ರಾಜ್ಯ ಚಲನಚಿತ್ರ ಪ್ರಶಸ್ತಿ 2021: ‘777 ಚಾರ್ಲಿ’ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ರಕ್ಷಿತ್ ಶೆಟ್ಟಿ
2021ನೇ ವರ್ಷದ ಕನ್ನಡ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ಅವರು ಅಭಿನಯಿಸಿದ ‘777 ಚಾರ್ಲಿ’ ಸಿನಿಮಾ ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ‘ದೊಡ್ಡಹಟ್ಟಿ ಬೋರೆ ಗೌಡ’ ಸಿನಿಮಾಗೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ವಿಜೇತರ ಪೂರ್ತಿ ವಿವರ ಇಲ್ಲಿದೆ..

2021ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಈಗ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (Karnataka State FIlm Award) ಪ್ರಕಟ ಆಗಿದೆ. ‘777 ಚಾರ್ಲಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿ (Rakshit Shetty) ಅವರು ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ‘ಮ್ಯೂಟ್’ ಸಿನಿಮಾದ ಅಭಿನಯಕ್ಕಾಗಿ ಅರ್ಚನಾ ಜೋಯಿಸ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ದೊಡ್ಡಹಟ್ಟಿ ಬೋರೆಗೌಡ’ ಚಿತ್ರಕ್ಕೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ‘777 ಚಾರ್ಲಿ’ (777 Charlie) ಸಿನಿಮಾ ‘2ನೇ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದುಕೊಂಡಿದೆ.
‘ದೊಡ್ಡಹಟ್ಟಿ ಬೋರೆಗೌಡ’ ಸಿನಿಮಾಗೆ ರಘು ಕೆ.ಎಂ. ಅವರು ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಕೆ.ಎಂ ಅವರು ನಿರ್ಮಾಣ ಮಾಡಿದ್ದಾರೆ. ‘777 ಚಾರ್ಲಿ’ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಕೆ. ನಿರ್ದೇಶಿಸಿದ್ದಾರೆ. ಹೃದಯಶಿವ ನಿರ್ದೇಶನ ಮಾಡಿದ ‘ಬಿಸಿಲು ಕುದುರೆ’ ಸಿನಿಮಾಗೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ.
‘ರತ್ನನ್ ಪ್ರಪಂಚ’ ಸಿನಿಮಾದ ಅಭಿನಯಕ್ಕಾಗಿ ಪ್ರಮೋದ್ ಅವರು ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಬಿಸಿಲು ಕುದುರೆ’ ಸಿನಿಮಾದ ಸಂಗೀತಕ್ಕಾಗಿ ಇಮ್ತಿಯಾಜ್ ಸುಲ್ತಾನ್ ಅವರಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ. ‘ಕೇಕ್’ ಚಿತ್ರದ ನಟನೆಗೆ ಮಾಸ್ಟರ್ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ನೀಡಲಾಗಿದೆ. ‘ಭೈರವಿ’ ಸಿನಿಮಾದ ಅಭಿನಯಕ್ಕಾಗಿ ಬೇಬಿ ಭೈರವಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ನೀಡಲಾಗಿದೆ.
ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿಯನ್ನು ‘ಭಾರತದ ಪ್ರಜೆಗಳಾದ ನಾವು’ ಸಿನಿಮಾಗೆ ನೀಡಲಾಗಿದೆ. ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಚಿತ್ರಕ್ಕೆ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ’ ಪ್ರಶಸ್ತಿ ಘೋಷಿಸಲಾಗಿದೆ. ‘ಕೇಕ್’ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿದೆ. ಶಂಕರ್ ಗುರು ಅವರಿಗೆ ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಪ್ರಾಣಿಗಳನ್ನು ಕಂಡರೆ ಇಷ್ಟಪಡುತ್ತಿರಲಿಲ್ಲ ರಕ್ಷಿತ್ ಶೆಟ್ಟಿ; ನಂತರ ಆಗಿದ್ದೇ ಬೇರೆ
ಕೊಡವ ಭಾಷೆಯ ‘ನಾಡ ಪೆದ ಆಶಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಸಹನಾ ಎಂ. ಭಾರದ್ವಾಜ್ ಅವರಿಗೆ ನೀಡಲಾಗಿದೆ. ಅನೀಶ್ ಕೇಶವ ರಾವ್ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಭಜರಂಗಿ 2’ ಸಿನಿಮಾಗಾಗಿ ರವಿ ಸಂತೇಹಕ್ಲು ಅವರು ‘ಅತ್ಯುತ್ತಮ ಕಲಾ ನಿರ್ದೇಶನ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ (777 ಚಾರ್ಲಿ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ ಎಸ್. (ಪೊಗರು)
ಅತ್ಯುತ್ತಮ ಸಂಕಲನ: ಪ್ರತೀಶ್ ಶೆಟ್ಟಿ (777 ಚಾರ್ಲಿ)
ಅತ್ಯುತ್ತಮ ಛಾಯಾಗ್ರಹಣ: ಭುನವೇಶ್ ಪ್ರಭು (ಆಮ್ಚಿ ಸಂಸಾರ- ಕೊಂಕಣಿ)
ಅತ್ಯುತ್ತಮ ಚಿತ್ರಕಥೆ: ರಘು ಕೆ.ಎಂ (ದೊಡ್ಡ ಹಟ್ಟಿ ಬೋರೆಗೌಡ)
ಅತ್ಯುತ್ತಮ ಕಥೆ: ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)
ತೀರ್ಪುಗಾರರ ವಿಶೇಷ ಪ್ರಶಸ್ತಿಗಳು:
ಅತ್ಯುತ್ತಮ ಚಿತ್ರ: ಭೈರವಿ
ಅತ್ಯುತ್ತಮ ವಸ್ತ್ರ ವಿನ್ಯಾಸ: ಯೋಗಿ ಜಿ ರಾಜು, (ಭಜರಂಗಿ 2)
ಅತ್ಯುತ್ತಮ ಪ್ರಸಾದನ: ಶಿವಕುಮಾರ್ (ತಾಯಿ ಕಸ್ತೂರ್ ಗಾಂಧಿ)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Fri, 3 October 25




