ತುಂಬ ಅದ್ದೂರಿಯಾಗಿ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ವಿಶ್ವಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕದ ಎಲ್ಲೆಡೆ ಕಿಚ್ಚ ಸುದೀಪ್ (Kichcha Sudeep) ಅಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ (ಜುಲೈ 28) ಮುಂಜಾನೆಯೇ ಹಲವು ಕಡೆಗಳಲ್ಲಿ ‘ವಿಕ್ರಾಂತ್ ರೋಣ’ ಅಬ್ಬರ ಆರಂಭಿಸಲಿದ್ದಾನೆ. 3ಡಿ ವರ್ಷನ್ನಲ್ಲಿ ಈ ಚಿತ್ರ ಮೂಡಿಬಂದಿರುವುದರಿಂದ ಹೈಪ್ ಹೆಚ್ಚಾಗಿದೆ. ಮೊದಲ ದಿನದ ಬಹುತೇಕ ಟಿಕೆಟ್ಗಳು (Vikrant Rona Tickets) ಸೋಲ್ಡ್ ಔಟ್ ಆಗಿವೆ. 3ಡಿಯಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಳ್ಳುವುದು ಖಚಿತವಾಗಿದೆ.
ಭಾನುವಾರ (ಜುಲೈ 24) ಮಧ್ಯಾಹ್ನದಿಂದಲೇ ‘ವಿಕ್ರಾಂತ್ ರೋಣ’ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭ ಆಯಿತು. ಸಿನಿಪ್ರಿಯರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮೊದಲ ದಿನದ ಬಹುತೇಕ ಎಲ್ಲ ಶೋಗಳು ಸಹ ಹೌಸ್ಫುಲ್ ಪ್ರದರ್ಶನ ಕಾಣಲಿವೆ. ವೀಕೆಂಡ್ನಲ್ಲಿ ಈ ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಥಿಯೇಟರ್ಗೆ ಬರಲಿದ್ದಾರೆ.
ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿರುವ ‘ವಿಕ್ರಾಂತ್ ರೋಣ’ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಬೃಹತ್ ಸೆಟ್ಗಳನ್ನು ಹಾಕಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಸುದೀಪ್ ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್, ನೀತಾ ಅಶೋಕ್, ನಿರೂಪ್ ಭಂಡಾರಿ ಮುಂತಾದ ಕಲಾವಿದರು ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸುದೀಪ್ ಹೆಜ್ಜೆ ಹಾಕಿರುವ ‘ರಾ ರಾ ರಕ್ಮಮ್ಮ..’ ಹಾಡನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಹಲವು ಭಾಷೆಗಳಿಗೆ ಡಬ್ ಆಗಿ ‘ವಿಕ್ರಾಂತ್ ರೋಣ’ ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಉತ್ತರ ಭಾರತದ ಮಂದಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಕಾರಣದಿಂದ ದೇಶದ ಹಲವು ನಗರಗಳಿಗೆ ತೆರಳಿ ಸುದೀಪ್ ಮತ್ತು ಚಿತ್ರತಂಡದವರು ಪ್ರಚಾರ ಮಾಡಿದ್ದಾರೆ. ಹಿಂದಿ ಪ್ರೇಕ್ಷಕರು ಈ ಸಿನಿಮಾಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.