ಪುನೀತ್ ಕೇಳಿ ಇಷ್ಟಪಟ್ಟಿದ್ದ ಕೊನೆಯ ಕಥೆ: ಏ.19ಕ್ಕೆ ತೆರೆಕಾಣಲಿದೆ ‘O2’ ಸಿನಿಮಾ

ಇತ್ತೀಚೆಗೆ ‘O2’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಅದರಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಭಾಗಿ ಆಗಿದ್ದರು. ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಘವ್​ ನಾಯಕ್ ನಟಿಸಿದ್ದಾರೆ. ನಾಯಕಿಯಾಗಿ ಆಶಿಕಾ ರಂಗನಾಥ್​ ಅಭಿನಯಿಸಿದ್ದಾರೆ. ಏ.19ರಂದು ಈ ಸಿನಿಮಾ ತೆರೆಕಾಣಲಿದೆ.

ಪುನೀತ್ ಕೇಳಿ ಇಷ್ಟಪಟ್ಟಿದ್ದ ಕೊನೆಯ ಕಥೆ: ಏ.19ಕ್ಕೆ ತೆರೆಕಾಣಲಿದೆ ‘O2’ ಸಿನಿಮಾ
O2 ಸಿನಿಮಾ ಸುದ್ದಿಗೋಷ್ಠಿ
Follow us
ಮದನ್​ ಕುಮಾರ್​
|

Updated on: Apr 07, 2024 | 5:50 PM

ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಪ್ರೋತ್ಸಾಹ ನೀಡುತ್ತಿದ್ದರು. ತಮ್ಮದೇ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಮೂಲಕ ಅವರು ಅನೇಕರಿಗೆ ಅವಕಾಶ ನೀಡುತ್ತಿದ್ದರು. ಪುನೀತ್ ರಾಜ್​ಕುಮಾರ್ ಅವರ ನಿಧನದ ಬಳಿಕ ‘ಪಿಆರ್​ಕೆ’ ಜವಾಬ್ದಾರಿಯು ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರ ಹೆಗಲಿಗೆ ಬಂತು. ಈಗ ಅವರೇ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘O2’ ಸಿನಿಮಾ (O2 Kannada Movie) ಈಗ ಬಿಡುಗಡೆ ಸಜ್ಜಾಗಿದೆ. ಏಪ್ರಿಲ್ 19ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ. ವಿಶೇಷ ಏನೆಂದರೆ, ಪುನೀತ್ ರಾಜ್​ಕುಮಾರ್ ಅವರು ಕೇಳಿ ಇಷ್ಟಪಟ್ಟಿದ್ದ ಕೊನೆಯ ಸಿನಿಮಾ ಕಥೆ ಇದು. ಹಾಗಾಗಿ ‘O2’ ಚಿತ್ರದ ಮೇಲೆ ಎಲ್ಲರಿಗೂ ನಿರೀಕ್ಷೆ ಇದೆ.

ಇತ್ತೀಚೆಗೆ ‘O2’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಅದರಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಭಾಗಿ ಆಗಿದ್ದರು. ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಘವ್​ ನಾಯಕ್ ನಟಿಸಿದ್ದಾರೆ. ನಾಯಕಿಯಾಗಿ ಆಶಿಕಾ ರಂಗನಾಥ್​ ಅಭಿನಯಿಸಿದ್ದಾರೆ. ‘ನನ್ನ ಪಾತ್ರದ ಹೆಸರು ಶ್ರದ್ಧಾ. ವೈದ್ಯೆಯ ಪಾತ್ರ ಮಾಡಿದ್ದೇನೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ’ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ. ವಿವಾನ್ ರಾಧಾಕೃಷ್ಣ ಅವರು ಸಂಗೀತ ನೀಡಿದ್ದಾರೆ.

