ದರ್ಶನ್ ತೋಟದಲ್ಲಿ ಬಲವಂತವಾಗಿ ನನ್ನನ್ನು ಕುದುರೆ ಹತ್ತಿಸಿದ್ದ: ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರನ್ನು ಪೌರಾಣಿಕ ಸಿನಿಮಾಗಳಲ್ಲಿ ನೋಡಬೇಕು ಎಂಬ ಆಸೆ ಅವರ ಅಭಿಮಾನಿಗಳಿಗೆ ಇದೆ. ಆದರೆ ಸುದೀಪ್ ಅವರು ಆ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅದಕ್ಕೆ ಒಂದು ಬಲವಾದ ಕಾರಣ ಇದೆ. ದರ್ಶನ್ ತೋಟದಲ್ಲಿ ತಮಗೆ ಆದ ಒಂದು ಅನುಭವದ ಬಗ್ಗೆ ಸುದೀಪ್ ಅವರು ಈಗ ಮಾತನಾಡಿದ್ದಾರೆ.

ದರ್ಶನ್ ತೋಟದಲ್ಲಿ ಬಲವಂತವಾಗಿ ನನ್ನನ್ನು ಕುದುರೆ ಹತ್ತಿಸಿದ್ದ: ಕಿಚ್ಚ ಸುದೀಪ್
Kichcha Sudeep, Darshan

Updated on: Sep 01, 2025 | 6:15 PM

ಒಂದು ಕಾಲದಲ್ಲಿ ದರ್ಶನ್ (Darshan) ಮತ್ತು ಕಿಚ್ಚ ಸುದೀಪ್ ಅವರು ಆಪ್ತ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಉತ್ತಮ ಒಡನಾಟ ಇತ್ತು. ಆದರೆ ಕಾರಣಾಂತರಗಳಿಂದ ಅವರಿಬ್ಬರು ದೂರಾದರು. ಆದರೂ ಕೂಡ ಅಂದಿನ ನೆನಪುಗಳು ಮಾಸಿಲ್ಲ. ಕಿಚ್ಚ ಸುದೀಪ್ ಅವರು ಕೆಲವು ಸಂದರ್ಭಗಳಲ್ಲಿ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಹುಟ್ಟುಹಬ್ಬದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರಿಗೆ ಕೆಲವು ಪ್ರಶ್ನೆಗಳು ಎದುರಾದವು. ನೀವು ಯಾಕೆ ಪೌರಾಣಿಕ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದು ಕೇಳಿದ್ದಕ್ಕೆ ಅವರು ಉತ್ತರ ನೀಡಿದರು. ಆಗ ದರ್ಶನ್ ಫಾರ್ಮ್​​ಹೌಸ್​​ನಲ್ಲಿ ನಡೆದಿದ್ದ ಒಂದು ಘಟನೆಯನ್ನು ಕಿಚ್ಚ ಸುದೀಪ್ (Kichcha Sudeep) ನೆನಪಿಸಿಕೊಂಡರು.

‘ಪೌರಾಣಿಕ ಸಿನಿಮಾ ಮಾಡಲು ನನಗೆ ಇರುವ ಸಮಸ್ಯೆ ಏನು ಎಂಬುದನ್ನು ಓಪನ್ ಆಗಿ ಹೇಳುತ್ತೇನೆ ಕೇಳಿ. ಕುದುರೆ ಓಡಿಸುವುದು ನನಗೆ ಆಗಲ್ಲ. ಯಾಕೆಂದರೆ ನನಗೆ ಒಂದು ಅನುಭವ ಆಗಿದೆ. ಈ ರೀತಿಯ ಒಂದು ಪಾತ್ರ ಬಂದಿತ್ತು. ಪ್ರಾಕ್ಟೀಸ್ ಮಾಡಲು ಹೋಗಿದ್ದೆ. ಹೀರೋ ಎಂದರೆ ಫೈಟ್ ಕಲಿಯಬೇಕು, ಕುದುರೆ ಓಡಿಸುವುದು ಕಲಿಯಬೇಕು ಅಂತ ನಮಗೆ ಏನೇನೋ ಹೇಳಿದ್ದರು. ನಾನು ಸೀರಿಯಸ್ ಆಗಿ ಹೋಗಿ, ಒಂದು ವಾರ ಅಥವಾ 10 ದಿನ ಚೆನ್ನಾಗಿ ಓಡಿಸಿದೆ. ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತ ಗೊತ್ತಿಲ್ಲ. 20 ಮೀಟರ್ ನನ್ನನ್ನು ಎಳೆದುಕೊಂಡು ಹೋಗಿತ್ತು’ ಎಂದಿದ್ದಾರೆ ಸುದೀಪ್.

