ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಕೆಲವು ನಿರ್ದೇಶಕರು ವಿಶೇಷವಾದ ಚಿತ್ರಗಳನ್ನು ಮಾಡಿ ಗಮನ ಸೆಳೆಯುತ್ತಾರೆ. ಅಂಥವರ ಪೈಕಿ ಕನ್ನಡ ಚಿತ್ರರಂಗದಲ್ಲಿ ಡಿ. ಸತ್ಯ ಪ್ರಕಾಶ್ (D Satya Prakash) ಕೂಡ ಇದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದ ಖ್ಯಾತಿ ಹೊಂದಿರುವ ಅವರು ಹೊಸ ಸಿನಿಮಾ (New Kannada Movie) ಅನೌನ್ಸ್ ಮಾಡಿದ್ದಾರೆ ಎಂದರೆ ಅದರಲ್ಲಿ ಏನಾದರೂ ವಿಶೇಷತೆ ಖಂಡಿತಾ ಇರುತ್ತದೆ ಎಂಬುದು ಸಿನಿಪ್ರಿಯರ ನಂಬಿಕೆ. ಆ ಕಾರಣದಿಂದಲೇ ಸ್ಕ್ರಿಪ್ಟ್ ವಿಚಾರಕ್ಕೆ ಸತ್ಯ ಪ್ರಕಾಶ್ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಅವರು ಹೊಸ ಸಿನಿಮಾ ಮಾಡುವ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ಹೊರಬಿದ್ದಿತ್ತು. ಈಗ ಆ ಸಿನಿಮಾ ಕುರಿತು ಫ್ರೆಶ್ ಅಪ್ಡೇಟ್ ಸಿಕ್ಕಿದೆ.
ಸಾಕಷ್ಟು ದಿನಗಳ ಬಳಿಕ ಸತ್ಯ ಪ್ರಕಾಶ್ ಅವರು ಅಳೆದು-ತೂಗಿ ತಮಗೆ ಹೆಚ್ಚು ಆಪ್ತ ಎನಿಸಿದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾದ ಶೀರ್ಷಿಕೆ ಏನು ಎಂಬುದು ಕೂಡ ಈಗ ಬಹಿರಂಗ ಆಗಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಡಿಫರೆಂಟ್ ಹೆಸರನ್ನು ಅವರು ಆಯ್ದುಕೊಂಡಿದ್ದಾರೆ. ‘ಎಕ್ಸ್ ಆ್ಯಂಡ್ ವೈ’ ಎಂದು ಅವರು ತಮ್ಮ ಹೊಸ ಸಿನಿಮಾಗೆ ಶೀರ್ಷಿಕೆ ಇಟ್ಟಿದ್ದಾರೆ. ಟೈಟಲ್ ಕಾರಣದಿಂದಲೇ ಈ ಸಿನಿಮಾ ಕೌತುಕ ಮೂಡಿಸಿದೆ.
ಇದನ್ನೂ ಓದಿ: ‘ರಾಮಾ ರಾಮಾ ರೇ’ ನಿರ್ದೇಶಕ ಸತ್ಯ ಪ್ರಕಾಶ್ ಈಗ ಹೀರೋ; ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡೈರೆಕ್ಟರ್
ಸತ್ಯ ಪ್ರಕಾಶ್ ಅವರು ಈ ಹಿಂದೆ ನಿರ್ದೇಶನ ಮಾಡಿದ್ದ ‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’, ‘ಮ್ಯಾನ್ ಆಫ್ ದ ಮ್ಯಾಚ್’ ಸಿನಿಮಾಗಳ ಶೀರ್ಷಿಕೆಗಳು ಭಿನ್ನವಾಗಿದ್ದವು. ‘ಎಕ್ಸ್ ಆ್ಯಂಡ್ ವೈ’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆ ಮುಖ್ಯ ಪಾತ್ರದಲ್ಲೂ ಸತ್ಯ ಪ್ರಕಾಶ್ ನಟಿಸುತ್ತಿರುವುದು ವಿಶೇಷ. ಇಷ್ಟು ದಿನ ಅವರ ನಿರ್ದೇಶನವನ್ನು ನೋಡಿದ ಸಿನಿಪ್ರಿಯರು ಈಗ ನಟನೆ ನೋಡಲು ಕಾದಿದ್ದಾರೆ. ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬೆಂಗಳೂರು ಹಾಗೂ ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಯಲಿದೆ.
ಇದನ್ನೂ ಓದಿ: ‘ಲವ್ ಮಾಕ್ಟೇಲ್ 2’ ನಟಿ ರೇಚಲ್ ಡೇವಿಡ್ ಹೊಸ ಚಿತ್ರ ಅನೌನ್ಸ್; ಮಿಲಿಂದ್ ಹೀರೋ, ಸತ್ಯ ಪ್ರಕಾಶ್ ನಿರ್ಮಾಣ
ಶುಕ್ರವಾರ (ನವೆಂಬರ್ 24) ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಜಯನಗರದ ತಮ್ಮ ಕಚೇರಿಯಲ್ಲಿ ಆಪ್ತರು ಹಾಗೂ ಚಿತ್ರತಂಡದ ಸದಸ್ಯರ ಸಮ್ಮುಖದಲ್ಲಿ ‘ಎಕ್ಸ್ ಆ್ಯಂಡ್ ವೈ’ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ‘ಸತ್ಯ ಪಿಕ್ಚರ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸತ್ಯಪ್ರಕಾಶ್ ಜೊತೆ ಅಥರ್ವ ಪ್ರಕಾಶ್ ಕೂಡ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಲವಿತ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಎಸ್. ಕೆಂಪರಾಜು ಸಂಕಲನ ಹಾಗೂ ವರದರಾಜ್ ಕಾಮತ್ ಅವರು ಕಲಾ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.