
ನಿರ್ಮಾಪಕನಾಗಿ ಮತ್ತು ನಟನಾಗಿ ರಾಜ್ ಬಿ. ಶೆಟ್ಟಿ (Raj B Shetty) ಅವರಿಗೆ ‘ಸು ಫ್ರಮ್ ಸೋ’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಹಂತದಲ್ಲಿದೆ. ಉತ್ತರ ಭಾರತದ ಮಂದಿ ಕೂಡ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ‘ಸು ಫ್ರಮ್ ಸೋ’ (Su From So) ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜ್ ಬಿ. ಶೆಟ್ಟಿ ಅವರು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ಸಂದರ್ಶನ ನೀಡಿದ್ದಾರೆ. ಈ ಚಿತ್ರದ ಕಥೆ ಹುಟ್ಟಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ನಿರ್ದೇಶಕ ಜೆ.ಪಿ. ತುಮಿನಾಡು (JP Thuminad) ಮತ್ತು ತಮ್ಮ ನಡುವೆ ನಡೆದ ಸಂವಾದವನ್ನು ರಾಜ್ ಬಿ. ಶೆಟ್ಟಿ ಮೆಲುಕು ಹಾಕಿದ್ದಾರೆ.
‘ಸು ಫ್ರಮ್ ಸೋ ಐಡಿಯಾ ನನ್ನದು. ಏನಾಯ್ತು ಅಂದರೆ, ಜೆ.ಪಿ. ತುಮಿನಾಡು ಅವರು ರಂಗಭೂಮಿ ನಟ, ನಿರ್ದೇಶಕ. ಯಾವಾಗಲೂ ಅವರು ಜನರಿಗೆ ಕಥೆ ಹೇಳುತ್ತಿದ್ದರು. ತುಂಬಾ ಚೆನ್ನಾಗಿ ಅವರು ಕಥೆ ವಿವರಿಸುತ್ತಾರೆ. 6-7 ವರ್ಷಗಳ ಹಿಂದೆ ಅವರಿಗೆ ನಾನೊಂದು ಮಾತು ಹೇಳಿದ್ದೆ. ಬರೀ ಕಥೆ ಹೇಳಿಕೊಂಡು ಸಮಯ ಹಾಳು ಮಾಡುತ್ತೀರಾ ಅಥವಾ ಸಿನಿಮಾ ನಿರ್ದೇಶನ ಮಾಡುತ್ತೀರಾ ಅಂತ ಕೇಳಿದ್ದೆ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
‘ನಿಮಗೆ ಒಳ್ಳೆಯ ನಿರೂಪಣೆ ಶೈಲಿ ಇದೆ ಅಂತ ನಾನು ಹೇಳಿದಾಗ ತಾವು ಸಿನಿಮಾ ಮಾಡಬೇಕು ಅಂತ ತುಮಿನಾಡು ಹೇಳಿದರು. ಕನ್ನಡದಲ್ಲಿ ಜೋಗಿ ಬರೆದ ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ’ ಎಂಬ ಪುಸ್ತಕ ಇದೆ. ಅದು ಬೊಜ್ಜಿನ ಬಗ್ಗೆ ಇರುವುದು. ಆ ಪುಸ್ತಕ ಓದಿ ಚಿತ್ರಕಥೆ ಮಾಡಿ ಅಂತ ತುಮಿನಾಡುಗೆ ಹೇಳಿದೆ. ಅವರಿಗೆ ಖುಷಿ ಆಯಿತು. ಆದರೆ ನನ್ನ ಇನ್ನೊಬ್ಬ ಸ್ನೇಹಿತರು ಅದೇ ಪುಸ್ತಕವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂಬುದು ನಂತರ ತಿಳಿಯಿತು. ಅಷ್ಟರಲ್ಲಾಗಲೇ ಮೂರು ತಿಂಗಳಿಂದ ಚಿತ್ರಕಥೆ ಬರೆಯುತ್ತಿದ್ದ ತುಮಿನಾಡು ಅವರಿಗೆ ಈ ಬೇಸರದ ಸುದ್ದಿಯನ್ನು ನಾನು ತಿಳಿಸಬೇಕಾಯಿತು’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
‘ಜೆ.ಪಿ. ತುಮಿನಾಡು ಅವರಿಗೆ ತುಂಬಾ ಬೇಸರ ಆಯಿತು. ಅವರ ಬಗ್ಗೆ ಯೋಚಿಸೋದು ನಿಲ್ಲಿಸಲು ನನಗೆ ಸಾಧ್ಯವಾಗಲಿಲ್ಲ. ಆ ಕಷ್ಟ ಏನು ಎಂಬುದು ನನಗೆ ಗೊತ್ತು. ಮತ್ತೆ ಅವರಿಗೆ ಕರೆ ಮಾಡಿದೆ. ನೀವು ಜೀವನದಲ್ಲಿ ನೋಡಿದ ಆಸಕ್ತಿಕರ ಪಾತ್ರಗಳು ಯಾವವು ಅಂತ ನಾನು ಕೇಳಿದೆ. ಆಗ ಅವರು ರವಿ ಅಣ್ಣ ಪಾತ್ರದ ಬಗ್ಗೆ ಹೇಳಿದರು. ನಂತರ ನಾನು ನೋಡಿದ ಜನರ ಬಗ್ಗೆ, ಸನ್ನಿವೇಶಗಳ ಬಗ್ಗೆ ಅವರಿಗೆ ಹೇಳಿದೆ. ಅವುಗಳಿಂದ ಅವರು ಒಂದು ಕಥೆ ಪಡೆದರು. ಹಾಗೆ ಸು ಫ್ರಮ್ ಸೋ ಸಿನಿಮಾ ಶುರು ಆಯಿತು’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
ಇದನ್ನೂ ಓದಿ: ಹಿಂದಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’: ಸಿಹಿ ಸುದ್ದಿ ನೀಡಿದ ರಾಜ್ ಬಿ. ಶೆಟ್ಟಿ
ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ಜೆ.ಪಿ. ತುಮಿನಾಡು ಅವರು ಸೂಪರ್ ಸಕ್ಸಸ್ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕನಾಗಿ ಅವರು ಹೊರಹೊಮ್ಮಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರು ಕೂಡ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ಶನೀಲ್ ಗೌತಮ್, ಸಂದ್ಯಾ ಅರಕೆರೆ ಮುಂತಾದವರು ಶೈನ್ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.