Fact Check: ‘ಕೆಜಿಎಫ್ 3’ ಟ್ರೇಲರ್ ಬಿಡುಗಡೆ ಆಗಿದ್ಯಾ? ವೈರಲ್ ಆಗಿರುವ ವಿಡಿಯೋದ ಅಸಲಿಯತ್ತು ಇಲ್ಲಿದೆ
KGF 3 Trailer: ‘ಕೆಜಿಎಫ್ 3’ ಟ್ರೇಲರ್ ಎಂದು ಬಿಂಬಿಸುವ ರೀತಿಯಲ್ಲಿ ವಿಡಿಯೋಗಳನ್ನು ಸಿದ್ಧಪಡಿಸಿ ಕೆಲವು ಯೂಟ್ಯೂಬ್ ಚಾನೆಲ್ಗಳು ಅಪ್ಲೋಡ್ ಮಾಡಿವೆ. ಅವು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿವೆ.
ಭಾರತೀಯ ಚಿತ್ರರಂಗಲ್ಲಿ ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ (KGF Chapter 2) ಚಿತ್ರಗಳು ಮಾಡಿರುವ ಸಾಧನೆ ಬಹು ದೊಡ್ಡದು. ಈ ಸಿನಿಮಾಗಳಿಂದ ನಟ ಯಶ್ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಬಹುಬೇಡಿಕೆಯ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಫೇಮಸ್ ಆಗಿದ್ದಾರೆ. ಈ ಚಿತ್ರ ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಭರ್ಜರಿ ಲಾಭ ಮಾಡಿಕೊಂಡಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದವರಿಗೆ ‘ಕೆಜಿಎಫ್ 3’ (KGF 3) ಬಗ್ಗೆ ಸುಳಿವು ಸಿಕ್ಕಿತು. ಅಂದರೆ ಈ ಸಿನಿಮಾದ ಇನ್ನೊಂದು ಪಾರ್ಟ್ ಕೂಡ ಬರಲಿದೆ ಎಂಬುದು ಖಚಿತ. ಆದರೆ ಯಾವಾಗ ಬರಲಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಈ ಕುರಿತು ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಅಷ್ಟರಲ್ಲಾಗಲೇ ‘ಕೆಜಿಎಫ್ 3’ ಟ್ರೇಲರ್ (KGF 3 Trailer) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಕ್ರಿಯೇಟ್ ಆಗಿದೆ. ಹಾಗಂತ ಚಿತ್ರತಂಡದಿಂದ ಅಧಿಕೃತ ಟ್ರೇಲರ್ ಹೊರಬಂದಿಲ್ಲ. ಇದೇನಿದ್ದರೂ ನಕಲಿ ಟ್ರೇಲರ್. ಆದರೆ ಪ್ರೇಕ್ಷಕರನ್ನು ಯಾಮಾರಿಸುವ ಸಲುವಾಗಿ ‘KGF Chapter 3 Official Trailer’ ಎಂಬ ಹೆಸರಿನಲ್ಲೇ ಇದನ್ನು ಹರಿಬಿಡಲಾಗಿದೆ.
ಈ ರೀತಿ ನಕಲಿ ಟ್ರೇಲರ್ಗಳು ವೈರಲ್ ಆಗುವುದು ಹೊಸದೇನೂ ಅಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರ ಮುಂಬರುವ ಸಿನಿಮಾಗಳ ಬಗ್ಗೆ ಈ ರೀತಿ ಟ್ರೇಲರ್ ಮತ್ತು ಪೋಸ್ಟರ್ಗಳನ್ನು ಸಿದ್ಧಪಡಿಸಿ ವೈರಲ್ ಮಾಡುವುದು ಇತ್ತೀಚಿನ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಸಖತ್ ಹವಾ ಮಾಡಿರುವ ‘ಕೆಜಿಎಫ್ 2’ ಸಿನಿಮಾದ ಹೆಸರಿನ ಲಾಭ ಪಡೆಯಲು ಕೆಲವು ಯೂಟ್ಯೂಬ್ ಚಾಲೆನ್ಗಳು ಹೊಂಚು ಹಾಕಿವೆ. ‘ಕೆಜಿಎಫ್ 3’ ಟ್ರೇಲರ್ ಎಂದು ಬಿಂಬಿಸುವಂತಹ ವಿಡಿಯೋಗಳನ್ನು ಸಿದ್ಧಪಡಿಸಿ ಯೂಟ್ಯೂಬ್ನಲ್ಲಿ ಕೆಲವು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗಳು ಲಕ್ಷಾಂತರ ವೀವ್ಸ್ ಪಡೆದುಕೊಂಡಿವೆ.
