ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರರಂಗದವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿರುವುದಕ್ಕೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಚಿತ್ರರಂಗದ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ದಿವ್ಯ ಸ್ಪಂದನಾ ಕೂಡ ಮಾತನಾಡಿದ್ದರು. ಹಂಪಿ ಉತ್ಸವದಲ್ಲಿ ಮಾತನಾಡಿದ್ದ ಅವರು ಡಿಕೆ ಶಿವಕುಮಾರ್ ಹೇಳಿಕೆಯನ್ನು ಬೆಂಬಲಿಸಿದ್ದರು. ಆದರೆ ಈಗ ರಮ್ಯಾ ಇನ್ನೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಲಾವಿದರಿಗೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ರಮ್ಯಾ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ಡಿಕೆ ಶಿವಕುಮಾರ್ ಅವರು ಹೇಳಿದ್ದು ಸಂಪೂರ್ಣ ತಪ್ಪೇನೂ ಅಲ್ಲ. ಸಾರ್ವಜನಿಕರ ಮೇಲೆ ಮತ್ತು ಜನರ ವೈಯಕ್ತಿಕ ಅಭಿಪ್ರಾಯದ ಮೇಲೆ ಕಲಾವಿದರಾದ ನಾವು ಪ್ರಭಾವ ಬೀರುತ್ತೇವೆ. ಹಾಗಾಗಿ ನಮಗೆ ಸರಿ ಎನಿಸಿದ ವಿಷಯಗಳ ಬಗ್ಗೆ ನಾವು ಮಾತನಾಡುವುದು ಮುಖ್ಯ. ನಿಮ್ಮ ಅನಿಸಿಕೆ ಯಾವುದರ ಪರ ಅಥವಾ ವಿರೋಧವಾಗಿ ಇರಬಹುದು. ಪ್ರಜಾಪ್ರಭುತ್ವಕ್ಕೆ ಸಂವಾದ ಅಗತ್ಯ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
‘ಗೋಕಾಕ್ ಚಳುವಳಿಗೆ ಡಾ. ರಾಜ್ಕುಮಾರ್ ಅವರು ಹೇಗೆ ಬೆಂಬಲ ನೀಡಿದರು ಎಂಬುದೇ ದೊಡ್ಡ ಉದಾಹರಣೆ ಆಗಿದೆ. ಒಂದು ವಿಷಯಕ್ಕೆ ಬೆಂಬಲ ನೀಡಬೇಕೋ ಅಥವಾ ನೀಡಬಾರದೋ ಎಂಬುದು ಕಲಾವಿದರ ಆಯ್ಕೆಗೆ ಬಿಟ್ಟಿದ್ದು. ಆದರೆ ಅವರಿಗೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಕಬಾರದು’ ಎಂದಿದ್ದಾರೆ ರಮ್ಯಾ.
ಇದನ್ನೂ ನೋಡಿ: ನಟಿ ರಮ್ಯಾ ಅಂದ ಚಂದಕ್ಕೆ ಸರಿಸಾಟಿ ಯಾರಿಲ್ಲ..
‘ವೈಯಕ್ತಿಕವಾಗಿ ಚಿತ್ರರಂಗದ ಬಹುತೇಕರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳಿಕೆ ನೀಡಲು ಅಂಜುತ್ತಾರೆ. ಯಾಕೆಂದರೆ ಅವರನ್ನು ಟ್ರೋಲ್ ಮಾಡಲಾಗುತ್ತದೆ. ಅವರ ಸಿನಿಮಾ ಹಾಗೂ ಕೆಲಸಕ್ಕೂ ಪೆಟ್ಟು ಬೀಳುತ್ತದೆ. ರಾಜಕೀಯದವರಿಗೆ ಕಲಾವಿದರು ಅದರಲ್ಲೂ, ನಟಿಯರು ಸುಲಭದ ಟಾರ್ಗೆಟ್ ಆಗಿದ್ದಾರೆ. ನಮ್ಮ ನಾಯಕರು ಬೆದರಿಕೆ ಹಾಕಬಾರದು. ಅದಕ್ಕಾಗಿಯೇ ಕಲಾವಿದರು ಮಾತನಾಡುವುದಿಲ್ಲ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.