ರಾಘವೇಂದ್ರ ಚಿತ್ರವಾಣಿ (Raghavendra Chitravani) ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 25ರ ಸಂಜೆ 5 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ (Kannada Film Industry) ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ಜರುಗಲಿದೆ. ಅಂದು ವಿಜಯ್ ಕಿರಗಂದೂರು (Vijay Kiragandur), ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ತಾರಾ ಅನುರಾಧಾ ಅವರಿಗೆ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಈಗ ಸುಧೀಂದ್ರ ವೆಂಕಟೇಶ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಂದಲೇ ಈ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ‘ರಾಘವೇಂದ್ರ ಚಿತ್ರವಾಣಿ’ ಕಾರ್ಯ ನಿರ್ವಹಿಸುತ್ತಿದೆ. ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಈ ಸಂಸ್ಥೆಯು ಪ್ರಶಸ್ತಿಗಳನ್ನು ನೀಡುತ್ತಿದೆ. ಸುಧೀಂದ್ರ ಅವರ ನಂತರ ಸುಧೀಂದ್ರ ವೆಂಕಟೇಶ್ ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. 2022ನೇ ಸಾಲಿನ ವಾರ್ಷಿಕ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ: ಜ.25ಕ್ಕೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭ; ಈ ಬಾರಿ ಯಾರಿಗೆಲ್ಲ ಸಿಗಲಿದೆ ಗೌರವ?
2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳೆಂದರೆ ಅದು ‘ಕೆಜಿಎಫ್: ಚಾಪ್ಟರ್ 2′ ಮತ್ತು ‘ಕಾಂತಾರ’. ಈ ಎರಡೂ ಸಿನಿಮಾಗಳನ್ನು ‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಿಸಿದ್ದು ವಿಜಯ್ ಕಿರಗಂದೂರು. ಅವರ ಈ ಸಾಧನೆಗಾಗಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್ಆರ್ಆರ್’ ಚಿತ್ರ
2022ರಲ್ಲಿ ಬಿಡುಗಡೆಯಾದ ‘ಗಂಧದ ಗುಡಿ’ ಕೂಡ ಒಂದು ವಿಶೇಷ ಪ್ರಯತ್ನವಾಗಿ ಗಮನ ಸೆಳೆಯಿತು. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ಈ ಸಾಕ್ಷ್ಯಚಿತ್ರದ ಮೂಲಕ ಕನ್ನಡಿಗರಿಗೆ ತೋರಿಸಿದ್ದು ಪುನೀತ್ ರಾಜ್ಕುಮಾರ್. ಈ ಡಾಕ್ಯುಮೆಂಟರಿಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ರಾಘವೇಂದ್ರ ಚಿತ್ರವಾಣಿ ಕಡೆಯಿಂದ ಪ್ರಶಸ್ತಿ ಸಂದಾಯವಾಗಲಿದೆ.
ಅದೇ ರೀತಿ, ಕನ್ನಡದ ಹೆಸರಾಂತ ನಟಿ ತಾರಾ ಅನುರಾಧಾ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಈ ಬಾರಿ ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.