Max Teaser: ‘ಬಾ ಬಾ ಬ್ಲಾಕ್ ಶೀಪ್’: ಬಂದೇ ಬಿಡ್ತು ‘ಮ್ಯಾಕ್ಸ್‘ ಟೀಸರ್
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮ್ಯಾಕ್ಸ್’ನ ಟೀಸರ್ ಇಂದು (ಜುಲೈ 16) ಬಿಡುಗಡೆ ಆಗಿದೆ. ಟೀಸರ್ನಲ್ಲಿ ಸುದೀಪ್ ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕತೆಯ ಬಗ್ಗೆ ಹೆಚ್ಚೇನು ಗುಟ್ಟುಗಳನ್ನು ಟೀಸರ್ ಬಿಟ್ಟುಕೊಡುತ್ತಿಲ್ಲವಾದರು, ಸಣ್ಣ ಸುಳಿವುಗಳನ್ನಂತೂ ನೀಡಿದೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಇಂದು (ಜುಲೈ 16) ಬಿಡುಗಡೆ ಆಗಿದೆ. ‘ಬಾ ಬಾ ಬ್ಲಾಕ್ ಶೀಪ್’ ಎನ್ನುತ್ತಾ ಖಡಕ್ ಧ್ವನಿಯಲ್ಲಿ ಟೀಸರ್ ಅನ್ನು ಅಭಿಮಾನಿಗಳ ಮುಂದೆ ಪ್ರಸ್ತುತ ಪಡಿಸಿದ್ದಾರೆ ಕಿಚ್ಚ ಸುದೀಪ್. ಟೀಸರ್ ನಲ್ಲಿ ಸುದೀಪ್ ಖಡಕ್ ಆಗಿ ಕಾಣಿಸಿಕೊಂಡಿದ್ದು, ಟೀಸರ್ನ ಕಲರ್ ಟೋನ್ನೇ ಹೇಳುತ್ತಿದೆ ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂಬುದನ್ನು.
ಟೀಸರ್ನಲ್ಲಿ ಬಹಳ ಗುಟ್ಟನ್ನೇನು ಬಿಟ್ಟುಕೊಟ್ಟಿಲ್ಲ ನಿರ್ದೇಶಕರು. ಜನಪ್ರಿಯ ‘ಬಾ ಬಾ ಬ್ಲಾಕ್ ಶೀಪ್’ ಇಂಗ್ಲೀಷ್ ಪದ್ಯದ ಸಾಹಿತ್ಯವನ್ನು ಬದಲು ಮಾಡಿ ಟೀಸರ್ನಲ್ಲಿ ಬಳಸಿಕೊಂಡಿದ್ದು, ಅದರ ಮೂಲಕವೇ ಕೆಲವು ಸುಳಿವುಗಳನ್ನಷ್ಟೆ ನೀಡಲಾಗಿದೆ. ತೆಲುಗಿನ ನಟ ಸುನಿಲ್ ಅನ್ನು ವಿಲನ್ ಆಗಿ ತೋರಿಸಲಾಗಿದೆ. ಅವರ ದೃಶ್ಯ ಟೀಸರ್ನಲ್ಲಿ ಕಾಣಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ಸುದೀಪ್ ಹಿನ್ನೆಲೆಯಲ್ಲಿ ಹೇಳುವ ಪದ್ಯದ ‘ಸ್ಕ್ರೌಂಡ್ರಲ್’ ಸಾಲನ್ನು ಜೋಡಿಸಲಾಗಿದೆ. ಟೀಸರ್ನಲ್ಲಿ ವರಲಕ್ಷ್ಮಿ ಶರತ್ಕುಮಾರ್ ಪಾತ್ರವನ್ನೂ ತುಸು ಹೈಲೆಟ್ ಮಾಡಲಾಗಿದ್ದು, ವರಲಕ್ಷ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ.
