ರಿ.

ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ, ‘2% ಸೆಸ್ ಗೆ ವಾಣಿಜ್ಯ ಮಂಡಳಿ ವಿರೋಧ ಇತ್ತು, 2 ಪ್ರತಿಷತ ಸೆಸ್ ಸಣ್ಣ ಮೊತ್ತ ಅಲ್ಲ, ಸುಮಾರು 200 ಕೋಟಿ ವರ್ಷಕ್ಕೆ ಸಂಗ್ರಹ ಆಗುತ್ತದೆ. ನಮ್ಮ ಕಾರ್ಮಿಕರು 60 ವರ್ಷ ಆದಮೇಲೆ ಏನು ಕೊಡಲ್ಲ ಅನ್ನಲಾಗುತ್ತಿದೆ. ನಾವು ಕಷ್ಟ ಪಟ್ಟಿದ್ದು ನಾವು ಯಾಕೆ ಅಸಂಘಟಿತ ಕಾರ್ಮಿಕರಿಗೆ ಕೊಡ್ಬೇಕು? ಹಾಫ್ ಪರ್ಸೆಂಟ್ ಕಾರ್ಮಿಕರಿಗೆ ಕೊಡಿ ಇನ್ನು ಉಳಿದದ್ದು ವಾರ್ತೆ ಇಲಾಖೆಗೆ ಕೊಡಿ ಅಂತ ಬೇಡಿಕೆ ಇಟ್ಟಿದ್ದೆವು. ನಮ್ಮ ಹತ್ರ ದುಡಿಸಿಕೊಂಡು ನಮ್ಮ ದುಡ್ಡನ್ನ ಮೂರನೇ ಅವರಿಗೆ ಯಾಕೆ ಕೊಡ್ಬೇಕು? ನಮ್ಮ ದುಡ್ಡನ್ನ ನಮ್ಮ ಕಾರ್ಮಿಕರಗೆ ಕೊಡಿ, ಚಿತ್ರದ್ಯಮಕ್ಕೆಕೊಡ್ಬೇಕು. ನಮ್ಮಿಂದ, ಜನರಿಂದ ಸಂಗ್ರಹ ಮಾಡಿ ಕಾರ್ಮಿಕರಿಗೆ ಯಾಕೆ ಕೊಡಬೇಕು? ಸರ್ಕಾರದ ಈ ನಿರ್ಧಾರ ನಮಗೆ ತುಂಬಾ ಬೇಸರ ತಂದಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Fri, 18 September 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us