‘ನನ್ನ ಕೊನೆಯ ಉಸಿರು ಇರೋವರೆಗೂ ನೀವು ಮಾಡಿದ ಸಹಾಯ ಮರೆಯಲ್ಲ’
ನಾನು ಇಂಡಸ್ಟ್ರಿಗೆ ಬಂದಾಗ ಮೊದಲ ಸಹಾಯ ಮಾಡಿದ್ದು ರಾಕ್ಲೈನ್ ವೆಂಕಟೇಶ್. ನಾನು ಸಿನಿಮಾಗಳಲ್ಲಿ ಹೀರೊ ಆಗಿದ್ದೆ, ಆದರೆ ದುಡ್ಡಿರಲಿಲ್ಲ. ಅವತ್ತು ಇಂಡಸ್ಟ್ರಿಯಲ್ಲಿ ಯಾರ ಹತ್ತಿರ ಹೋಗಬೇಕು ಎಂದು ಗೊತ್ತಾಗಲಿಲ್ಲ. ಆಗ ಸಿಕ್ಕಿದ್ದೇ ರಾಕ್ಲೈನ್ ವೆಂಕಟೇಶ್ ಎಂದು ಹಳೆಯ ದಿನಗಳನ್ನು ನೆನೆದರು ಸುದೀಪ್.
ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಕಳೆದಿದೆ. ಇದೇ ವಿಶೇಷ ಸಂದರ್ಭದಲ್ಲಿ ಸುದೀಪ್ ಅವರನ್ನು ಸನ್ಮಾನಿಸುವ ಕೆಲಸ ಕೂಡ ನಡೆಯಿತು. ಈ ವೇಳೆ ಸುದೀಪ್ ತಮ್ಮ ಪಯಣವನ್ನು ನೆನಪಿಸಿಕೊಂಡರು. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಸುದೀಪ್ಗೆ ಸಹಾಯ ಒಂದನ್ನು ಮಾಡಿದ್ದರಂತೆ. ಇದನ್ನು ಸುದೀಪ್ ಎಂದಿಗೂ ಮರೆಯುವುದಿಲ್ಲ ಎಂದರು.
ನಾನು ಇಂಡಸ್ಟ್ರಿಗೆ ಬಂದಾಗ ಮೊದಲ ಸಹಾಯ ಮಾಡಿದ್ದು ಎಂದರೆ ಅದು ರಾಕ್ಲೈನ್ ವೆಂಕಟೇಶ್. ನಾನು ಹೀರೋ ಆಗಿದ್ದೆ. ಆದರೆ, ದುಡ್ಡಿರಲಿಲ್ಲ. ಅವತ್ತು ಇಂಡಸ್ಟ್ರಿಯಲ್ಲಿ ಯಾರ ಹತ್ತಿರ ಹೋಗಬೇಕು ಎಂದು ಗೊತ್ತಾಗಲಿಲ್ಲ. ಕೆಲವರ ಹತ್ತಿರ ಹೋದರೆ ಮರ್ಯಾದೆ ಹೋಗುತ್ತದೆ ಎನ್ನುವ ಅಂಜಿಕೆ ಇತ್ತು. ಎಷ್ಟೊಂದು ಸಿನಿಮಾ ಮಾಡಿದ್ದಾರೆ. ಆದರೂ ದುಡ್ಡು ಕೇಳ್ತಾರಲ್ಲ ಎಂದು ಕೊಳ್ಳುತ್ತಿದ್ದರು. ಬಹಳ ಧೈರ್ಯ ಮಾಡಿ ಮಧ್ಯರಾತ್ರಿ ರಾಕ್ಲೈನ್ ಅವರಿಗೆ ಕರೆ ಮಾಡಿದ್ದೆ ಎಂದರು ಸುದೀಪ್.
ಕರೆ ಮಾಡಿದಾಗ ಮಾತನಾಡೋಕೆ ಬರುತ್ತೇನೆ ಎಂದಿದ್ದೆ. ಮಧ್ಯರಾತ್ರಿ ಅವರ ಮನೆಗೆ ಹೋದೆ. ಏನೋ ತಪ್ಪಾಗಿದೆ ಎಂಬುದು ಅವರಿಗೆ ಮೊದಲೇ ಗೊತ್ತಿತ್ತು. ಅವಾಗ ನನಗೆ ತಲೆ ತಗ್ಗಿಸೋಕು ಸಮಯ ಕೊಟ್ಟಿಲ್ಲ. ಅವರು ನನಗೆ ಹಣ ನೀಡಿದ್ದರು. ನಾನು ಇಂದಿಗೂ ಅದನ್ನು ನೆನಪು ಇಟ್ಟುಕೊಂಡಿದ್ದೇನೆ ಎಂದರೆ ಅದಕ್ಕೆ ಕಾರಣ ಅವರು ನೀಡಿದ ಹಣ ಅಲ್ಲ. ಅವರು ಮಾಡಿದ ಮಾನವೀಯ ಸಹಾಯ. ಅವರು ನನಗೆ ಯಾವತ್ತಿದ್ದರೂ ಹಿರಿಯ ಅಣ್ಣನೇ. ನನ್ನ ಕೊನೆ ಉಸಿರು ಇರೋ ವರೆಗೂ ನಾನು ಆ ಸಹಾಯವನ್ನು ಎಂದಿಗೂ ಮರೆಯಲ್ಲ ಎಂದರು ಸುದೀಪ್.
ಉಪೇಂದ್ರ ಅವರನ್ನು ನೆನೆದ ಸುದೀಪ್ ಉಪೇಂದ್ರ ಅವರು ಕಾರಣಾಂತರಗಳಿಂದ ಇಂದು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದಾಗ್ಯೂ ಉಪೇಂದ್ರ ಅವರನ್ನು ನೆನೆಯೋಕೆ ಸುದೀಪ್ ಮರೆತಿಲ್ಲ. ಉಪೇಂದ್ರ ಅವರಿಂದ ನಾನು ತುಂಬಾ ಕದಿಯೋದಿದೆ. ಅದು ಗೊತ್ತಾಗಿಯೇ ಅವರು ಬಂದಿಲ್ಲ ಅನಿಸುತ್ತೆ. ನಾನು ಕಲಾವಿದ ಆಗಬಹುದು ಎಂದು ತೋರಿಸಿಕೊಟ್ಟಿದ್ದೇ ಅವರು. ಸಹ ನಿರ್ದೇಶಕ- ನಿರ್ದೇಶಕನಾಗಬೇಕು ಎಂದು ಓಡಾಡುವಾಗ ಉಪೇಂದ್ರ ನೀವು ಇಷ್ಟೆಲ್ಲ ಇಟ್ಟುಕೊಂಡು ನಿರ್ದೇಶಕನಾಗ್ತೀನಿ ಅಂತೀರಲ್ಲ. ಹೋಗಿ ಹೀರೋ ಆಗಿ ಅಂದಿದ್ರು. ಅವತ್ತಿಗೆ ಆ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೆ. ನಾನು ನಟನಾಗಬಹುದು ಎಂದು ಮೊದಲು ಗುರುತಿಸಿದ್ದೇ ಅವರು. ನಿರ್ದೇಶನ ಮಾಡೋದಕ್ಕೂ ಅವರ ಸ್ಫೂರ್ತಿ ಇದೆ ಎಂದರು.
ಇದನ್ನೂ ಓದಿ: Kichcha Sudeep: ಉಪ್ಪಿ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಕ್ಕೇ ನಾನು ಹೀರೋ ಆದೆ: ಸುದೀಪ್
Published On - 9:58 pm, Mon, 15 March 21