ಸುದೀಪ್‌ ಬರ್ತ್‌ಡೇಗೆ ಬಿಗ್‌ ಸರ್ಪ್ರೈಸ್; ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ಸವಿನೆನಪಿನಲ್ಲಿ ಬೃಹತ್ ಐತಿಹಾಸಿಕ ಸಿನಿಮಾ 'ದೇವರಾಯ' ಘೋಷಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಗಾಂಭೀರ್ಯದ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚುತ್ತಿದ್ದು, ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿರುವ ಈ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಚಿತ್ರವು 2027ರ ಡಿಸೆಂಬರ್‌ನಲ್ಲಿ ವಿಶ್ವದ್ಯಂತ ಬಿಡುಗಡೆಯಾಗಲಿದೆ.

ಸುದೀಪ್‌ ಬರ್ತ್‌ಡೇಗೆ ಬಿಗ್‌ ಸರ್ಪ್ರೈಸ್; ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ
ಸುದೀಪ್
Image Credit source: Sudeep

Updated on: Sep 02, 2026 | 11:53 AM

ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಬರ್ತ್‌ಡೇ ಬಿಗ್ ಸರ್ಪ್ರೈಸ್
  • 'ಶ್ರೀ ಕೃಷ್ಣದೇವರಾಯ'ನಾಗಿ ಕಂಬ್ಯಾಕ್
  • ಬೃಹತ್ ಸಿನಿಮಾ 'ದೇವರಾಯ' ಘೋಷಣೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಹುಟ್ಟುಹಬ್ಬದ ದಿನ ಒಂದಾದ ಮೇಲೆ ಒಂದು ಸಿನಿಮಾ ಘೋಷಣೆ ಆಗುತ್ತಿದೆ. ಅವರ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ವಿಜಯನಗರ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ಚಕ್ರವರ್ತಿ ಕೃಷ್ಣದೇವರಾಯನ ಭವ್ಯ ಇತಿಹಾಸವನ್ನು ತೆರೆಯ ಮೇಲೆ ತರಲು ಕಿಚ್ಚ ಸುದೀಪ್ ಸಜ್ಜಾಗಿದ್ದು, ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ‘ದೇವರಾಯ’ ಎಂದು ಶೀರ್ಷಿಕೆ ಇಡಲಾಗಿದೆ.

ವಿಶೇಷ ಕಾನ್ಸೆಪ್ಟ್ ಟೀಸರ್ ಅನಾವರಣ

ಕಿಚ್ಚ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ವಿಶೇಷವಾದ ದಿನದಂದು ಒಂದು ಐತಿಹಾಸಿಕ ಪಾತ್ರ, ಕಾಲವನ್ನು ಮೀರಿ ನಿಲ್ಲುವ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಶ್ರೀ ಕೃಷ್ಣದೇವರಾಯನ ಈ ಪಯಣದ ಭಾಗವಾಗಲು ಹೆಮ್ಮೆ ಎನಿಸುತ್ತಿದೆ’ ಎಂದು ಬರೆದುಕೊಂಡು ಸಿನಿಮಾದ ಕಾನ್ಸೆಪ್ಟ್ ಟೈಟಲ್ ಅನೌನ್ಸ್‌ಮೆಂಟ್ ವೀಡಿಯೋ ಹಂಚಿಕೊಂಡಿದ್ದಾರೆ.

ಬಿಡುಗಡೆಯಾಗಿರುವ ವೀಡಿಯೋದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ, ದೇವಸ್ಥಾನಗಳ ಗೋಪುರಗಳು, ಬೃಹತ್ ಆನೆ ಪಡೆಗಳು, ಯುದ್ಧರಂಗ ಹಾಗೂ ರಾಜ ಗಾಂಭೀರ್ಯದಲ್ಲಿ ನಿಲ್ಲುವ ಕಿಚ್ಚ ಸುದೀಪ್ ಅವರ ಲುಕ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಈ ವಿಡಿಯೋವನ್ನು ಸಂಪೂರ್ಣವಾಗಿ ಎಐನಲ್ಲಿ ಮಾಡಲಾಗಿದೆ.

