ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ರಿಲೀಸ್ ದಿನಾಂಕ ಮುಂದಕ್ಕೆ; ಚಿತ್ರತಂಡದಿಂದ ಘೋಷಣೆ
Vikrant Rona Release Date: ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ (Corona Cases In India) ಕಾರಣದಿಂದ ಎಲ್ಲ ಉದ್ಯಮಗಳು ಆತಂಕಕ್ಕೆ ಒಳಗಾಗಿವೆ. ಚಿತ್ರರಂಗ ಕೂಡ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಕಿಚ್ಚ ಸುದೀಪ್ ನಟನೆಯ (Kichcha Sudeep) ‘ವಿಕ್ರಾಂತ್ ರೋಣ’ (Vikrant Rona) ಮೇಲೆ ಎಲ್ಲರ ಗಮನ ನೆಟ್ಟಿತ್ತು. ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡುವುದಾಗಿ ಘೋಷಿಸಿದೆ.
‘ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗು ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು, ಪ್ರಪಂಚಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ. ನಿಮ್ಮ ಪ್ರೀತಿ ಹಾಗು ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ, ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎನ್ನುವ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ’ ಎಂದಿದ್ದಾರೆ ಜಾಕ್ ಮಂಜು.
View this post on Instagram
‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್, ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ನಟಿಸಿದ್ದಾರೆ.
ಬೃಹತ್ ಸೆಟ್ಗಳನ್ನು ನಿರ್ಮಿಸಿ ‘ವಿಕ್ರಾಂತ್ ರೋಣ’ ಚಿತ್ರೀಕರಣ ಮಾಡಲಾಗಿದೆ. ಸುದೀಪ್ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್ಗಳು ಗಮನ ಸೆಳೆದಿವೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೈಟಲ್ ಲಾಂಚ್ ಮಾಡಿದ್ದು ಈ ಸಿನಿಮಾದ ವಿಶೇಷವಾಗಿತ್ತು.
ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ಪ್ರಸಾರ ಹಕ್ಕುಗಳನ್ನು ಖರೀದಿಸಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು ಎನ್ನಲಾಗಿತ್ತು. ಆದರೆ, ಇದನ್ನು ಚಿತ್ರತಂಡ ರಿಜೆಕ್ಟ್ ಮಾಡಿದೆ ಎಂದು ವರದಿ ಆಗಿತ್ತು. ತಡವಾದರೂ ‘ವಿಕ್ರಾಂತ್ ರೋಣ’ ವನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡಲು ಸಿನಿಮಾ ತಂಡ ನಿರ್ಧರಿಸಿದೆ. ಚಿತ್ರ 3ಡಿಯಲ್ಲೂ ಸಿದ್ಧಗೊಂಡಿರುವುದು ಇದಕ್ಕೆ ಮುಖ್ಯ ಕಾರಣವಂತೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ನಟಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ; ದೇಶ ಬಿಟ್ಟು ಹೋಗುವಂತಿಲ್ಲ ಜಾಕ್ವೆಲಿನ್ ಫರ್ನಾಂಡಿಸ್
Published On - 5:23 pm, Thu, 27 January 22