ಟ್ರೆಂಡ್ ಆಗುತ್ತಿದೆ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ‘ಫಿರಾಕೋ ಮಾರ್..’ ರ‍್ಯಾಪ್ ಸಾಂಗ್
ಟೈಟಲ್ನಿಂದಲೇ ಗಮನ ಸೆಳೆದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ನಡುವೆ ಹೊಸ ಹಾಡಿನಿಂದ ಸದ್ದು ಮಾಡುತ್ತಿದೆ. ‘ಫಿರಾಕೋ ಮಾರ್..’ ಎಂಬ ರ‍್ಯಾಪ್ ಸಾಂಗ್ ಇದಾಗಿದ್ದು, ಪಾಶಾ ಭಾಯ್ ಸಾಹಿತ್ಯ ಬರೆದು ಹಾಡಿದ್ದಾರೆ. ‘ಸಖತ್ ಸ್ಡುಡಿಯೋ’ ನಿರ್ಮಾಣದ ಈ ಸಿನಿಮಾಗೆ ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಟ್ರೇಲರ್ ಮೂಲಕ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಸುದ್ದಿ ಆಗಿತ್ತು. ನವೆಂಬರ್ 22ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸುವ ರೀತಿಯಲ್ಲಿ ಹೊಸದೊಂದು ಹಾಡು ರಿಲೀಸ್ ಆಗಿದೆ. ಇದು ರ‍್ಯಾಪ್ ಸಾಂಗ್. ‘ಫಿರಾಕೋ ಮಾರ್..’ ಎಂಬ ಈ ಹಾಡಿನಲ್ಲಿ ಡಿಫರೆಂಟ್ ಆದಂತಹ ರಿಲಿಕ್ಸ್ ಇದೆ. ಈ ಹಾಡು ಬಿಡುಗಡೆ ಆದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ. ದಕ್ನಿ ರ‍್ಯಾಪರ್ ಪಾಶಾ ಭಾಯ್ ಅವರು ಈ ಗೀತೆಗೆ ರಿಲಿಕ್ಸ್ ಬರೆದು ಹಾಡಿದ್ದಾರೆ. ಅರ್ಜುನ್ ರಾಮು ಅವರು ಸಂಗೀತ ಸಂಯೋಜಿಸಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಚಿತ್ರದಿಂದ ಈ ಮೊದಲು 2 ಹಾಡುಗಳು ಬಿಡುಗಡೆ ಆಗಿತ್ತು. 3ನೇ ಗೀತೆಯಾಗಿ ‘ಫಿರಾಕೋ ಮಾರ್..’ ರಿಲೀಸ್ ಆಗಿದೆ. ಈ ಸಾಂಗ್ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ರಾಮು ಮಾತನಾಡಿದ್ದಾರೆ. ‘ಮಧ್ಯಮ ವರ್ಗದ ಹುಡುಗರ ಅಗ್ರೆಶನ್ ತೋರಿಸುವ ಒಂದು ಹಾಡು ಈ ಸಿನಿಮಾಗೆ ಅವಶ್ಯಕತೆ ಇತ್ತು. ಪಾಶಾ ಭಾಯ್ ಜೊತೆ ಸೇರಿ ಈ ರ‍್ಯಾಪ್ ಮಾಡಿದ್ದೇವೆ. ಕ್ಲಾಸ್ ಮತ್ತು ಮಾಸ್ ಬಿಜಿಎಮ್ ಇರುವ ಈ ಗೀತೆ ಎಲ್ಲರಿಗೂ ಇಷ್ಟ ಆಗುತ್ತದೆ ಎಂಬ ಭರವಸೆ ನಮಗಿದೆ’ ಎಂದು ಅವರು ಹೇಳಿದ್ದಾರೆ.
ಈ ಹಾಡಿನಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ನಲ್ಲಿ ತೋರಿಸಿದ ವಿಷಯಗಳಿಗೆ ಪುಷ್ಟಿ ನೀಡುವ ಹಾಗೆ ಎರಡೂವರೆ ನಿಮಿಷಗಳ ಈ ಹಾಡು ಮೂಡಿಬಂದಿದೆ. ‘ಸಖತ್ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಬಿಡುಗಡೆ ಆಗಿದೆ.
ಇದನ್ನೂ ಓದಿ: ‘ಮರ್ಯಾದೆ ಪ್ರಶ್ನೆ’ ಟ್ರೇಲರ್ ಬಿಡುಗಡೆ ಮಾಡಿದ ಸುದೀಪ್; ಎಲ್ಲರಿಗೂ ಇಷ್ಟ ಆಯ್ತು
‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಶೈನ್ ಶೆಟ್ಟಿ, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಪ್ರಭು ಮುಂಡ್ಕುರ್, ಪ್ರಕಾಶ್ ತುಮಿನಾಡು, ನಾಗೇಂದ್ರ ಷಾ, ನಂದಗೋಪಾಲ್, ರೇಖಾ ಕೂಡ್ಲಿಗಿ, ಶ್ರವಣ್, ಹರಿಹರನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಂದೀಪ್ ವೆಲ್ಲುರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ‘ಸಕ್ಕತ್ ಸ್ಟೂಡಿಯೋ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಪ್ರದೀಪ ಕಥೆ ಬರೆದಿದ್ದಾರೆ. ನಾಗರಾಜ ಸೋಮಯಾಜಿ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.