‘ಆಗ ಆದ ಭಯಕ್ಕೆ ಪ್ರಪಂಚವನ್ನೇ ನಾನು ನೋಡಿಬಿಟ್ಟೆ. ಅದಾದ ಮೇಲೆ ಒಂದು ಅರ್ಥ ಆಯಿತು. ಯಾವುದರ ಮೇಲೆ ಹತ್ತಿದ್ದರೂ ಅದರ ಬ್ರೇಕ್ ಮತ್ತು ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು. ಕುದುರೆಯಲ್ಲಿ ಎಲ್ಲಿದೆ ಎಂಬುದು ನನಗೆ ಗೊತ್ತಿಲ್ಲ. ಇದೆಲ್ಲ ಹೊರತುಪಡಿಸಿ, ಇನ್ನೊಂದು ದಿನ ನಾವು ದರ್ಶನ್ ತೋಟಕ್ಕೆ ಹೋಗಿದ್ದೆವು’ ಎಂದು ಆ ದಿನದ ನೆನಪಿನ ಪುಟವನ್ನು ಸುದೀಪ್ ತೆರೆದರು.

‘ದರ್ಶನ್​ರ ತೋಟಕ್ಕೆ ಹೋದಾಗ ಕುದುರೆ ಹತ್ತು ಅಂತ ನನಗೆ ತುಂಬ ಒತ್ತಾಯ ಮಾಡಿದ. ನೀನೂ ಬೇಡ, ನಿನ್ನ ಕುದುರೆ ಸಹವಾಸವೂ ಬೇಡ ಅಂತ ನಾನು ಹೇಳಿದ್ದೆ. ಆದರೂ ಕುದುರೆ ಹತ್ತಿಸಿದರು. ನಾನು ಮೆತ್ತಗೆ ಹೋಗುತ್ತಿದ್ದೆ. ಅವನು ಕಟಕಟ ಅಂತ ಹೋಗುತ್ತಿದ್ದ. ಹೋಗ್ತಾ ಹೋಗ್ತಾ ಬಿದ್ದುಬಿಟ್ಟು. ಅದನ್ನು ನೋಡಿದ ತಕ್ಷಣ ಮೊದಲು ನಿಲ್ಲಿಸಪ್ಪ ಎಂದೆ. ನಾನು ಅಂದು ಇಳಿದವನು ಇಂದಿನವರೆಗೆ ಮತ್ತೆ ಕುದುರೆ ಹತ್ತಿಲ್ಲ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ‘ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾತುಕತೆ ನಡೆದಿದೆಯಾ?

‘ಪೌರಾಣಿಕ ಸಿನಿಮಾ ಮಾಡಿದರೆ ಮೊದಲು ನಮ್ಮನ್ನು ಯುದ್ಧಕ್ಕೆ ಬಿಡುತ್ತೀರಿ. ಕುದುರೆ ಮೇಲೆ ಬರಬೇಕು. ಯಾಕೆ ಬೇಕು? ಈಗ ಮಾಡುತ್ತಿರುವ ಸಿನಿಮಾದ ಥರ ಮಾಡಿದರೆ ಬೈಕ್​​ನಲ್ಲಿ ಬರುತ್ತೇನೆ. ಬೇಗ ಮುಗಿಸಿ ಮನೆಗೆ ಹೋಗುತ್ತೇನೆ. ಬೇಗ ಸಿನಿಮಾ ರಿಲೀಸ್ ಆಗುತ್ತದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.