ಗಾಂಧಿನಗರದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಮೇ 27ರಂದು ಲೂಸ್ ಮಾದ ಯೋಗಿ (Acror Yogi) ನಟನೆಯ ‘ಕಿರಿಕ್ ಶಂಕರ್’ ಸಿನಿಮಾ ತೆರೆಕಾಣುತ್ತಿದೆ. ಈ ಸಿನಿಮಾಗೆ ಆರ್. ಆನಂತ ರಾಜು ನಿರ್ದೇಶನ ಮಾಡಿದ್ದಾರೆ. ಖ್ಯಾತ ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಿರ್ಮಾಣದಲ್ಲಿ ‘ಕಿರಿಕ್ ಶಂಕರ್’ ಚಿತ್ರ (Kirik Shankar) ಮೂಡಿಬಂದಿದೆ. ಲೂಸ್ ಮಾದ ಯೋಗಿ ಅವರಿಗೆ ಜೋಡಿಯಾಗಿ ಅದ್ವಿಕಾ ನಟಿಸಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಲೂಸ್ ಮಾದ ಯೋಗಿ. ಅವರ ವಿಶಿಷ್ಟ ಮ್ಯಾನರಿಸಂ ಕಂಡು ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ. ತಮ್ಮದೇ ಆದಂತಹ ಅಭಿಮಾನಿ ವರ್ಗವನ್ನು ಹೊಂದಿರುವ ಅವರು ‘ಕಿರಿಕ್ ಶಂಕರ್’ ಸಿನಿಮಾ ಮೂಲಕ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ರಿಲೀಸ್ ಆಯಿತು. ಮುಖ್ಯ ಅತಿಥಿಯಾಗಿ ಆರ್. ಚಂದ್ರು ಹಾಗೂ ಆಲ್ ಓಕೆ (ಅಲೋಕ್ ಬಾಬು) ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಕಿರಿಕ್ ಶಂಕರ್’ ನಿರ್ಮಾಪಕ ಎಂ.ಎನ್. ಕುಮಾರ್ ಅವರ ಮೇಲೆ ಆರ್. ಚಂದ್ರುಗೆ ವಿಶೇಷ ಗೌರವ. ‘ನನ್ನ ‘ತಾಜ್ ಮಹಲ್’ ಸಿನಿಮಾ 125 ದಿನ ಪ್ರದರ್ಶನ ಕಾಣಲು ಕುಮಾರ್ ಅವರೇ ಕಾರಣ. ಸಿನಿಮಾ ವಿತರಣೆಯಲ್ಲಿ ಅವರು ಲೆಜೆಂಡ್. ಅವರು ಈಗ ನಿರ್ಮಾಣ ಮಾಡಿರುವ ‘ಕಿರಿಕ್ ಶಂಕರ್’ ಸಿನಿಮಾ ‘ಕಿರಿಕ್ ಪಾರ್ಟಿ’ ರೀತಿ ಹಿಟ್ ಆಗಲಿ. ‘ದುನಿಯಾ’ ಸಿನಿಮಾದಲ್ಲಿ ಯೋಗಿ ಅವರನ್ನು ನೋಡಿ ನಾನು ಆರಾಧಿಸಿದ್ದೆ. ಅವರಿಂದ ಒಳ್ಳೊಳ್ಳೆಯ ಸಿನಿಮಾಗಳು ಬರಬೇಕು ಅಂತ ನಾನು ಆಗಾಗ ಹೇಳುತ್ತಿರುತ್ತೇನೆ. ಈ ಸಿನಿಮಾ ಖಂಡಿತವಾಗಿಯೂ ಚೆನ್ನಾಗಿ ಮೂಡಿಬಂದಿದೆ ಎಂಬ ನಂಬಿಕೆ ನನಗಿದೆ. ಹಾಡುಗಳು ಚೆನ್ನಾಗಿವೆ’ ಎಂದಿದ್ದಾರೆ ಆರ್. ಚಂದ್ರು.