‘ಹೃದಯ ಸ್ತಂಭನದಿಂದ ಸಾವಿನಂಚಿಗೆ ಬಂದ ವ್ಯಕ್ತಿಯನ್ನು ‘O2’ ಡ್ರಗ್ ಮೂಲಕ ಬದುಕಿಸಬಹುದು. ಅಂತಹ ಹೊಸ ಆವಿಷ್ಕಾರವನ್ನು ನಮ್ಮ ಸಿನಿಮಾದಲ್ಲಿ ಕಥಾನಾಯಕಿ ಮಾಡುತ್ತಾಳೆ. ಆ ಡ್ರಗ್ ಬಗ್ಗೆ ಸಂಶೋಧನೆ ಮಾಡುವಾಗ ಆಕೆ ಅನೇಕ ಸವಾಲು ಎದುರಿಸುತ್ತಾಳೆ. ಅಷ್ಟೇ ಅಲ್ಲದೇ, ನಮ್ಮ ಸಿನಿಮಾದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಮತ್ತು ಮನರಂಜನೆಯೂ ಇದೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಕಥೆಗಳು ವಿರಳ’ ಎಂದಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: ಅಶ್ವಿನಿ ಕುರಿತ ಅವಹೇಳನಕಾರಿ ಟ್ವೀಟ್; ಕಮಿಷನರ್​ಗೆ ದೂರು ನೀಡಿದ ಅಪ್ಪು ಹುಡುಗರು

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತನಾಡಿ, ‘ನಾನು ಮತ್ತು ಅಪ್ಪು ಅವರು ಒಟ್ಟಿಗೆ ಕುಳಿತು ಈ ಕಥೆ ಕೇಳಿದ್ವಿ. ಇದು ಅವರು ಕೇಳಿದ ಕೊನೇ ಕಥೆ. ‘O2’ ಈಗ ರಿಲೀಸ್​ಗೆ ಸಿದ್ದವಾಗಿದೆ. ಸಿನಿಮಾದ ಹಾಡು ಮತ್ತು ಕ್ಲೈಮ್ಯಾಕ್ಸ್ ನನಗೆ ತುಂಬಾ ಇಷ್ಟವಾಗಿದೆ. ಶೀಘ್ರದಲ್ಲೇ ಇನ್ನೂ ಎರಡು ಹೊಸ ಸಿನಿಮಾಗಳನ್ನು ನಮ್ಮ ಸಂಸ್ಥೆಯಿಂದ ಪ್ರಾರಂಭಿಸುತ್ತೇವೆ’ ಎಂದಿದ್ದಾರೆ.

ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಪುಟ್ಟಸ್ವಾಮಿ ಕೆ.ಬಿ ಮತ್ತು ಸತೀಶ್ ವಿ. ಕೆಲಸ ಮಾಡಿದ್ದಾರೆ. ನವೀನ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ. ಪ್ರಕಾಶ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಪ್ರವೀಣ್ ತೇಜ್, ಆಶಿಕಾ ರಂಗನಾಥ್, ರಾಘವ್ ನಾಯಕ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್, ಪುನೀತ್ ಬಾ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಟ ಪ್ರವೀಣ್​ ತೇಜ್​ ಅವರು ಈ ಸಿನಿಮಾದಲ್ಲಿ ಎನ್​ಆರ್​ಐ ವೈದ್ಯನ ಪಾತ್ರ ಮಾಡಿದ್ದಾರೆ. ‘ನಮ್ಮ ಇಡೀ ಫ್ಯಾಮಿಲಿಯವರು ಅಣ್ಣಾವ್ರ ಕುಟುಂಬದ ಅಪ್ಪಟ ಫ್ಯಾನ್ಸ್​. ಅಂಥದ್ದರಲ್ಲಿ ನನಗೆ ಪುನೀತ್ ರಾಜ್​ಕುಮಾರ್ ಅವರ ನಿರ್ಮಾಣದ ಸಿನಿಮಾದಲ್ಲಿ ನಟಿಸುವ ಆವಕಾಶ ಸಿಕ್ಕಿದ್ದಕ್ಕೆ ಬಹಳ ಸಂತೋಷವಾಯಿತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.