ಹಲವು ಕಾರಣಗಳಿಂದಾಗಿ ‘ಕೋಟಿ’ ಸಿನಿಮಾ (Kotee Kannada Movie) ಸುದ್ದಿ ಆಗುತ್ತಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡಿದೆ. ಈ ಚಿತ್ರದಲ್ಲಿ ನಟ ಡಾಲಿ ಧನಂಜಯ (Daali Dhananjaya) ಅವರು ಕೋಟಿ ಎಂಬ ಸಾಮಾನ್ಯ ಡ್ರೈವರ್ ಪಾತ್ರವನ್ನು ಮಾಡಿದ್ದಾರೆ. ಯಾರಿಗೂ ಮೋಸ ಮಾಡದೇ ಮತ್ತು ನೋವು ನೀಡದೇ ತಾನು 1 ಕೋಟಿ ರೂಪಾಯಿ ಸಂಪಾದಿಸಬೇಕು ಎಂಬುದು ಈ ಸಿನಿಮಾದ ಕಥಾನಾಯಕನ ಗುರಿ. ಅವನು ಇದನ್ನೆಲ್ಲ ಮಾಡುವುದು ತನ್ನ ಫ್ಯಾಮಿಲಿಗಾಗಿ. ಆ ಹಾದಿಯಲ್ಲಿ ಅವನಿಗೆ ಏನೆಲ್ಲ ಕಷ್ಟಗಳು ಎದುರಾಗುತ್ತವೆ ಎಂಬುದನ್ನು ‘ಕೋಟಿ’ ಸಿನಿಮಾ ನೋಡಿ ತಿಳಿಯಬೇಕು. ಈ ಸಿನಿಮಾದ ಮೊದಲ ಟಿಕೆಟ್ ಈಗ ಕಿಚ್ಚ ಸುದೀಪ್ (Kichcha Sudeep) ಅವರ ಕೈ ಸೇರಿದೆ.
ಜೂನ್ 14ರಂದು ‘ಕೋಟಿ’ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರತಂಡದವರು ಈ ಸಿನಿಮಾದ ಮೊದಲ ಟಿಕೆಟ್ ಅನ್ನು ಕಿಚ್ಚ ಸುದೀಪ್ ಅವರಿಗೆ ನೀಡಿದ್ದಾರೆ. ಅದ್ದೂರಿಯಾಗಿ ನಡೆದ ‘ಕೋಟಿ’ ಚಿತ್ರದ ವಿಶೇಷ ಪ್ರೀ-ರಿಲೀಸ್ ಟಿವಿ ಕಾರ್ಯಕ್ರಮಕ್ಕೆ ನಟ ಸುದೀಪ್ ಅವರು ಆಗಮಿಸಿದ್ದರು. ಒಂದು ಗಂಟೆಗೂ ಹೆಚ್ಚು ಸಮಯ ಅವರು ವೇದಿಕೆಯ ಮೇಲಿದ್ದು ಅಭಿಮಾನಿಗಳನ್ನು ರಂಜಿಸಿದರು. ಈ ವೇದಿಕೆಯಲ್ಲಿ ‘ಕೋಟಿ’ ಚಿತ್ರತಂಡದವರು ಸುದೀಪ್ಗೆ ಮೊದಲ ಟಿಕೆಟ್ ನೀಡಿ, ಅವರಿಂದ ಶುಭ ಹಾರೈಕೆ ಪಡೆದರು.
ಈ ಸಂದರ್ಭದಲ್ಲಿ ಸುದೀಪ್ ಅವರು ‘ಕೋಟಿ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಿನಿಮಾಗೆ ಪರಮ್ ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರು ‘ಕೋಟಿ’ ಖಂಡಿತಾ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಡಾಲಿ ಧನಂಜಯ್ ಜೊತೆ ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ರಂಗಾಯಣ ರಘು, ಸರ್ದಾರ್ ಸತ್ಯ, ತಾರಾ, ಪೃಥ್ವಿ ಶಾಮನೂರು, ಅಭಿಷೇಕ್ ಶ್ರೀಕಾಂತ್, ತನುಜಾ ವೆಂಕಟೇಶ್, ವಿಜಯ್ ಶೋಭರಾಜ್ ಪವೂರ್ ಸೇರಿದಂತೆ ಹಲವು ನಟಿಸಿದ್ದಾರೆ.
ಇದನ್ನೂ ಓದಿ: ‘ಕೋಟಿ’ ಸಿನಿಮಾ ಟ್ರೇಲರ್ ಮೂಲಕ ಕೌತುಕ ಹೆಚ್ಚಿಸಿದ ಡಾಲಿ, ಪರಮ್
ಹಲವು ವರ್ಷಗಳ ಕಾಲ ‘ಕಲರ್ಸ್ ಕನ್ನಡ’ ವಾಹಿನಿಯನ್ನು ಮುನ್ನಡೆಸಿದ ಪರಮೇಶ್ವರ್ ಗುಂಡ್ಕಲ್ (ಪರಮ್) ಅವರು ‘ಕೋಟಿ’ ಸಿನಿಮಾ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ‘ಕೋಟಿ’ ಸಿನಿಮಾದ 5 ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನೋಬಿನ್ ಪೌಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಅರುಣ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.