Prasad Bidapa: ಅಂಬರೀಷ್ ಕುಟುಂಬದ ಜತೆ ಸಂಬಂಧ ಬೆಳೆಸಿದ್ದರ ಬಗ್ಗೆ ಮೊದಲ ಬಾರಿ ಮಾತಾಡಿದ ಅವಿವಾ ತಂದೆ ಪ್ರಸಾದ್ ಬಿಡಪ
Abhishek Ambareesh Aviva Bidapa Marriage: ‘ಸುಮಲತಾ ಅಂಬರೀಷ್ ಅವರ ಮನೆಗೆ ನಮ್ಮ ಮಗಳು ಹೋಗುತ್ತಿರುವುದಕ್ಕೆ ನಮಗೆ ಖುಷಿ ಇದೆ. ಅವರ ಮನೆಯಲ್ಲಿ ಮಗಳು ಚೆನ್ನಾಗಿರುತ್ತಾಳೆ ಎಂಬ ನಂಬಿಕೆ ಇದೆ’ ಎಂದು ಪ್ರಸಾದ್ ಬಿಡಪ ಹೇಳಿದ್ದಾರೆ.
‘ರೆಬೆಲ್ ಸ್ಟಾರ್’ ಅಂಬರೀಷ್ ಅವರು ಸಿನಿಮಾ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕೈ ಹಿಡಿದಿರುವ ಅವಿವಾ ಬಿಡಪ ಫ್ಯಾಷನ್ ಲೋಕದವರು. ಅವಿವಾ ತಂದೆ ಪ್ರಸಾದ್ ಬಿಡಪ (Prasad Bidapa) ಕೂಡ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಕುಟುಂಬದವರು ಇಂದು ಸಂಬಂಧಿಕರಾಗಿದ್ದಾರೆ. ಅವಿವಾ ಬಿಡಪ (Aviva Bidapa) ಜೊತೆ ಅಭಿಷೇಕ್ ಅಂಬರೀಷ್ ಅವರ ಮದುವೆ ನೆರವೇರಿದೆ. ವಿವಾಹದ ಬಳಿಕ ಪ್ರಸಾದ್ ಬಿಡಪ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಮ್ಮ ಮಗಳು ಅಂಬರೀಷ್ ಕುಟುಂಬದ ಸೊಸೆ ಆಗಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
‘ನಮ್ಮ ಮನೆ ಇರುವುದು ಯಲಹಂಕದಲ್ಲಿ. ಈಗ ನಮ್ಮ ಮಗಳ ಹೊಸ ಮನೆ ಇರುವುದು ಜೆಪಿ ನಗರದಲ್ಲಿ. ಥ್ಯಾಂಕ್ ಗಾಡ್… ಅಷ್ಟೇನೂ ದೂರ ಇಲ್ಲ. ನಮಗೆ ತುಂಬ ಸಂತೋಷ ಆಗುತ್ತಿದೆ. ಯಾಕೆಂದರೆ ಅಂಬರೀಷ್ ಅವರು ನಮಗೆ ತುಂಬ ಹಳೆಯ ಫ್ಯಾಮಿಲಿ ಫ್ರೆಂಡ್. ಅಂಬರೀಷ್ ಅವರು ನನಗೆ ಚೆನ್ನಾಗಿ ಗೊತ್ತಿದ್ದರು. ಅವರು ಬಹಳ ಒಳ್ಳೆಯವರಾಗಿದ್ದರು. ಸುಮಲತಾ ಅಂಬರೀಷ್ ಕೂಡ ಉತ್ತಮ ವ್ಯಕ್ತಿ. ಅವರ ಮನೆಗೆ ನಮ್ಮ ಮಗಳು ಹೋಗುತ್ತಿರುವುದಕ್ಕೆ ನಮಗೆ ಖುಷಿ ಇದೆ. ಅವರ ಮನೆಯಲ್ಲಿ ಮಗಳು ಚೆನ್ನಾಗಿರುತ್ತಾಳೆ ಎಂಬ ನಂಬಿಕೆ ಇದೆ’ ಎಂದು ಪ್ರಸಾದ್ ಬಿಡಪ ಹೇಳಿದ್ದಾರೆ.
ಇದನ್ನೂ ಓದಿ: Abhishek Ambareesh: ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಅದ್ದೂರಿ ವಿವಾಹದ ಸುಂದರ ವಿಡಿಯೋ ವೈರಲ್
‘ಮಂಡ್ಯದಲ್ಲಿ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಮಂಡ್ಯದ ಜೊತೆ ಈಗ ನಮಗೆ ಹೊಸ ಸಂಬಂಧ. ಬೀಗರ ಊಟದ ಬಗ್ಗೆ ನಾನು ಬಹಳ ಕೇಳಿದ್ದೇನೆ. ಅದು ಹೇಗೆ ನಡೆಯುತ್ತದೆ ಎಂಬ ಬಗ್ಗೆ ನನಗೂ ಕೌತುಕ ಇದೆ’ ಎಂದಿದ್ದಾರೆ ಪ್ರಸಾದ್ ಬಿಡಪ. ಅಪಾರ ಸಂಖ್ಯೆಯ ಅಭಿಮಾನಿಗಳು ಬೀಗರ ಊಟದಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಯ ಕಲರ್ಫುಲ್ ಫೋಟೋಸ್ ಇಲ್ಲಿದೆ
‘ಫ್ಯಾಷನ್ ವಿಚಾರದಲ್ಲಿ ನನ್ನ ಮಗಳು ನನಗಿಂತಲೂ ಮುಂದೆ ಹೋಗಿದ್ದಾಳೆ. ಅವಳ ಕಾಸ್ಟ್ಯೂಮ್ಗಳನ್ನು ಅವಳೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಅವಳ ಮದುವೆ ಸೀರೆಯನ್ನು ಆಯ್ಕೆ ಮಾಡಿದ್ದು ಸುಮಲತಾ ಅಂಬರೀಷ್. ಜೂನ್ 7ರಂದು ಪ್ಯಾಲೇಸ್ ಗ್ರೌಂಡ್ನಲ್ಲಿ ರಿಸೆಪ್ಷನ್ ಆಗಲಿದೆ. ಅಂದು ಕೂಡ ಅವಿವಾ ಸೀರೆ ಧರಿಸಲಿದ್ದಾಳೆ’ ಎಂದು ಪ್ರಸಾದ್ ಬಿಡಪ ಹೇಳಿದ್ದಾರೆ.
ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಮದುವೆಯ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ದಕ್ಷಿಣ ಭಾರತ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ರಜನಿಕಾಂತ್, ಮೋಹನ್ ಬಾಬು, ಕಿಚ್ಚ ಸುದೀಪ್, ಯಶ್, ಅನಿಲ್ ಕುಂಬ್ಳೆ, ಸುಹಾಸಿನಿ ಮಣಿರತ್ನಂ, ಪವಿತ್ರಾ ಲೋಕೇಶ್, ನರೇಶ್, ವೆಂಕಯ್ಯ ನಾಯ್ಡು, ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂತಾದವರು ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಗೆ ಸಾಕ್ಷಿಯಾದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.