
‘ಟಾಕ್ಸಿಕ್’ (Toxic) ಸಿನಿಮಾ ನೋಡಿದ ಕೆಲವರಿಗೆ ಇಷ್ಟ ಆಗಿಲ್ಲ. ಪರಭಾಷೆಯ ಪ್ರೇಕ್ಷಕರು ಹೆಚ್ಚಾಗಿ ಈ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಯಶ್ (Yash) ಅವರ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲಬೇಕು ಎಂದು ಅಪ್ಪಟ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರ ನಟನೆಗೆ ಪ್ರಶಂಸೆ ಸಿಕ್ಕಿದೆ. ಕನ್ನಡದ ಹಲವು ಸೆಲೆಬ್ರಿಟಿಗಳು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಸುದೀಪ್, ಉಪೇಂದ್ರ, ಆರ್. ಚಂದ್ರು ಬಳಿಕ ರಕ್ಷಿತಾ ಪ್ರೇಮ್, ಮಾಸ್ಟರ್ ಆನಂದ್, ಪ್ರದೀಪ್ ಈಶ್ವರ್ ಮುಂತಾದವರು ‘ಟಾಕ್ಸಿಕ್’ ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.
ಸಿನಿಮಾ ನೋಡಿದ ಬಳಿಕ ಮಾಸ್ಟರ್ ಆನಂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಹಾಯ್, ಎಲ್ಲರಿಗೂ ನಮಸ್ಕಾರ. ಇದು ಮಧ್ಯ ರಾತ್ರಿ ಪೋಸ್ಟ್. ಟಾಕ್ಸಿಕ್ ಸಿನಿಮಾ ನೋಡಿಕೊಂಡು ಬಂದು ಈ ವಿಡಿಯೋ ಮಾಡುತ್ತಿದ್ದೇನೆ. ಭಾವನೆಗಳು ಹಾಗೆ ಇರುವಾಗಲೇ ಹೇಳಿಬಿಡೋಣ ಅಂತ ವಿಡಿಯೋ ಮಾಡಿದ್ದೇನೆ. ಈ ಸಿನಿಮಾ ಬಗ್ಗೆ ಬೇರೆ ರೀತಿಯ ಅಭಿಪ್ರಾಯವನ್ನು ಜನರು ಯಾಕೆ ಕೊಡುತ್ತಿದ್ದಾರೆ ಅಂತ ಗೊತ್ತಿಲ್ಲ’ ಎಂದು ಮಾಸ್ಟರ್ ಆನಂದ್ ಅವರು ಮಾತು ಆರಂಭಿಸಿದ್ದಾರೆ.
‘ನಿಜವಾಗಿಯೂ ಇದೊಂದು ಬ್ರಿಲಿಯಂಟ್ ಸ್ಕ್ರಿಪ್ಟ್, ಚಿತ್ರಕಥೆ, ಡೈರೆಕ್ಷನ್. ಇದನ್ನು ನೋಡಲು ಬೇರೆಯದೇ ದೃಷ್ಟಿಕೋನ ಬೇಕು. ಆ ದೃಷ್ಟಿಕೋನ ಇಲ್ಲದೇ ಇರುವುದಕ್ಕೆ ನಿಮಗೆ ಗೊಂದಲ ಆಗುತ್ತಿದೆ ಎನಿಸುತ್ತದೆ. ಈ ಸಿನಿಮಾ ತುಂಬಾ ಕ್ಲಿಯರ್ ಆಗಿದೆ. ಹಲವು ಭಾವನೆಗಳು ಈ ಸಿನಿಮಾದಲ್ಲಿವೆ. ಆ್ಯಕ್ಷನ್, ರೊಮ್ಯಾನ್ಸ್ ಇದೆ. ಆರ್ಟ್ ಡೈರೆಕ್ಷನ್ ಚೆನ್ನಾಗಿದೆ. ನಾವು ಈ ರೀತಿಯ ಸಿನಿಮಾಗೆ ಬೆಂಬಲ ನೀಡಬೇಕು’ ಎಂದು ಮಾಸ್ಟರ್ ಆನಂದ್ ಅವರು ಹೇಳಿದ್ದಾರೆ.
‘ಈಗ ತಾನೆ ನಾನು ಟಾಕ್ಸಿಕ್ ಸಿನಿಮಾ ನೋಡಿದ್ದೇನೆ. ತುಂಬ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ. ಒಬ್ಬ ಮನುಷ್ಯನ ಮನಸ್ಥಿತಿ ಬಗ್ಗೆ ಈ ಸಿನಿಮಾ ಇದೆ. ಇದು ದಕ್ಷಿಣ ಭಾರತದ ಸಿನಿಮಾ ಎಂಬ ಕಾರಣಕ್ಕೆ ನಾವು ಒಪ್ಪಿಕೊಳ್ಳುತ್ತಿಲ್ಲವೇ? ಯಶ್ ಅವರ ನಟನೆ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ಈ ಸಿನಿಮಾ ಇಷ್ಟ ಆಯಿತು’ ಎಂದು ರಕ್ಷಿತಾ ಪ್ರೇಮ್ ಅವರು ಹೇಳಿದ್ದಾರೆ.
Hit or Flop is for Heroes and not for Legends!
Yash is a true Legend of not only Karnataka but Indian film industry.
Being a Kannadiga I support Yash. I request all Kannadigas to stand together and support the Gem of Karnataka!! @TheNameIsYash @KvnProductions— Pradeep Eshwar (@Pradeep__Eshwar) August 30, 2026
ಇದನ್ನೂ ಓದಿ: 4 ದಿನಕ್ಕೆ ಎಷ್ಟಾಯಿತು ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್? ಇಲ್ಲಿದೆ ಲೆಕ್ಕ
‘ಹಿಟ್ ಅಥವಾ ಫ್ಲಾಪ್ ಎನ್ನುವುದು ಹೀರೊಗಳಿಗೆ ಅನ್ವಯಿಸುತ್ತದೆಯೇ ಹೊರತು ಲೆಜೆಂಡ್‌ಗಳಿಗಲ್ಲ. ಯಶ್ ಅವರು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೇ ಒಬ್ಬ ನಿಜವಾದ ಲೆಜೆಂಡ್. ಕನ್ನಡಿಗನಾಗಿ ನಾನು ಯಶ್ ಅವರನ್ನು ಬೆಂಬಲಿಸುತ್ತೇನೆ. ಕರ್ನಾಟಕದ ಈ ಪ್ರತಿಭೆಯನ್ನು ನಾವೆಲ್ಲಾ ಕನ್ನಡಿಗರು ಒಗ್ಗಟ್ಟಾಗಿ ನಿಂತು ಬೆಂಬಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಪ್ರದೀಪ್ ಈಶ್ವರ್ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.