
ರಾಜ್ಕುಮಾರ್ (Rajkumar) ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿಡಿದವರು. ಅವರು ನಮ್ಮನ್ನು ಬಿಟ್ಟು ಹಲವು ವರ್ಷಗಳೇ ಕಳೆದಿದ್ದರೂ ಈಗಲೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ರಾಜ್ಕುಮಾರ್ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಆ ಬಳಿಕ ಅವರ ಹೆಸರನ್ನು ರಾಜ್ಕುಮಾರ್ ಎಂದು ಬದಲಿಸಲಾಯಿತು. ಈ ಬದಲಾವಣೆ ಬಗ್ಗೆ ರಾಜ್ಕುಮಾರ್ ಅವರಿಗೇ ತಿಳಿದಿರಲಿಲ್ಲ.
ರಾಜ್ಕುಮಾರ್ ನಾಟಕಗಳನ್ನು ಮಾಡಿಕೊಂಡಿದ್ದವರು. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಅವರಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಎಚ್ಎಲ್ಎನ್ ಸಿಂಹ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಡೈರೆಕ್ಟರ್ ಸಿಂಹ ಅವರೇ ತಂಡದ ಜೊತೆ ಚರ್ಚಿಸಿ ಮುತ್ತುರಾಜ್ ಎಂಬ ಹೆಸರನ್ನು ರಾಜ್ಕುಮಾರ್ ಆಗಿ ಬದಲಿಸಿದ್ದರು. ಆ ಬಗ್ಗೆ ರಾಜ್ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದರ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋನ ಅನೇಕರು ಇಷ್ಟಪಟ್ಟಿದ್ದಾರೆ.
‘ಬೇಡರ ಕಣ್ಣಪ್ಪ ಸಿನಿಮಾಗೆ ಹೋದಾಗ ಹೆಸರು ಬದಲಾಗಿತ್ತು. ಒಂದು ತಿಂಗಳು ಶೂಟ್ ಆಗಿತ್ತು. ನಾನು ಪೇಪರ್ನಲ್ಲಿ ರಾಜ್ಕುಮಾರ್ ಹೆಸರು ನೋಡಿ ಗಾಬರಿ ಆದೆ. ನನ್ನ ಹೆಸರು ಮುತ್ತುರಾಜು. ಬೇಡರಕಣ್ಣಪ್ಪ ಪಾತ್ರ ಕೊಟ್ಟಿದ್ದಾರೆ. ಆದರೆ, ಇಲ್ಲಿ ಯಾರೋ ರಾಜ್ಕುಮಾರ್ ಅನ್ನೊರನ್ನು ಸೇರಿಸಿಕೊಂಡಿದ್ದಾರೆ ಎಂದುಕೊಂಡೆ. ನನ್ನ ನಟನೆ ಚೆನ್ನಾಗಿಲ್ಲ ಅಂತ ಬೇರೆ ಯಾರನ್ನೋ ಹಾಕಿಕೊಂಡಿದ್ದಾರೆ. ಕೊಟ್ಟರು ಕೈ ಅಂದುಕೊಂಡೆ’ ಎಂದಿದ್ದರು ರಾಜ್ಕುಮಾರ್.
ಇದನ್ನೂ ಓದಿ: ಎನ್ಟಿಆರ್ಗೆ 20 ಸಾವಿರ, ರಾಜ್ಕುಮಾರ್ಗೆ 2 ಸಾವಿರ ನಂತರ ಆಗಿದ್ದೇನು?
‘ಯಾರು ರಾಜ್ಕುಮಾರ್ ಎಂದು ನಾನು ಸಿಂಹ ಅವರನ್ನು ಕೇಳಿದೆ. ಮುತ್ತು ರಾಜ್ ಹೆಸರನ್ನು ತೆಗೆದು, ನಾವೇ ರಾಜ್ಕುಮಾರ್ ಅಂತ ಹೆಸರು ಬದಲಾಯಿಸಿದ್ದೇವೆ. ನನಗೆ ನಾಚಿಕೆ ಆಯ್ತು. ನಾನು ಮಾಡ್ತಿರೋದು ಮೊದಲ ಸಿನಿಮಾ ಇದು. ಒಳ್ಳೆಯ ಹೆಸರು ಬಂದರೆ ರಾಜ್ಕುಮಾರ್ ಅಂತ ಇಟ್ಟಿದ್ದಕ್ಕೆ ತೊಂದರೆ ಇಲ್ಲ, ಆದರೆ ಸಿನಿಮಾ ಚೆನ್ನಾಗಿ ಆಗಿಲ್ಲ ಎಂದರೆ, ಈ ಕರ್ಮಕ್ಕೆ ಇವನು ರಾಜ್ಕುಮಾರ್ ಅಂತ ಹೆಸರು ಇಟ್ಕೊಂಡ್ನಾ ಅಂತ ಕೇಳೋ ತರ ಆಗಬಹುದು’ ಎಂದು ರಾಜ್ಕುಮಾರ್ ವಿವರಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Thu, 25 September 25