‘ಮ್ಯಾಕ್ಸ್’ ಸಿನಿಮಾ ಟೀಸರ್
ಸುದೀಪ್ ಒಟ್ಟಿಗೆ ಎರಡು ಆಯುಧಗಳನ್ನು ಹಿಡಿದು ತಮ್ಮನ್ನು ಕೊಲ್ಲಲು ಬರುವ ಗೂಂಡಾಗಳ ಮೇಲೆ ಹಾರಿ ಬೀಳುವ ದೃಶ್ಯವಿದೆ. ಕೊನೆಯಲ್ಲಿ ಸುದೀಪ್ ಒಳ್ಳೆ ಸ್ಟೆಪ್ ಸಹ ಹಾಕಿದ್ದಾರೆ. ಅವರ ಹಿನ್ನೆಲೆಯಲ್ಲಿ ಕಾಣುವ ಮಹಾಕಾಳಿಯ ವಿಗ್ರಹವೂ ಗಮನ ಸೆಳೆಯುತ್ತಿದೆ. ಟೀಸರ್ನಲ್ಲಿ ತೋರಿಸಲಾಗಿರುವ ಎಲ್ಲ ದೃಶ್ಯಗಳು ಕತ್ತಲ ರಾತ್ರಿಯಲ್ಲಿಯೇ ನಡೆಯುತ್ತಿವೆ. ಅಥವಾ ಯಾವುದೋ ಹಳೆಯ ಗೋಡಾನ್ನಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ.
ಇದನ್ನೂ ಓದಿ:ಅಂಬಾನಿ ಮನೆ ಮದುವೆಗೆ ಏಕೆ ಹೋಗಿಲ್ಲ ಎಂಬ ಬಗ್ಗೆ ಸುದೀಪ್ ಕೊಟ್ಟ ಸ್ಪಷ್ಟನೆಯ ಹಿಂದಿನ ಅಸಲಿಯತ್ತೇನು?
ಒಟ್ಟಾರೆ ಟೀಸರ್ ಅಂತೂ ಬಹಳವಾಗಿ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಸುದೀಪ್ ಹೇಳುವ ಆ ‘ಬಾ ಬಾ ಬ್ಲಾಕ್ ಶೀಪ್’ ಪದ್ಯ ಮತ್ತು ಅದರಲ್ಲಿ ಬರುವ ಸಾಲುಗಳು. ಸುದೀಪ್ ಟೀಸರ್ನಲ್ಲಿ ಹೇಳುವ ಪದ್ಯದ ಕೊನೆಯ ಸಾಲಿನ ತಾತ್ಪರ್ಯ ಹೀಗಿದೆ, ‘ನೀನು ನನ್ನನ್ನು ಕೆಣಕಬಾರದ ರೀತಿ ಕೆಣಕಿದ್ದೀಯ, ನಾನೀಗ ಆಟವನ್ನು ಮುಗಿಸುತ್ತೇನೆ’. ಈ ಸಾಲನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುವುದಾದರೆ ‘ಮ್ಯಾಕ್ಸ್’ ಸಿನಿಮಾ ಒಂದು ರಿವೇಂಜ್ ಆಕ್ಷನ್ ಡ್ರಾಮಾ ಜಾನರ್ನ ಸಿನಿಮಾ ಆಗಿರುವ ಸಾಧ್ಯತೆ ಇದೆ. ಟೀಸರ್ನಲ್ಲಿ ಸುದೀಪ್, ಕಮಿಡಿಯನ್ ಸುನಿಲ್ ಪಾತ್ರಗಳು ಗಮನ ಸೆಳೆಯುತ್ತಿದೆ. ಜೊತೆಗೆ ಹಿನ್ನೆಲೆ ಸಂಗೀತವು ಸಹ ತುಸು ಭಿನ್ನವಾಗಿದೆ. ಸಣ್ಣದಾಗಿ ತಮಿಳಿನ ‘ವಿಕ್ರಂ’ ಸಿನಿಮಾದ ಸಂಗೀತವನ್ನು ನೆನಪಿಸುವಂತಿದೆ.
‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಇನ್ನಿತರರು ನಟಿಸಿದ್ದಾರೆ ಆದರೆ ಯಾರೂ ಟೀಸರ್ನಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾದ ಬಿಡುಗಡೆ ದಿನಾಂಕದ ಘೋಷಣೆ ಮಾಡಿಲ್ಲವಾದರೂ ಆದಷ್ಟೂ ಬೇಗ ಚಿತ್ರಮಂದಿರಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನು ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ತಮಿಳಿನ ಯಶಸ್ವಿ ನಿರ್ಮಾಪಕ ಕಲೈಪುಲಿ ಎಸ್ ತನು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Tue, 16 July 24