ನೈಜ ಘಟನೆ ಆಧರಿಸಿ ತಯಾರಾಗಿರುವ ‘19.20.21’ ಸಿನಿಮಾದ (19.20.21 Movie) ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದುಕೊಂಡಿವೆ. ಈಗಾಗಲೇ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿರುವ ಟ್ರೇಲರ್ ಮೂಲಕ ಈ ಚಿತ್ರದ ಬಗ್ಗೆ ಸಖತ್ ಕೌತುಕ ನಿರ್ಮಾಣ ಆಗಿದೆ. ಮಂಸೋರೆ (Mansore) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಮಾರ್ಚ್ 3ರಂದು ‘19.20.21’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಒಂದು ಹೊಸ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸುವ ಕೆಲಸ ಆಗಿದೆ. ರಂಗಭೂಮಿ ಕಲಾವಿದ ಶೃಂಗ ಬಿ.ವಿ. (Shrunga BV) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಶೃಂಗ ಬಿ.ವಿ. ಕಾಣಿಸಿಕೊಂಡಿರುವ ಈ ಹೊಸ ಪೋಸ್ಟರ್ನಲ್ಲಿ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ಸರಪಳಿಯಿಂದ ಬಂಧಿತನಾಗಿರುವ ನಾಯಕ ಪೊಲೀಸ್ ಕಾವಲಿನ ನಡುವೆ ಪರೀಕ್ಷೆ ಬರೆಯುತ್ತಿರುವ ದೃಶ್ಯ ಈ ಪೋಸ್ಟರ್ನಲ್ಲಿದೆ. ‘ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದರೆ ಹಾಳಾಗೋದು ಕೇವಲ ವಿದ್ಯಾರ್ಥಿಯ ಕೈಬರಹ ಅಷ್ಟೇ ಅಲ್ಲ, ದೇಶದ ಹಣೆಬರಹ ಕೂಡ. ನೆನಪಿರಲಿ’ ಎಂಬ ಕ್ಯಾಪ್ಷನ್ನೊಂದಿಗೆ ನಿರ್ದೇಶಕ ಮಂಸೋರೆ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ.
ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದರೆ ಹಾಳಾಗೋದು ಕೇವಲ ವಿಧ್ಯಾರ್ಥಿಯ ಕೈಬರಹ ಅಷ್ಟೇ ಅಲ್ಲಾ, ದೇಶದ ಹಣೆಬರಹ ಕೂಡ. ನೆನಪಿರಲಿ.#Film192021#InCinemas3rdMarch#Dcreations #SatyaHegdeStudios pic.twitter.com/Ks5wQw8aeb
— ಮಂಸೋರೆ/ManSoRe (@mansore25) February 24, 2023
‘19.20.21’ ಚಿತ್ರದ ಹಾಡುಗಳಿಗೆ ಬಿಂದು ಮಾಲಿನಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ‘ಹಾಡು ಪಾಡು ಇವರ ಸಿಂಗಾರ, ನೋಡಾ ಬಾರ ಭುವಿಗೆ ಮಾಯ್ಕಾರ..’ ಗೀತೆ ಬಿಡುಗಡೆ ಆಗಿದೆ. ಕಿರಣ್ ಕಾವೇರಪ್ಪ ಹಾಗೂ ಉದಯ್ ರಾಜ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಗೀತೆಗೆ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ಉಮಾ ವೈಜಿ, ಮೋಹನ್ ಕುಮಾರ್, ಶೃಂಗ ಬಿ.ವಿ. ಧ್ವನಿ ನೀಡಿದ್ದಾರೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಸಹ ನಿರ್ಮಾಣವಿದೆ.
ಇದನ್ನೂ ಓದಿ: Mansore: ‘19.20.21’ ಟ್ರೇಲರ್ಗೆ ಭರಪೂರ ಮೆಚ್ಚುಗೆ; ಮಂಸೋರೆ ನಿರ್ದೇಶನದ ಸಿನಿಮಾ ಮಾರ್ಚ್ 3ಕ್ಕೆ ರಿಲೀಸ್
ಶೃಂಗ ಬಿ.ವಿ., ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:46 pm, Sun, 26 February 23