‘ಮೇರುನಟ’ ಡಾ. ರಾಜ್ಕುಮಾರ್ (Dr Rajkumar) ಅವರ ಸಿನಿಮಾಗಳೆಂದರೆ ಪ್ರೇಕ್ಷಕರಿಗೆ ಇಂದಿಗೂ ಫೇವರಿಟ್. ಎಷ್ಟೇ ವರ್ಷಗಳು ಕಳೆದರೂ ಅವರ ಚಿತ್ರಗಳ ಸೆಳೆತ ಕಡಿಮೆ ಆಗಿಲ್ಲ. ಅದಕ್ಕೆ ಕಾರಣ ಹಲವು. ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಡಾ. ರಾಜ್ಕುಮಾರ್ ಅವರು ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಅವರ ಆಯ್ಕೆಗಳ ಹಿಂದೆ ಸಹೋದರ ವರದಪ್ಪ, ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಮುಂತಾದವರು ಇರುತ್ತಿದ್ದರು. ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಬಹಳ ಎಚ್ಚರಿಕೆಯಿಂದ ಸ್ಕ್ರಿಪ್ಟ್ ಕೆಲಸಗಳನ್ನು ಮಾಡಲಾಗುತ್ತಿತ್ತು. ಅದೆಲ್ಲದರ ಪರಿಣಾಮವಾಗಿ ಡಾ. ರಾಜ್ಕುಮಾರ್ ಸಿನಿಮಾಗಳು ಜನಮನ ಗೆಲ್ಲುವ ರೀತಿಯಲ್ಲಿ ಮೂಡಿಬರುತ್ತಿದ್ದವು. ವೃತ್ತಿಜೀವನದಲ್ಲಿ ಅಣ್ಣಾವ್ರು ಕೆಲವೊಂದು ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅವುಗಳ ಪೈಕಿ ‘ಅಮೋಘವರ್ಷ ನೃಪತುಂಗ’ (Amoghavarsha Nrupatunga) ಚಿತ್ರ ಕೂಡ ಒಂದು. ಅದು ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು.
ಡಾ. ರಾಜ್ ಅವರ 200ನೇ ಸಿನಿಮಾವಾಗಿ ‘ಅಮೋಘವರ್ಷ ನೃಪತುಂಗ’ ಚಿತ್ರ ಮೂಡಿಬರಬೇಕಿತ್ತು. ಆ ಸಿನಿಮಾ ಬಗ್ಗೆ ಪಾರ್ವತಮ್ಮ ಹಲವು ಆಸೆಗಳನ್ನು ಇಟ್ಟುಕೊಂಡಿದ್ದರು. ಆ ಬಗ್ಗೆ ಅವರು ನೀಡಿದ ವಿಡಿಯೋ ಸಂದರ್ಶನದ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಅಮೋಘವರ್ಷ ನೃಪತುಂಗ’ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು.
‘ಈ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಥೆ, ಚಿತ್ರಕಥೆ, ಡೈಲಾಗ್ ಎಲ್ಲಾ ರೆಡಿ ಆಗಿದೆ. ರೆಕಾರ್ಡಿಂಗ್ ದೊಡ್ಡದಾಗಿ ಮಾಡಬೇಕು. ಅದಕ್ಕೆ ಬೇಕಾದ ತಯಾರಿ ಮಾಡುತ್ತಿದ್ದೇವೆ. ಲೊಕೇಷನ್ ನೋಡೋಕೆ ಹೋಗಬೇಕಿದೆ. ಲೊಕೇಷನ್ ನೋಡಿಕೊಂಡು ಬಂದಮೇಲೆ ಪ್ರಾಯಶಃ ನವೆಂಬರ್ನಲ್ಲಿ ಶೂಟಿಂಗ್ ಶುರು ಮಾಡುತ್ತೇವೆ’ ಎಂದು ಪಾರ್ವತಮ್ಮ ರಾಜ್ಕುಮಾರ್ ಹೇಳಿದ್ದರು.
‘ಇದು ನನ್ನ 35 ವರ್ಷಗಳ ಆಸೆ. ಈ ಸಿನಿಮಾದ ಎರಡೂ ಪಾತ್ರವನ್ನು ಡಾ. ರಾಜ್ಕುಮಾರ್ ಅವರೇ ಮಾಡಬೇಕು. ತಾರಾಸು ಅವರು ಬರೆದ ಕಥೆಯನ್ನು ನಾನು ಓದಿದಾಗಿನಿಂದಲೂ ನನಗೆ ಆ ಆಸೆ ಇದೆ. ಅದನ್ನು ಸಿನಿಮಾ ಮಾಡಬೇಕು ಎಂದುಕೊಂಡಾಗ ನನಗೆ 15 ವರ್ಷ ವಯಸ್ಸು. ಅಷ್ಟರಲ್ಲಾಗಲೇ ನಾನು ಮದ್ರಾಸ್ಗೆ ಬಂದುಬಿಟ್ಟಿದ್ದೆ’ ಎಂದು ಪಾರ್ವತಮ್ಮ ರಾಜ್ಕುಮಾರ್ ಹೇಳಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣವಾಗಲೇ ಇಲ್ಲ ಎಂಬುದು ಬೇಸರದ ಸಂಗತಿ.
shivanna interview before launch of appu and about Nrupatunga movie ? @Prasann30238157 @bhoota_ @Dayanandkichcha @gundigre @ThisisDeepakR @ShivannaFandom #VikrantRona #KFI #bairagi #777charlie #KGFChapter2 pic.twitter.com/66l0XKO9mJ
— Nrupatunga Pulikeshi Ballala (@buddhikajames) July 9, 2022
ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್ಕುಮಾರ್. ಅದರಲ್ಲೂ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ‘ಅಮೋಘವರ್ಷ ನೃಪತುಂಗ’ ಚಿತ್ರದಲ್ಲಿ ಅವರನ್ನು ನೋಡಬೇಕು ಎಂಬ ಕನಸು ನನಸಾಗಲಿಲ್ಲವಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಇದೆ.
Published On - 10:31 am, Mon, 18 July 22