Sudeep Birthday: ಪರಭಾಷೆಗಳಲ್ಲಿ ಕಿಚ್ಚನ ಮಿಂಚು; ಈ ಚಿತ್ರಗಳಲ್ಲಿ ಸುದೀಪ್ ನಟನೆ ಕಂಡು ಮಾರುಹೋಗದವರುಂಟೇ?

TV9 Digital Desk

| Edited By: ಮದನ್​ ಕುಮಾರ್​

Updated on: Sep 02, 2021 | 8:24 AM

ಕಿಚ್ಚ ಸುದೀಪ್ ಪರ ಭಾಷೆಗಳಲ್ಲಿ ನಟಿಸಿರುವ ಬಹುತೇಕ ಚಿತ್ರಗಳು ಸೂಪರ್​ ಹಿಟ್ ಆಗಿವೆ. ಜೊತೆಗೆ ತಮ್ಮ ಭಿನ್ನ ಬಗೆಯ ಪಾತ್ರ ಪೋಷಣೆಯಿಂದ ಅವರು ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ನಟನೆಯ ಉತ್ತಮ ಅನ್ಯಭಾಷಾ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Sudeep Birthday: ಪರಭಾಷೆಗಳಲ್ಲಿ ಕಿಚ್ಚನ ಮಿಂಚು; ಈ ಚಿತ್ರಗಳಲ್ಲಿ ಸುದೀಪ್ ನಟನೆ ಕಂಡು ಮಾರುಹೋಗದವರುಂಟೇ?
‘ಈಗ’ ಹಾಗೂ ‘ಬಾಹುಬಲಿ’ ಚಿತ್ರದಲ್ಲಿ ಕಿಚ್ಚ ಸುದೀಪ್

Follow us on

ಸ್ಯಾಂಡಲ್​ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು (ಸೆ.2) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಕನ್ನಡದ ಸಿನಿ ರಸಿಕರಿಗೆ ಹೇಗೆ ತಮ್ಮ ವೈವಿಧ್ಯಮಯ ಪಾತ್ರಗಳಿಂದ ಪರಿಚಿತರೋ, ಹಾಗೆಯೇ ಭಾರತದ ವಿವಿಧ ಚಿತ್ರರಂಗಗಳಲ್ಲಿ ನಿರ್ವಹಿಸಿದ ಖಡಕ್ ಪಾತ್ರಗಳಿಂದ ದೇಶದ ಜನರಿಗೂ ಪರಿಚಿತರಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಫೂಂಕ್’ ಚಿತ್ರದ ಮುಖಾಂತರ ಬಾಲಿವುಡ್​ಗೆ ಪ್ರವೇಶ ಮಾಡಿದ ಸುದೀಪ್, ಅಲ್ಲಿಂದ ವಿವಿಧ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲಂತೂ ಕಿಚ್ಚನಿಗೆ ಬೇಡಿಕೆ ಬಹಳಷ್ಟಿದ್ದು, ಆಗಾಗ ಅಲ್ಲಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಿದೆ. 

ಸುದೀಪ್ ಜನ್ಮದಿನದ ಈ ಸಂದರ್ಭದಲ್ಲಿ ಅವರ ಅಭಿನಯದ ಪರಭಾಷೆಯ ಅತ್ಯುತ್ತಮ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1. ಈಗ: ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿನ ಸುದೀಪ್ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸುದೀಪ್​ರೊಂದಿಗೆ ಸಮಂತಾ ಹಾಗೂ ನಾನಿ ತೆರೆ ಹಂಚಿಕೊಂಡಿದ್ದರು. 2012ರಲ್ಲಿ ಬಿಡುಗಡೆಯಾದ ಈ ಚಿತ್ರ ಸುಮಾರು 125 ಕೋಟಿ ರೂ. ಬಾಚಿಕೊಂಡಿತ್ತು.

2. ರಕ್ತಚರಿತ್ರಾ: 2010ರಲ್ಲಿ ಬಿಡುಗಡೆಯಾದ ಈ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ತೆರೆಕಂಡಿತ್ತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್, ರಾಧಿಕಾ ಆಪ್ಟೆ, ಶತ್ರುಘ್ನ ಸಿನ್ಹಾ ಮೊದಲಾದವರೊಂದಿಗೆ ಸುದೀಪ್ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿನ ಸುದೀಪ್ ಅಭಿನಯಕ್ಕೆ ಹಾಗೂ ಮ್ಯಾನರಿಸಂಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

3. ರಣ್: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್​ ಮಗನ ಪಾತ್ರದಲ್ಲಿ ಸುದೀಪ್ ತೆರೆ ಹಂಚಿಕೊಂಡಿದ್ದ ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. 2010ರ ಜನವರಿಯಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಿತೇಶ್ ದೇಶ್​ಮುಖ್, ಪರೇಶ್ ರಾವಲ್ ಮೊದಲಾದ ಖ್ಯಾತ ನಾಮರೂ ಬಣ್ಣ ಹಚ್ಚಿದ್ದರು.