‘ಕೆಜಿಎಫ್ 1’, ‘ಕೆಜಿಎಫ್ 2’, ಯಶ್ ನಟಿಸಿದ ಕೆಲವು ಜಾಹೀರಾತು ಸೇರಿದಂತೆ ಅನೇಕ ಕಡೆಗಳಿಂದ ದೃಶ್ಯಗಳನ್ನು ಕಾಪಿ ಮಾಡಿಕೊಂಡು, ಅದಕ್ಕೆ ಬೇರೆ ಬೇರೆ ಸಿನಿಮಾಗಳು ಶಾಟ್ಗಳನ್ನು ಸೇರಿಸಿ, ಹಿನ್ನೆಲೆ ಸಂಗೀತವನ್ನೂ ಜೋಡಿಸಿ ಇಂಥ ವಿಡಿಯೋಗಳನ್ನು ಮಾಡಲಾಗಿದೆ. ಅದಕ್ಕೆ KGF Chapter 3 Official Trailer ಎಂದು ಕ್ಯಾಪ್ಷನ್ ನೀಡಿ ಯೂಟ್ಯೂಬ್ನಲ್ಲಿ ಹರಿಬಿಡಲಾಗಿದೆ. ಅದು ನಿಜವೋ ಸುಳ್ಳೋ ಎಂಬುದನ್ನೂ ಪರಿಶೀಲನೆ ಮಾಡದ ಸಾವಿರಾರು ನೆಟ್ಟಿಗರು ಸುಮ್ಮನೇ ನೋಡಿ ಎಂಜಾಯ್ ಮಾಡಿದ್ದಾರೆ. ಇದರಿಂದ ಲಕ್ಷಾಂತರ ವೀವ್ಸ್ ಆಗಿದೆ. ಒಂದಲ್ಲ ಎರಡಲ್ಲ, ಹಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಈ ರೀತಿಯ ನಕಲಿ ‘ಕೆಜಿಎಫ್ 3’ ಟ್ರೇಲರ್ಗಳು ಅಪ್ಲೋಡ್ ಆಗಿವೆ. ಕನಿಷ್ಠ ‘ಫ್ಯಾನ್ ಮೇಡ್ ಟ್ರೇಲರ್’ ಎಂದು ಕ್ಯಾಪ್ಷನ್ ನೀಡುವ ನೈತಿಕತೆಯನ್ನೂ ಬಹುತೇಕರು ಉಳಿಸಿಕೊಂಡಿಲ್ಲ. ಒಟ್ಟಿನಲ್ಲಿ ನೋಡುಗರನ್ನು ದಾರಿ ತಪ್ಪಿಸಿ, ಸಾಧ್ಯವಾದಷ್ಟು ವೀವ್ಸ್ ಪಡೆಯಬೇಕು ಎಂಬುದು ಆನ್ಲೈನ್ ದುನಿಯಾದ ಗಿಮಿಕ್.
(‘ಕೆಜಿಎಫ್ 3’ ನಕಲಿ ಟ್ರೇಲರ್)
ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ಬಳಿಕ ಇನ್ನೂ ಕೆಲವು ಸಿನಿಮಾಗಳಿಗೆ ಅವರು ಸಹಿ ಮಾಡಲಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ನಡುವೆ ‘ಕೆಜಿಎಫ್ 3’ ಯಾವಾಗ ಬರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಹಲವು ಕಡೆಗಳಲ್ಲಿ ‘ಕೆಜಿಎಫ್ 2’ ಚಿತ್ರ ಇನ್ನೂ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 1200 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿರುವುದು ಈ ಸಿನಿಮಾ ಹೆಚ್ಚುಗಾರಿಕೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.