ಇದನ್ನೂ ಓದಿ: ‘ಶೂಟಿಂಗ್ ಮುಗಿದಿದೆ, ಡಬ್ಬಿಂಗ್ ಶುರುವಾಗುತ್ತಿದೆ’; ‘ಕಬ್ಜ’ ಬಗ್ಗೆ ಆರ್.ಚಂದ್ರು ಮಾತು
‘ಕಿರಿಕ್ ಶಂಕರ್’ ಎಂಬ ಟೈಟಲ್ ರೀತಿಯೇ ಎಲ್ಲರ ಜೊತೆ ಕಿರಿಕ್ ಮಾಡಿಕೊಳ್ಳುವಂತಹ ವ್ಯಕ್ತಿಯ ಪಾತ್ರದಲ್ಲಿ ಯೋಗಿ ನಟಿಸಿದ್ದಾರೆ. ‘ಗ್ಯಾಂಗ್ ಕಟ್ಟಿಕೊಂಡು ಇಡೀ ಬೀದಿಗೆ ಕಾಟ ಕೊಡುವಂತಹ ಹುಡುಗನ ಪಾತ್ರ ನನ್ನದು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಹುಡುಗ ಅವನು. ಆದರೆ ಯಾವಾಗಲೂ ಅದೇ ರೀತಿ ಇರೋಕೆ ಆಗಲ್ಲ ಎಂಬ ಮೆಸೇಜ್ ಈ ಸಿನಿಮಾದಲ್ಲಿದೆ. ನಾನು ಈವರೆಗೆ ಬಹುತೇಕ ಹೊಸ ನಿರ್ದೇಶಕರ ಜೊತೆಯೇ ಕೆಲಸ ಮಾಡಿರುವುದು. ಆದರೆ ಈ ಚಿತ್ರದಲ್ಲಿ ಅನಂತ ರಾಜು ಅವರಂತಹ ಹಿರಿಯ ಡೈರೆಕ್ಟರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ತಂಡದ ಪ್ರತಿಯೊಬ್ಬರು ಶ್ರಮ ಕೂಡ ದೊಡ್ಡದು’ ಎಂದಿದ್ದಾರೆ ಲೂಸ್ ಮಾದ ಯೋಗಿ.
ನಟಿ ಅದ್ವಿಕಾ ಅವರಿಗೆ ಇದು ಮೊದಲ ಸಿನಿಮಾ. ‘ನನ್ನನ್ನು ನಂಬಿ ಈ ಪಾತ್ರ ನೀಡಿದ ನಿರ್ಮಾಪಕರಿಗೆ ಧನ್ಯವಾದಗಳು. ನನ್ನ ಪಾತ್ರ ತುಂಬ ಬೋಲ್ಡ್ ಆಗಿದೆ. ಶೂಟಿಂಗ್ ಶುರು ಆಗುವುದಕ್ಕಿಂತಲೂ ಒಂದು ತಿಂಗಳು ಮುನ್ನ ಎಲ್ಲರೂ ತುಂಬ ತಾಳ್ಮೆಯಿಂದ ನನಗೆ ನಟನೆ ಹೇಳಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಖತ್ ಮನರಂಜನೆ ಇದೆ. ನಗು, ಆ್ಯಕ್ಷನ್ ಮತ್ತು ಎಮೋಷನ್ಸ್ ಇರುವ ಈ ಚಿತ್ರ ಎಲ್ಲಿಯೂ ಪ್ರೇಕ್ಷಕರಿಗೆ ಬೋರು ಹೊಡೆಸಲ್ಲ’ ಎಂದಿದ್ದಾರೆ ನಟಿ ಅದ್ವಿಕಾ.
‘ಬೆಂಗಳೂರಿನ ಅನುಪಮಾ, ಪ್ರಸನ್ನ ಚಿತ್ರಮಂದಿರಗಳು ಸೇರಿ 150ರಿಂದ 200 ಥಿಯೇಟರ್ನಲ್ಲಿ ‘ಕಿರಿಕ್ ಶಂಕರ್’ ಚಿತ್ರ ರಿಲೀಸ್ ಮಾಡುತ್ತಿದ್ದೇವೆ. ಸೂಕ್ತವಾಗಿ ಪ್ಲ್ಯಾನ್ ಮಾಡಿಕೊಂಡು ಮೇ 27ಕ್ಕೆ ನಮ್ಮ ಸಿನಿಮಾವನ್ನು ತೆರೆಕಾಣಿಸುತ್ತಿದ್ದೇವೆ. ಒಳ್ಳೆಯ ಚಿತ್ರಕ್ಕೆ ಜನರು ಖಂಡಿತಾ ಸಪೋರ್ಟ್ ಮಾಡ್ತಾರೆ’ ಎಂಬುದು ನಿರ್ಮಾಪಕ/ವಿತರಕ ಎಂ.ಎನ್. ಕುಮಾರ್ ಮಾತುಗಳು. ನಾಗೇಂದ್ರ ಅರಸ್ ಅವರು ಸಂಕಲನ ಮಾಡುವುದರ ಜೊತೆಗೆ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವಂತಹ ಒಂದು ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.