Achar and Co: ‘ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಆಚಾರ್ & ಕೋ’ ಸಿನಿಮಾ ಜುಲೈ 28ಕ್ಕೆ ಬಿಡುಗಡೆ

|

Updated on: Jul 03, 2023 | 9:40 PM

Ashwini Puneeth Rajkumar: ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಮೂಲಕ ‘ಆಚಾರ್ & ಕೋ’ ಚಿತ್ರವನ್ನು ನಿರ್ಮಿಸಿದ್ದಾರೆ. ಸಿಂಧು ಶ್ರೀನಿವಾಸಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ.

Achar and Co: ‘ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಆಚಾರ್ & ಕೋ’ ಸಿನಿಮಾ ಜುಲೈ 28ಕ್ಕೆ ಬಿಡುಗಡೆ
‘ಆಚಾರ್​ & ಕೋ ಸಿನಿಮಾ’ ಪೋಸ್ಟರ್​
Follow us on

ಪುನೀತ್​ ರಾಜ್​ಕುಮಾರ್​ ಅವರು ಪ್ರಾರಂಭಿಸಿದ ‘ಪಿಆರ್​ಕೆ ಪ್ರೊಡಕ್ಷನ್ಸ್’ (PRK productions) ಸಂಸ್ಥೆಯನ್ನು ಈಗ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಬ್ಯಾನರ್​ ಮೂಲಕ ತಯಾರಾಗಿರುವ ‘ಆಚಾರ್ & ಕೋ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿಂಧು ಶ್ರೀನಿವಾಸಮೂರ್ತಿ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರೆಟ್ರೋ ಕಾಲದ ಕಥೆ ಇದೆ. ಮಹತ್ವಾಕಾಂಕ್ಷೆ ಹೊಂದಿರುವ ಆ ಜಮಾನಾದ ಸಹೋದರಿಯರ ಕಹಾನಿಯನ್ನು ‘ಆಚಾರ್ & ಕೋ’ ಚಿತ್ರ (Achar & Co Movie) ವಿವರಿಸಲಿದೆ. ಒಂದೆಡೆ ಆಧುನಿಕತೆಯ ಸವಾಲು, ಇನ್ನೊಂದು ಕಡೆ ತಮ್ಮತನವನ್ನೂ ಬಿಟ್ಟುಕೊಡದೇ ಯಶಸ್ವಿಯಾಗುವ ಕುಟುಂಬದವರ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುವುದು. ಇದು ಹೃದಯಸ್ಪರ್ಶಿ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ರೆಟ್ರೋ ಶೈಲಿಯ ಈ ಸಿನಿಮಾದ ಕಥೆ 1960ರ ಕಾಲಘಟ್ಟದ ಬೆಂಗಳೂರಿನಲ್ಲಿ ಸಾಗುತ್ತದೆ. ಆಗಿನ ಕಾಲದ ಒಂದು ಕುಟುಂಬಕ್ಕೆ ಎದುರಾಗುವ ಸಂಪ್ರದಾಯ ವರ್ಸಸ್​ ಆಧುನಿಕತೆ ಎಂಬ ವಾತಾವರಣದ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಈ ಕಥೆಯಲ್ಲಿ ಸೆಂಟಿಮೆಂಟ್​ ಜೊತೆಗೆ ಹಾಸ್ಯಕ್ಕೂ ಜಾಗ ಇರಲಿದೆ. ಸಮಾಜಕ್ಕೊಂದು ಸಂದೇಶವೂ ಸಿಗಲಿದೆ ಎನ್ನುತ್ತಿದೆ ‘ಆಚಾರ್ & ಕೋ’ ಬಳಗ. ರೆಟ್ರೋ ಸಿನಿಮಾವನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. 60 ಹಾಗೂ 70ರ ದಶಕದ ಬೆಂಗಳೂರನ್ನು ತೋರಿಸಲು ​​ಸೂಕ್ತವಾದ ಕಾಸ್ಟ್ಯೂಮ್​ ಡಿಸೈನ್​ ಹಾಗೂ ಕಲಾ ನಿರ್ದೇಶನ ಮಾಡಲಾಗಿದೆ.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​ ನಿವಾಸಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಾಘಣ್ಣ

ಈ ಸಿನಿಮಾದ ಬಿಡುಗಡೆ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ‘ಎಲ್ಲಾ ವರ್ಗದ ಪ್ರೇಕ್ಷಕರಿಗೆ ಕನೆಕ್ಟ್​ ಆಗುವಂತಹ ಕಥೆ ಈ ಸಿನಿಮಾದಲ್ಲಿದೆ. ಈ ರೀತಿಯ ವಿಶೇಷ ಸಿನಿಮಾವನ್ನು ನಿರ್ಮಾಣ ಮಾಡಿದ್ದಕ್ಕೆ ಖುಷಿ ಇದೆ. ನೂತನ ಬಗೆಯ ಕಥೆಗಳಿಗೆ ವೇದಿಕೆ ಕಲ್ಪಿಸುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಈ ಸಿನಿಮಾ ಕೂಡ ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರತಿಭಾವಂತ ಮಹಿಳಾ ತಂತ್ರಜ್ಞರನ್ನು ಪ್ರೋತ್ಸಾಹಿಸುವ ಮೂಲಕ ಈ ಸಿನಿಮಾ ನಮಗೆ ಹಾಗೂ ಚಿತ್ರರಂಗಕ್ಕೆ ಸ್ಮರಣೀಯವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ’; ಅಶ್ವಿನಿ ಪುನೀತ್​ ರಾಜ್​ಕುಮಾರ್ ಭಾವುಕ ಪತ್ರ  

​​‘ಆಚಾರ್ & ಕೋ’ ಸಿನಿಮಾದ ಹಲವು ವಿಭಾಗಗಳಲ್ಲಿ ಮಹಿಳೆಯರೇ ಇದ್ದಾರೆ. ನಿರ್ಮಾಪಕರು, ನಿರ್ದೇಶಕರು, ಸೌಂಡ್ ಇಂಜಿನಿಯರ್, ಸಂಗೀತ ನಿರ್ದೇಶಕರು, ವಸ್ತ್ರ ವಿನ್ಯಾಸಕರು, ಮುಖ್ಯ ಪಾತ್ರಧಾರಿಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಆ ಕಾರಣದಿಂದ ಈ ಸಿನಿಮಾ ವಿಶೇಷ ಎನಿಸಿಕೊಳ್ಳುತ್ತಿದೆ. ಬಿಂದುಮಾಲಿನಿ ನಾರಾಯಣಸ್ವಾಮಿ ಅವರ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ಅವರ ಕಾಸ್ಟ್ಯೂಮ್​ ಡಿಸೈನ್​ ಈ ಚಿತ್ರಕ್ಕಿದೆ. ಹೇಮಾ ಸುವರ್ಣ ಅವರು ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ, ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣದಲ್ಲಿ ‘ಆಚಾರ್ & ಕೋ’ ಸಿನಿಮಾ ಮೂಡಿಬಂದಿದೆ. ಶೀಘ್ರದಲ್ಲೇ ಈ ಸಿನಿಮಾ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆ ಆಗಲಿದೆ. ಸದ್ಯಕ್ಕೆ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.