ಕಿಚ್ಚ ಸುದೀಪ್ ಅವರು ಅನೇಕರಿಗೆ ಮಾದರಿ. ನಟನೆಯ ಜೊತೆಗೆ ಅವರಿಂದ ಅನೇಕ ಒಳ್ಳೆಯ ಕೆಲಸಗಳು ಆಗುತ್ತಿವೆ. ಅದೇ ರೀತಿ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸುದೀಪ್ ಹೆಸರಲ್ಲಿ ಅಭಿಮಾನಿಗಳು ಬೋರ್ವೆಲ್ ತೆಗೆಸಿದ್ದಾರೆ. ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸುದೀಪ್ ಅವರು ಬರ್ತ್ಡೇ ದಿನ ಮಾತನಾಡಿದ್ದಾರೆ. ಅವರು ಅಭಿಮಾನಿಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರಿನ ಜಯನಗರದ ಎಂಇಸ್ ಮೈದಾನದಲ್ಲಿ ಕಿಚ್ಚ ಸುದೀಪ್ ಅವರ ಬರ್ತ್ಡೇ ಆಚರಣೆಗೆ ಸ್ಥಳ ನಿಯೋಜನೆ ಮಾಡಲಾಗಿತ್ತು. ಅಲ್ಲಿಗೆ ತೆರಳಿದ ಸುದೀಪ್ ಮಾತನಾಡಿದರು. ‘ನಾನು ಮೇಕಪ್ ಹಾಕೋದು ಅಭಿಮಾನಿಗಳಿಗೋಸ್ಕರ. ಎಲ್ಲಿಯವರೆಗೆ ನೋಡೋಕೆ ಇಷ್ಟಪಡುತ್ತಿರೋ ಅಲ್ಲಿಯವರೆಗೆ ನಿಮಗೋಸ್ಕರ ದುಡಿಯುತ್ತೇನೆ’ ಎಂದಿದ್ದಾರೆ ಸುದೀಪ್.
‘ನನ್ನಿಂದ ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ಅವರು ಮಾಡಿರೋ ಕೆಲಸ ಅವರ ತಂದೆ ತಾಯಿಗೆ, ಊರಿನವರಿಗೆ ಈ ಶ್ರೇಯಸ್ಸು ಸಲ್ಲುತ್ತದೆ. ನಾವು ಬೆಳೆಯುತ್ತೇವೆ ಅನ್ನೋದು ತಪ್ಪಲ್ಲ. ಯಾವ ವಾತಾವರಣದಲ್ಲಿ ಬೆಳೆಯುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಅವರು ಒಳ್ಳೆಯ ಕೆಲಸ ಮಾಡ್ತಿರೋದು ನಾನು ಹೇಳಿದೆ ಅಂತಲ್ಲ, ಅವರಲ್ಲಿ ಒಳ್ಳೆತನ ಇದೆ. ಅದಕ್ಕಾಗಿ ನಾವಿಷ್ಟು ಒಳ್ಳೆಯವರು’ ಎಂದಿದ್ದಾರೆ ಸುದೀಪ್.
‘ನಾನು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ಫ್ಯಾನ್ಸ್ ಮಾಡಿಲ್ಲ. ಸಿನಿಮಾ ಎಲ್ಲರೂ ಮಾಡುತ್ತಾರೆ. ಆದರೆ, ಯಶಸ್ಸು ನಂದು ಮಾತ್ರವಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕಾದರೆ ಸಿನಿಮಾ ಮಾತ್ರ ಸಾಕಾಗಲ್ಲ. ನನ್ನ ಕುಟುಂಬ, ಗೆಳೆಯರು ಎಲ್ಲರೂ ಮುಖ್ಯವಾಗುತ್ತಾರೆ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ‘ನಾ ಕಂಡ ಕನಸನ್ನು ಸುದೀಪ್ ಈಡೇರಿಸಿದ್ದಾನೆ’; ಸಂಜೀವ್ ಖುಷಿಯಿಂದ ಹೇಳಿದ್ದ ಮಾತಿದು
‘ಮ್ಯಾಕ್ಸ್’ ಸಿನಿಮಾ ರಿಲೀಸ್ ಯಾವಾಗ ಎನ್ನುವ ಕುತೂಹಲ ಇದೆ. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ತಾಳಿದವನು ಬಾಳಿಯಾನು. ಸಿನಿಮಾ ಮಾಡೋದಷ್ಟೇ ನನ್ನ ಕೆಲಸ. ಸಿನಿಮಾ ವಿಳಂಬ ಆಗಿದ್ದಕ್ಕೆ ಕ್ಷಮೆ ಇರಲಿ. ಸಿನಿಮಾ ಎಂದಾಗ ಸಾಕಷ್ಟು ಮಂದಿ ಇದರಲ್ಲಿ ಭಾಗಿ ಇರುತ್ತಾರೆ’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Mon, 2 September 24