ರಾಜ್​ಕುಮಾರ್ ಮಾಡಿದ್ದ ಸಿನಿಮಾ

ವಿಜಯನಗರ ಸಾಮ್ರಾಜ್ಯಕ್ಕೆ ಸ್ವರ್ಣಯುಗದ ಮೆರುಗು ತಂದುಕೊಟ್ಟ ಸಾಮ್ರಾಟ್ ಎಂದರೆ ಅದು ಕೃಷ್ಣದೇವರಾಯ. ಅವರ ಯುದ್ಧ ಕೌಶಲ, ಆಡಳಿತ ಚಾಣಾಕ್ಷತೆ ಹಾಗೂ ಸಾಹಿತ್ಯ ಪ್ರೀತಿಯನ್ನು ಬೆಳ್ಳಿತೆರೆಯ ಮೇಲೆ ಮರುಸೃಷ್ಟಿಸಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಈ ಹಿಂದೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಈ ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ದಶಕಗಳ ನಂತರ, ಆಧುನಿಕ ತಂತ್ರಜ್ಞಾನ ಹಾಗೂ ಅದ್ಧೂರಿ ನಿರ್ಮಾಣದೊಂದಿಗೆ ಮೂಡಿಬರಲಿರುವ ಈ ಮಹಾಕಾವ್ಯದಂತಹ ಸಿನಿಮಾ, ಸುದೀಪ್ ಅವರ ವೃತ್ತಿಬದುಕಿನಲ್ಲೇ ಅತ್ಯಂತ ಬೃಹತ್ ಮೈಲಿಗಲ್ಲಾಗುವುದರಲ್ಲಿ ಅನುಮಾನವಿಲ್ಲ.

ಪ್ರಿಯಾ ಸುದೀಪ್ ಅರ್ಪಣೆಯಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್‌ ಮತ್ತು ಕೃತಿ ಪ್ರಸಾದ್‌ ಹಣ ಹೂಡುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್‌ ಅಭಿನಯದ ‘ದಿ ರಾಜಾ ಸಾಬ್’ ಮುಂತಾದ ಸೂಪರ್ ಹಿಟ್ ಪ್ಯಾನ್-ಇಂಡಿಯಾ ಚಿತ್ರಗಳನ್ನು ನಿರ್ಮಿಸಿ ಸದ್ಧು ಮಾಡಿರುವ ಹೆಸರಾಂತ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ದೊಡ್ಡ ಮಟ್ಟದಲ್ಲಿ ಪದಾರ್ಪಣೆ ಮಾಡುತ್ತಿದೆ.

ಇದನ್ನೂ ಓದಿ: ತಮಿಳು ನಿರ್ದೇಶಕನೊಟ್ಟಿಗೆ ಸುದೀಪ್ ಸಿನಿಮಾ, ಚಿತ್ರದ ಹೆಸರೇನು?

ಸದ್ಯಕ್ಕೆ ಫಸ್ಟ್ లుಕ್ ಹಾಗೂ ಟೈಟಲ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವ ಚಿತ್ರತಂಡ, ಸಿನಿಮಾದ ನಿರ್ದೇಶಕರು ಯಾರು ಎಂಬುದನ್ನು ಮಾತ್ರ ಗುಟ್ಟಾಗಿಯೇ ಇಟ್ಟಿದೆ. ವಿಎಫ್‌ಎಕ್ಸ್ ಹಾಗೂ ಬೃಹತ್ ಸೆಟ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯಾವಕಾಶ ಅಗತ್ಯವಿರುವುದರಿಂದ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ವಿಶ್ವದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಪ್ಲಾನ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Wed, 2 September 26

Loading...
Unable to load recommendations.
Follow Us