ಸ್ನೀಕ್ ಪೀಕ್ ಟೀಸರ್ ಬಿಡುಗಡೆ ಮಾಡಿದ ‘ಪಿವೋಟ್’ ಚಿತ್ರತಂಡ
ಮದ್ಯ ವ್ಯಸನದ ಕಹಾನಿಯನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಪಿವೋಟ್’ ಸಿನಿಮಾವನ್ನು ಮಾಡಲಾಗಿದೆ. ಕಾರ್ತಿಕ್ ರಾಜನ್ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಅಶ್ವಿನಿ ಚಾವ್ರೆ, ಎಂ.ಎನ್. ಲಿಖಿತ್ ಜೋಡಿಯಾಗಿ ನಟಿಸಿದ್ದಾರೆ. ಸ್ನೀಕ್ ಪೀಕ್ ಮೂಲಕ ಕುತೂಹಲ ಮೂಡಿಸಲಾಗುತ್ತಿದೆ. ಈ ಸಿನಿಮಾದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಅತಿಯಾಗಿ ಕುಡಿತದ ಚಟಕ್ಕೆ ಒಳಗಾದವರನ್ನು ಪಿವೋಟ್ ಅಂತಾರೆ. ಈಗ ಅದೇ ಶೀರ್ಷಿಕೆಯಲ್ಲಿ ಒಂದು ಸಿನಿಮಾ ಮೂಡಿಬರುತ್ತಿದೆ. ಮದ್ಯವ್ಯಸನಕ್ಕೆ ದಾಸರಾದ ವ್ಯಕ್ತಿಗಳನ್ನು ಅದರಿಂದ ಹೊರಗೆ ತರುವುದು ಸುಲಭವಲ್ಲ. ಈ ರೀತಿಯ ಕಥೆಯನ್ನೇ ಇಟ್ಟುಕೊಂಡು ‘ಪಿವೋಟ್’ ಸಿನಿಮಾವನ್ನು ಮಾಡಲಾಗಿದೆ. ಹೊಸ ನಿರ್ದೇಶಕ ಕಾರ್ತಿಕ್ ರಾಜನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಎಂ.ಎನ್. ಲಿಖಿತ್ ಮತ್ತು ಮರಾಠಿ ಮೂಲದ ನಟಿ ಅಶ್ವಿನಿ ಚಾವ್ರೆ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
‘ಪಿವೋಟ್’ ಸಿನಿಮಾಗೆ ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಗಣ ರಾಜ್ಯೋತ್ಸವದ ಪ್ರಯುಕ್ತ ಇಂದು (ಜನವರಿ 26) ಸಂಜೆ ಈ ಸಿನಿಮಾದ ಸ್ನೀಕ್ ಪೀಕ್ ಟೀಸರ್ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಕಾನ್ಸೆಪ್ಟ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಸಾಮಾನ್ಯವಾಗಿ ಕುಡುಕರಿಗೆ ಎಲ್ಲರೂ ಬೈಯುತ್ತಾರೆ. ಹಾಗಿದ್ದರೂ ಅಂಥವರ ಕಥೆಯನ್ನೇ ಕೇಂದ್ರವಾಗಿ ಇಟ್ಟುಕೊಂಡ ಸಿನಿಮಾ ಮಾಡಲಾಗಿದೆ. ‘ಮದ್ಯವ್ಯಸನಿಗಳನ್ನು ಬಯ್ಯುವುದಷ್ಟೇ ನಮಗೆ ಗೊತ್ತು. ಆದರೆ ಆತ ಯಾಕೆ ಆ ರೀತಿ ಆದ? ಅದಕ್ಕೆ ಕಾರಣವಾದವರು ಯಾರು ಅಂತ ನಾವು ಒಮ್ಮೆಯೂ ಯೋಚಿಸಲ್ಲ. ಆ ಪ್ರಶ್ನೆಗಳ ಹಿಂದೆ ಕಥೆಗಳು ಇರುತ್ತವೆ. ಈ ಥರದ ಹಲವು ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಿದೆ’ ಎಂದಿದ್ದಾರೆ ಚಿತ್ರತಂಡದವರು.
ಡೈರೆಕ್ಟರ್ ಕಾರ್ತಿಕ್ ರಾಜನ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಈಗಾಗಲೇ 2 ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಈಗ ‘ಪಿವೋಟ್’ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈ ಮೊದಲು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಈಗ ಸ್ನೀಕ್ ಪೀಕ್ ಮೂಲಕ ಸಿನಿಮಾದ ಕೌತುಕವನ್ನು ಹೆಚ್ಚಿಸಲು ಹೊರಟಿದೆ ಚಿತ್ರತಂಡ.
ಇದನ್ನೂ ಓದಿ: ಬಲವಂತದ ಮದುವೆ, ನಟಿಯ ವಿರುದ್ಧ ನಿರ್ದೇಶಕ ದೂರು
‘ಪಿವೋಟ್’ ಸಿನಿಮಾದಲ್ಲಿ ಒಟ್ಟು 6 ಗೀತೆಗಳು ಇವೆ. ಬಿ.ಆರ್. ಹೇಮಂತ್ ಕುಮಾರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಶಂಕು ಅವರು ಛಾಯಾಗ್ರಹಣ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಯುವಜನತೆಗೆ ಬೇಕಾಗುವಂತಹ ಸಂದೇಶ ನೀಡುವುದಾಗಿ ಚಿತ್ರತಂಡ ಹೇಳಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ‘ಪಿವೋಟ್’ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.