Kichcha Sudeep and Amitabh Bachchan

(ರಣ್ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಅಮಿತಾಭ್ ಬಚ್ಚನ್)

4. ದಬಂಗ್ 3: ಬಾಲಿವುಡ್​ನ ಯಶಸ್ವಿ ಸೀರೀಸ್​ ಚಿತ್ರಗಳಲ್ಲಿ ಒಂದಾದ ದಬಂಗ್ ಸರಣಿಯ ಮೂರನೇ ಚಿತ್ರವಾದ ‘ದಬಂಗ್ 3’ಯಲ್ಲಿ ಸುದೀಪ್, ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಅಬ್ಬರಿಸಿದ್ದರು. ಬಾಕ್ಸಾಫೀಸ್​ನಲ್ಲಿ ಯಶಸ್ವಿಯಾದ ಈ ಚಿತ್ರ ಸುಮಾರು 230 ಕೋಟಿ ಬಾಚಿಕೊಂಡಿತ್ತು. 2019ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಪ್ರಭು ದೇವ ನಿರ್ದೇಶಿಸಿದ್ದರು.

5. ಬಾಹುಬಲಿ: ಎಸ್.ಎಸ್. ರಾಜಮೌಳಿ ನಿರ್ದೇಶನದ, ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲೂ ಸುದೀಪ್ ಬಣ್ಣ ಹಚ್ಚಿದ್ದರು. ಪರ್ಷಿಯನ್ ದೇಶದ ಶಸ್ತ್ರಾಸ್ತ್ರ ವ್ಯಾಪಾರಿಯಾಗಿ ಸುದೀಪ್ ಕಾಣಿಸಿಕೊಂಡು ಗಮನ ಸೆಳೆದಿದ್ದರು.

6. ಸೈ ರಾ ನರಸಿಂಹ ರೆಡ್ಡಿ: ಮೆಗಾಸ್ಟಾರ್ ಚಿರಂಜೀವಿ ನಟನೆಯ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ‘ಅವುಕು ರಾಜು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಜಗಪತಿ ಬಾಬು ಮೊದಲಾದ ತಾರೆಯರನ್ನೊಳಗೊಂಡ ಬೃಹತ್ ತಾರಾಗಣದ ಚಿತ್ರ ಇದಾಗಿತ್ತು. ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಧ್ವನಿಯೆತ್ತಿದ್ದ ನರಸಿಂಹ ರೆಡ್ಡಿಯ ಜೀವನ ಕತೆಯನ್ನು ಚಿತ್ರ ಒಳಗೊಂಡಿತ್ತು. ಈ ಚಿತ್ರಕ್ಕೆ ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Kichcha Sudeep

(‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಕಿಚ್ಚ ಸುದೀಪ್)

ಇವುಗಳಲ್ಲದೇ ಕಿಚ್ಚ ಸುದೀಪ್ ಹಿಂದಿಯ ಫೂಂಕ್, ಫೂಂಕ್ 2, ರಕ್ತ ಚರಿತ್ರಾ 2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್​ಲಾಲ್ ನಟನೆಯ ಮಲಯಾಳಂನ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರದಲ್ಲೂ ಸುದೀಪ್ ಬಣ್ಣ ಹಚ್ಚಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ:

Kichcha Sudeep: ಕಿಚ್ಚ ಸುದೀಪ್​ ಬರ್ತ್​ಡೇಗೆ 12 ಕಾರ್ಯಕ್ರಮ; ಇಲ್ಲಿದೆ ಫುಲ್​ ಡಿಟೇಲ್ಸ್​

ಸುದೀಪ್​ಗೆ ನೀರಜ್​ ಚೋಪ್ರಾ ಕಡೆಯಿಂದ ಹುಟ್ಟುಹಬ್ಬದ ಶುಭಾಶಯ; ‘ವಿಕ್ರಾಂತ್ ರೋಣ’ಗೂ ವಿಶೇಷ ವಿಶ್

(Kichcha Sudeep best films and movie list from other languages)

ತಾಜಾ ಸುದ್ದಿ

Related Stories

Click on your DTH Provider to Add TV9 Kannada