ಸುದೀಪ್ 47ನೇ ಸಿನಿಮಾ ಹೆಸರು ‘ಮಾರ್ಕ್’: ಸಖತ್ ಮಾಸ್ ಆಗಿದೆ ಟೈಟಲ್ ಟೀಸರ್
ನಟ ಕಿಚ್ಚ ಸುದೀಪ್ ಅವರು ತಮ್ಮ 47ನೇ ಸಿನಿಮಾದ ಕೆಲಸಗಳನ್ನು ಪಟಪಟನೆ ಮುಗಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಏನು ಎಂಬುದನ್ನು ಚಿತ್ರತಂಡ ಈಗ ಬಹಿರಂಗಪಡಿಸಿದೆ. ‘ಮಾರ್ಕ್’ ಎಂದು ಹೆಸರು ಇಡಲಾಗಿದೆ. ಇದನ್ನು ತಿಳಿಸಲು ರಗಡ್ ಆದಂತಹ ಟೀಸರ್ ಅನಾವರಣ ಮಾಡಲಾಗಿದೆ. ಚಿತ್ರದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಅಭಿಮಾನಿಗಳು ಕಿಚ್ಚ ಸುದೀಪ್ (Kichcha Sudeep) ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಬರ್ತ್ಡೇ. ಆ ಖುಷಿಯನ್ನು ಹೆಚ್ಚಿಸಲು ಒಂದು ದಿನ ಮೊದಲೇ ಹೊಸ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಇದಾಗಿದ್ದು, ಟೈಟಲ್ ಏನು ಎಂಬುದನ್ನು ಈ ಟೀಸರ್ ಮೂಲಕ ತಿಳಿಸಲಾಗಿದೆ. ಇಷ್ಟು ದಿನ ಈ ಸಿನಿಮಾವನ್ನು ತಾತ್ಕಾಲಿಕವಾಗಿ ‘K 47’ ಎಂದು ಕರೆಯಲಾಗುತ್ತಿತ್ತು. ಈ ಚಿತ್ರದ ಶೀರ್ಷಿಕೆ ‘ಮಾರ್ಕ್’ (Mark Movie) ಎಂಬುದು ಈಗ ಬಹಿರಂಗ ಆಗಿದೆ.
‘ಮಾರ್ಕ್’ ಸಿನಿಮಾದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಹೊಂದಿದ್ದಾರೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. ಇದು ಸುದೀಪ್ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಚಿತ್ರತಂಡ ಹೇಳಿದೆ. ಟೈಟಲ್ ಟೀಸರ್ ನೋಡಿದ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಮೊದಲು ‘ಮ್ಯಾಕ್ಸ್’ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು. ಆ ಕಾರಣದಿಂದಲೂ ನಿರೀಕ್ಷೆ ಜೋರಾಗಿದೆ.
‘ಮಾರ್ಕ್’ ಸಿನಿಮಾ ಟೈಟಲ್ ಟೀಸರ್:
ಈ ಸಿನಿಮಾಗೆ ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ತಂಡದಲ್ಲಿ ಅನುಭವಿ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶೇಖರ್ ಚಂದ್ರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾತುಕತೆ ನಡೆದಿದೆಯಾ?
ಎಂ.ಟಿ. ಶ್ರೀರಾಮ್ ಅವರ ‘ಮಾರ್ಕ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವ ನೀಡಲಿದೆ ಎಂದು ನಿರ್ಮಾಪಕ ಟಿ.ಜಿ. ತ್ಯಾಗರಾಜನ್ ಅವರು ಹೇಳಿದ್ದಾರೆ. ಟೈಟಲ್ ಟೀಸರ್ ಮೂಲಕ ಸಿನಿಮಾದ ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಸಿನಿಮಾ ಶೂಟಿಂಗ್ ಸದ್ಯದಲ್ಲೇ ಮುಕ್ತಾಯ ಆಗಲಿದೆ. ಇದೇ ವರ್ಷ ಕ್ರಿಸ್ಮಸ್ ಹಬ್ಬಕ್ಕೆ ‘ಮಾರ್ಕ್’ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:10 pm, Mon, 1 September 25




