ಡಿಸೆಂಬರ್​ನಿಂದ ‘ಕೆಜಿಎಫ್ 3’ ಶೂಟಿಂಗ್; ಸಿನಿಮಾ ರಿಲೀಸ್ ಬಗ್ಗೆಯೂ ಮಾಹಿತಿ ನೀಡಿದ ವಿಜಯ್ ಕಿರಗಂದೂರು

ಡಿಸೆಂಬರ್​ನಿಂದ ‘ಕೆಜಿಎಫ್ 3’ ಶೂಟಿಂಗ್; ಸಿನಿಮಾ ರಿಲೀಸ್ ಬಗ್ಗೆಯೂ ಮಾಹಿತಿ ನೀಡಿದ ವಿಜಯ್ ಕಿರಗಂದೂರು
ಯಶ್

ಪ್ರಶಾಂತ್ ನೀಲ್ ಪರ್ಫೆಕ್ಷನಿಸ್ಟ್. ಹೀಗಾಗಿ, ಅವರು ಸಿನಿಮಾ ಮಾಡೋಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ‘ಕೆಜಿಎಫ್ 3’ಗೂ ಅವರು ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ.

TV9kannada Web Team

| Edited By: Rajesh Duggumane

May 14, 2022 | 2:57 PM

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF: Chapter 2) ಕೊನೆಯಲ್ಲಿ ‘ಕೆಜಿಎಫ್ 3’ ಬಗ್ಗೆ ಸೂಚನೆ ಸಿಕ್ಕಿತ್ತು. ಸದ್ಯ, ಪ್ರಶಾಂತ್​ ನೀಲ್ ಅವರು ‘ಸಲಾರ್’ ಸಿನಿಮಾ (Salaar Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಾದ ಬಳಿಕ ಅವರು ಜ್ಯೂ.ಎನ್​ಟಿಆರ್ ಜತೆ ಸಿನಿಮಾ ಮಾಡಲಿದ್ದಾರೆ. ಯಶ್ ಕೂಡ ಬೇರೆ ನಿರ್ದೇಶಕರ ಜತೆ ಕೈ ಜೋಡಿಸಲಿದ್ದಾರೆ. ಹೀಗಾಗಿ, ಅವರಿಗೆ ‘ಕೆಜಿಎಫ್ 3’ ಮಾಡೋಕೆ ಸಮಯಾವಕಾಶ ಸಿಗುವುದಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಮೂರನೇ ಚಾಪ್ಟರ್ ಬರುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈ ಊಹೆ ತಪ್ಪಾಗಿದೆ. ‘ಕೆಜಿಎಫ್’ ಸರಣಿಯ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು (Vijay Kiragandur) ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ದೈನಿಕ್ ಭಾಸ್ಕರ್’​ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ‘ಕೆಜಿಎಫ್ 3’ ಕುರಿತು ಮಾಹಿತಿ ನೀಡಿದ್ದಾರೆ. ಬಿಸಿಬಿಸಿ ಅಪ್​ಡೇಟ್ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪ್ರಶಾಂತ್ ನೀಲ್ ಪರ್ಫೆಕ್ಷನಿಸ್ಟ್. ಹೀಗಾಗಿ, ಅವರು ಸಿನಿಮಾ ಮಾಡೋಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ‘ಕೆಜಿಎಫ್ 3’ಗೂ ಅವರು ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ.

‘ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಶೇ. 30-35 ಚಿತ್ರೀಕರಣ ಮುಗಿದಿದೆ. ಮುಂದಿನ ಶ್ಯೆಡ್ಯೂಲ್ ಮುಂದಿನ ವಾರ ಆರಂಭವಾಗಲಿದೆ. ಈ ವರ್ಷ ಅಕ್ಟೋಬರ್-ನವೆಂಬರ್ ವೇಳೆಗೆ ಶೂಟಿಂಗ್ ಪೂರ್ಣಗೊಳ್ಳಲಿದೆ. ಆ ಬಳಿಕ ‘ಕೆಜಿಎಫ್ 3’ ಶೂಟಿಂಗ್ ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. 2024ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಆಶಯ ಇದೆ’ ಎಂದಿದ್ದಾರೆ ವಿಜಯ್​ ಕಿರಗಂದೂರು.

‘ನಾವು ಮಾರ್ವೆಲ್ ರೀತಿಯ ವಿಶ್ವವನ್ನು ರಚಿಸಲಿದ್ದೇವೆ. ಬೇರೆಬೇರೆ ಸಿನಿಮಾಗಳಲ್ಲಿ ಬರುವ ಪಾತ್ರಗಳನ್ನು ಈ ಸಿನಿಮಾದಲ್ಲಿ ತರಲು ಚಿಂತಿಸಿದ್ದೇವೆ. ಸ್ಪೈಡರ್ ಮ್ಯಾನ್ ಹಾಗೂ ಡಾಕ್ಟರ್ ಸ್ಟ್ರೇಂಜ್​ನಲ್ಲಿ ಬೇರೆ ಸಿನಿಮಾಗಳ ಪಾತ್ರಗಳು ಬಂದಿದ್ದವು. ನಾವು ಅದೇ ರೀತಿ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಜನರನ್ನು ನಾವು ತಲುಪಬಹುದು’ ಎಂದಿದ್ದಾರೆ ಅವರು.  ಈ ಮೊದಲು ‘ಸಲಾರ್ 2’ ಹಾಗೂ ‘ಕೆಜಿಎಫ್ 3’ ಒಂದೇ ಸಿನಿಮಾ ಎಂದು ಹೇಳಲಾಗಿತ್ತು. ಈಗ ವಿಜಯ್ ಕಿರಗಂದೂರು ಅವರು ನೀಡಿದ ಹಿಂಟ್ ನೋಡಿದರೆ ಸಲಾರ್ ಪಾತ್ರ ಮೂರನೇ ಚಾಪ್ಟರ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿ ಏನಿಲ್ಲ.

‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ 420 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ತೆರೆಕಂಡು ಒಂದು ತಿಂಗಳು ಕಳೆದಿದೆ. ಆದರೂ ಹಿಂದಿಯಲ್ಲಿ ಕೋಟಿ ಮೊತ್ತದಲ್ಲೇ ಕಲೆಕ್ಷನ್ ಆಗುತ್ತಿದೆ. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಬಾಲಿವುಡ್ ಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada