‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​

Kshethrapathi Movie: ನವೀನ್​ ಶಂಕರ್​ ಮತ್ತು ಡಾಲಿ ಧನಂಜಯ ಅವರದ್ದು ಹಲವು ವರ್ಷಗಳ ಸ್ನೇಹ. ಗೆಳೆಯನ ‘ಕ್ಷೇತ್ರಪತಿ’ ಚಿತ್ರಕ್ಕೆ ಧನಂಜಯ ಸಾಥ್​ ನೀಡಿದ್ದಾರೆ.

‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​
ಸಿಂಪಲ್ ಸುನಿ, ಡಾಲಿ ಧನಂಜಯ, ನವೀನ್ ಶಂಕರ್
Edited By:

Updated on: Jun 02, 2022 | 7:30 AM

ನಟ ನವೀನ್​ ಶಂಕರ್​ (Naveen Shankar) ಅವರು ‘ಗುಳ್ಟು’ ಸಿನಿಮಾದ ಮೂಲಕ ಜನಮೆಚ್ಚುಗೆ ಪಡೆದುಕೊಂಡರು. ಭಿನ್ನ ಕಥಾಹಂದರ ಹೊಂದಿದ್ದ ಆ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿತ್ತು. ಆ ಬಳಿಕ ನವೀನ್​ ಶಂಕರ್​ ಅವರಿಗೆ ಗಾಂಧಿನಗರದಲ್ಲಿ ಬೇಡಿಕೆ ಸೃಷ್ಟಿ ಆಯಿತು. ಕನ್ನಡ ಚಿತ್ರರಂಗದಲ್ಲಿ ಅವರೊಬ್ಬರ ಪ್ರತಿಭಾವಂತ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ನವೀನ್​ ಶಂಕರ್ ನಟನೆಯ ಹೊಸ ಸಿನಿಮಾ ‘ಕ್ಷೇತ್ರಪತಿ’ ಕೂಡ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ಅದಕ್ಕಾಗಿ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​ ರಿಲೀಸ್​ ಮಾಡಿರುವುದು ಡಾಲಿ ಧನಂಜಯ್​ (Daali Dhananjay) ಎಂಬುದು ವಿಶೇಷ. ಈ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಸಿಂಪಲ್​ ಸುನಿ (Simple Suni) ಕೂಡ ಆಗಮಿಸಿ ಶುಭ ಕೋರಿದ್ದಾರೆ. ‘ಕ್ಷೇತ್ರಪತಿ’ ಸಿನಿಮಾದ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಶ್ರೀಕಾಂತ್​ ಕಟಗಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಆ್ಯಕ್ಷನ್​-ಕಟ್​ ಪ್ರಯತ್ನ. ‘ಕೆಜಿಎಫ್​: ಚಾಪ್ಟರ್​ 2’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ್​ ಕಟಗಿ ಅವರು ‘ಗುಳ್ಟು’ ಸಿನಿಮಾ ನೋಡಿ ನವೀನ್​ ಶಂಕರ್​ ಅವರ ನಟನೆಯನ್ನು ಮೆಚ್ಚಿಕೊಂಡಿದ್ದರು. ಈಗ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ‘ರೈತನಿಗೆ ಸಂಸ್ಕೃತದಲ್ಲಿ 21 ಹೆಸರುಗಳಿವೆ. ಅದರಲ್ಲಿ ‘ಕ್ಷೇತ್ರಪತಿ’ ಸಹ ಒಂದು. ಇದು ಅಪ್ಪ-ಮಗನ ಬಾಂಧವ್ಯದ ಸಿನಿಮಾ ಕೂಡ ಹೌದು. ಗದಗಿನ ತಿಮ್ಮಾಪುರದಲ್ಲಿ ಬಹುತೇಕ ಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

ಧನಂಜಯ ಅವರು ಕಿರುಚಿತ್ರಗಳನ್ನು ಮಾಡುತ್ತಿದ್ದ ಕಾಲದಿಂದಲೂ ನವೀನ್ ಪರಿಚಿತರಾಗಿದ್ದರು. ‘ಯಾವುದೇ ಬ್ಯಾಗ್ರೌಂಡ್ ಇಲ್ಲದೆ ನವೀನ್ ಇಷ್ಟು ಬೆಳದಿರುವುದು ನಿಜಕ್ಕೂ ಹೆಮ್ಮೆ. ಚಿತ್ರದಲ್ಲಿ ಬಸವ ಎಂಬ ಪಾತ್ರವನ್ನು ನವೀನ್​ ಮಾಡಿದ್ದಾರೆ. ಈ ಬಸವನಿಗೆ ನಮ್ಮ ಕ್ರಾಂತಿಕಾರಿ ಬಸವಣ್ಣನವರು ಆದರ್ಶವಾಗಲಿ. ಚಿತ್ರ ಜಯಭೇರಿ ಬಾರಿಸಲಿ’ ಎಂದು ಧನಂಜಯ ಹಾರೈಸಿದ್ದಾರೆ.

ಇದನ್ನೂ ಓದಿ
ಅಭಿಷೇಕ್​ ಅಂಬರೀಷ್ ನಟನೆಯ ‘ಬ್ಯಾಡ್​ ಮ್ಯಾನರ್ಸ್​​’ ಸೆಟ್​ನಲ್ಲಿ ಡಾಲಿ ಧನಂಜಯ; ಇಲ್ಲಿದೆ ವಿಡಿಯೋ
Dhananjay: ಧನಂಜಯ್- ಅದಿತಿ ಅಭಿನಯದ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ರಿಲೀಸ್ ಡೇಟ್ ಅನೌನ್ಸ್
ಧರಣಿ ಮಂಡಲ ಮಧ್ಯದೊಳಗೆ: ನವೀನ್​ ಶಂಕರ್-ಐಶಾನಿ ಶೆಟ್ಟಿಯ ‘ಮಾತು ಮಾತಲ್ಲೇ..’ ಗೀತೆಗೆ ವಿಜಯ್​ ಪ್ರಕಾಶ್​ ಧ್ವನಿ
ಧನಂಜಯ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ಜಯರಾಜ್​ ಪುತ್ರ ಅಜಿತ್​ ತಕರಾರು ತೆಗೆದಿದ್ದು ಯಾಕೆ? ಇಲ್ಲಿದೆ ಕಾರಣ..

‘ಕ್ಷೇತ್ರಪತಿ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ನವೀನ್​ ಶಂಕರ್​ ಖುಷಿ ಆಗಿದ್ದಾರೆ. ‘ನಾನು ಮನಸ್ಸಿನಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂದುಕೊಳ್ಳುತ್ತಿದ್ದೆ. ಆ ಸಮಯಕ್ಕೆ ಸರಿಯಾಗಿ ನಿರ್ದೇಶಕ ಶ್ರೀಕಾಂತ್ ಅವರು ಹೇಳಿದ ಕಥೆ ಸಹ ಅದೇ ರೀತಿಯ ಇದ್ದಿದ್ದು ಕಾಕತಾಳೀಯ ಎನಿಸಿತು. ನಿರ್ಮಾಪಕರಿಗಾಗಿ ಹುಡುಕಾಟ ಮಾಡಿದೆವು. ಆನಂತರ ನಾವೇ ಕೆಲವು ಸ್ನೇಹಿತರು ಸೇರಿ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭ‌ ಮಾಡಿ ಚಿತ್ರೀಕರಣ ಆರಂಭಿಸಿದ್ದೆವು. ಸಾಕಷ್ಟು ಜನ ಸ್ನೇಹಿತರು ನಿರ್ಮಾಣಕ್ಕೆ ಸಾಥ್​ ನೀಡಿದರು’ ಎಂದು ಚಿತ್ರ ಆರಂಭವಾದ ಬಗೆಯಲ್ಲಿ ವಿವರಿಸಿದ್ದಾರೆ ನವೀನ್​ ಶಂಕರ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.