ನಟ ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರ ಕಾಲ್ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕ್ಯೂನಲ್ಲಿ ನಿಂತಿವೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆದ ಬಳಿಕ ಯಶ್ ಅವರ ಡಿಮ್ಯಾಂಡ್ ಹೆಚ್ಚಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅವರ ಹವಾ ಜೋರಾಗಿದೆ. ಆದರೆ 14 ವರ್ಷಗಳ ಹಿಂದೆ ಕಹಾನಿ ಹೀಗೆ ಇರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ಆಗತಾನೇ ಕಾಲಿಟ್ಟಿದ್ದರು. ಯಶ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಮೊಗ್ಗಿನ ಮನಸು’ (Moggina Manasu) ತೆರೆಕಂಡು ಇಂದಿಗೆ (ಜುಲೈ 18) ಬರೋಬ್ಬರಿ 14 ವರ್ಷ ಕಳೆದಿದೆ. ಯಶ್ ಪಾಲಿಗೆ ಈ ದಿನ ತುಂಬ ವಿಶೇಷ ಈ ದಿನವನ್ನು ‘ರಾಕಿಂಗ್ ಸ್ಟಾರ್’ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಬೆಳೆದು ಬಂದವರು ಯಶ್. ಅನೇಕ ಕಲಾವಿದರಿಗೆ ಅವರೇ ಮಾದರಿ. ಮೊದಲು ಸೀರಿಯಲ್ಗಳಲ್ಲಿ ನಟಿಸಿ, ನಂತರ ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದು ನಿಲ್ಲುವುದು ಎಂದರೆ ಸಣ್ಣ ಮಾತಲ್ಲ. ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಅವರು ಈ ಸಾಧನೆ ಮಾಡಿದ್ದಾರೆ. ಹೀರೋ ಆಗಿ ಅವರ ಸಿನಿಮಾ ಪಯಣಕ್ಕೆ 14 ವರ್ಷ ತುಂಬಿದೆ. ಅದಕ್ಕಾಗಿ ಎಲ್ಲರೂ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.
2008ರ ಜುಲೈ 18ರಂದು ತೆರೆಕಂಡ ‘ಮೊಗ್ಗಿನ ಮನಸು’ ಚಿತ್ರದಿಂದ ಯಶ್ ಅವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೀರೋ ಆಗಿ ಪರಿಚಯಗೊಂಡರು. ಮೊದಲ ಸಿನಿಮಾದಲ್ಲೇ ಅವರು ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿದರು. ಆ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್. ಅವರಿಗೂ ಅದು ಮೊದಲ ಸಿನಿಮಾ ಎಂಬುದು ವಿಶೇಷ. ಬಳಿಕ ರಿಯಲ್ ಲೈಫ್ನಲ್ಲಿಯೂ ಅವರಿಬ್ಬರು ಜೋಡಿಯಾದರು. ಗಲ್ಲಾಪೆಟ್ಟಿಗೆಯಲ್ಲಿ ‘ಮೊಗ್ಗಿನ ಮನಸು’ ಗೆಲುವು ಕಂಡಿತು. ನಂತರ ಏಳು-ಬೀಳಿನ ಹಾದಿಯಲ್ಲಿ ಸಾಗಿ ಬಂದ ಯಶ್ ಅವರು ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
Congratulations to self made pan India star @TheNameIsYash for completing 14 years of fantastic career in film industry. Salute to your hard work & perseverance through out the journey. You have been an inspiration for many & role model for millions.
14 YEARS OF YASHISM pic.twitter.com/GrrdR2mbb2
— Manobala Vijayabalan (@ManobalaV) July 17, 2022
‘ಮೊಗ್ಗಿನ ಮನಸು’ ಚಿತ್ರಕ್ಕೆ ಶಂಶಾಕ್ ನಿರ್ದೇಶನ ಮಾಡಿದ್ದರು. ಯಶ್, ರಾಧಿಕಾ ಪಂಡಿತ್ ಮಾತ್ರವಲ್ಲದೇ ಶುಭಾ ಪೂಂಜಾ, ಮಾನಸಿ, ರಾಜೇಶ್ ನಟರಂಗ ಮುಂತಾದವರು ಅಭಿನಯಿಸಿದ್ದರು. 14 ವರ್ಷ ಕಳೆಯುವುದರೊಳಗೆ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ಸದ್ಯಕ್ಕಂತೂ ಯಾರೂ ಮುರಿಯದ ದಾಖಲೆಯನ್ನು ಅವರು ಬರೆದಿದ್ದಾರೆ.
Published On - 12:24 pm, Mon, 18 July 22