‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕಿಯಾರಾ ಅಡ್ವಾಣಿ ಮನವಿ?

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಗಾಸಿಪ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕಿಯಾರಾ ಅಡ್ವಾಣಿ ಮನವಿ?
Kiara Advani, Yash

Updated on: May 03, 2026 | 11:03 AM

ನಟ ಯಶ್ (Yash) ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ‘ಟಾಕ್ಸಿಕ್’ (Toxic) ಸಿನಿಮಾ ದಿನಕ್ಕೊಂದು ಹೊಸ ವಿಚಾರಗಳಿಂದ ಸುದ್ದಿಯಾಗುತ್ತಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಕಿಯಾರಾ ಅಡ್ವಾಣಿ (Kiara Advani) ಅವರು ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳನ್ನು ಕಟ್ ಮಾಡುವಂತೆ ಅಥವಾ ಅವುಗಳ ಅವಧಿಯನ್ನು ಕಡಿಮೆ ಮಾಡುವಂತೆ ಚಿತ್ರತಂಡಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಚಿತ್ರತಂಡದಲ್ಲಿ ಮತ್ತೆ ಗೊಂದಲ ನಿರ್ಮಾಣ ಆದಂತಿದೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ.

ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಅವರು ಈಗಾಗಲೇ ಯಶ್ ಜೊತೆಗಿನ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣಕ್ಕೂ ಮೊದಲು ನಿರ್ದೇಶಕರು ಈ ದೃಶ್ಯಗಳು ನಟಿಯ ಕಂಫರ್ಟ್ ಜೋನ್ ಒಳಗೇ ಇರುತ್ತವೆ ಎಂದು ಭರವಸೆ ನೀಡಿದ್ದರು. ಆದರೆ, ಚಿತ್ರೀಕರಣ ಮುಗಿದ ನಂತರ ಔಟ್‌ಪುಟ್ ನೋಡಿದ ಕಿಯಾರಾ ಅವರಿಗೆ ಆ ದೃಶ್ಯಗಳು ತೆರೆಯ ಮೇಲೆ ಅತಿ ಎನಿಸಿದೆಯಂತೆ. ಈ ಕಾರಣದಿಂದ ಅವರು ದೃಶ್ಯಗಳನ್ನು ಎಡಿಟ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ‘ಚಿತ್ರೀಕರಣ ಮುಗಿದ ಮೇಲೆ ಈ ರೀತಿ ಮನವಿ ಮಾಡುವುದು ಸರಿಯಲ್ಲ’ ಎಂದು ಒಂದು ವರ್ಗದ ಜನರು ಅಭಿಪ್ರಾಯಪಟ್ಟಿದ್ದಾರೆ. ‘ಒಬ್ಬ ಕಲಾವಿದೆಯಾಗಿ ತಮ್ಮ ಅಭಿನಯ ತೆರೆಯ ಮೇಲೆ ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ, ತಮ್ಮ ಕಂಫರ್ಟ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವರಿಗೆ ಇದೆ’ ಎಂದು ಇನ್ನೊಂದು ವರ್ಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಯಶ್ ಅವರ ವೃತ್ತಿಜೀವನದಲ್ಲೇ ಅತ್ಯಂತ ಸ್ಟೈಲಿಶ್ ಮತ್ತು ಬೋಲ್ಡ್ ಆದಂತಹ ಆ್ಯಕ್ಷನ್ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ನಡುವೆ ಇಂತಹ ಗಾಸಿಪ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ನಟಿ ಕಿಯಾರಾ ಅಡ್ವಾಣಿ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಜೂನ್ 4ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ರಿಲೀಸ್ ದಿನಾಂಕ ಸದ್ಯಕ್ಕೆ ಮುಂದೂಡಿಕೆ ಆಗಿದೆ. ಹೊಸ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us