ಶ್ರೀಮುರಳಿ, ತಿಲಕ್ ಶೇಖರ್, ಹರಿಪ್ರಿಯಾ ಮೊದಲಾದವರು ನಟಿಸಿದ್ದ ‘ಉಗ್ರಂ’ ಸಿನಿಮಾ (Ugram Movie) ರಿಲೀಸ್ ಆಗಿದ್ದು 2014ರಲ್ಲಿ. ಈ ಚಿತ್ರ ಥಿಯೇಟರ್ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ, ಪೈರಸಿ ಕಾಪಿ ಎಲ್ಲಾ ಮೊಬೈಲ್ಗಳಲ್ಲಿ ಹರಿದಾಡಿತು. ಸಿನಿಮಾ ಯೂಟ್ಯೂಬ್ನಲ್ಲಿ ರಿಲೀಸ್ ಆಯಿತು. ಆಗ ಜನರು ಸಿನಿಮಾ ಇಷ್ಟಪಟ್ಟರು. ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಆ ಬಳಿಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಮಾಡಿದರು. ಈ ಸಿನಿಮಾಗಳಿಂದ ಇತಿಹಾಸವೇ ಸೃಷ್ಟಿ ಆಯಿತು. ಈಗ ಅವರ ನಿರ್ದೇಶನದ ‘ಸಲಾರ್’ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ. ಈ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ‘ಉಗ್ರಂ’ ಶೇಡ್ ಎದ್ದು ಕಾಣಿಸಿದೆ.
ಅಗಸ್ತ್ಯ ಎನ್ನುವ ವ್ಯಕ್ತಿ ಗೆಳೆಯ ಬಾಲಾನಿಗಾಗಿ ಜೀವನವನ್ನೇ ಸವೆಸುತ್ತಾನೆ. ಬಾಲನಿಗೋಸ್ಕರ ಅಗಸ್ತ್ಯ ರೌಡಿಸಂ ಆರಂಭಿಸುತ್ತಾನೆ. ಈ ಸಿನಿಮಾ ಸಖತ್ ರಗಡ್ ಆಗಿತ್ತು. ‘ಕೆಜಿಎಫ್ 2’ ರಿಲೀಸ್ಗೂ ಮೊದಲೇ ‘ಸಲಾರ್’ ಸೆಟ್ಟೇರಿತ್ತು. ಇದು ‘ಉಗ್ರಂ’ ಸಿನಿಮಾ ರಿಮೇಕ್ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ತಂಡ ಇದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಆದರೆ, ರವಿ ಬಸ್ರೂರು ಮಾತ್ರ ಅಸಲಿ ವಿಚಾರವನ್ನು ಒಪ್ಪಿಕೊಂಡಿದ್ದರು.
‘ಉಗ್ರಂ’ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಶಾಂತ್ ನೀಲ್ ಜೊತೆ ಸಂಗೀತ ನಿರ್ದೇಶಕನಾಗಿ ರವಿ ಬಸ್ರೂರು ಕೆಲಸ ಮಾಡಿದರು. ‘ಸಲಾರ್’ ಚಿತ್ರಕ್ಕೂ ಅವರದ್ದೇ ಸಂಗೀತ ಸಂಯೋಜನೆ ಇದೆ. ‘ಸಲಾರ್’ ಸೆಟ್ಟೇರಿದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿ ಬಸ್ರೂರು ಅವರಿಗೆ ಪ್ರಶ್ನೆ ಒಂದು ಎದುರಾಗಿತ್ತು. ‘ಇದು ಉಗ್ರಂ ರಿಮೇಕ್ ಹೌದಾ’ ಎಂದು ಪ್ರಶ್ನೆ ಕೇಳಲಾಯಿತು.
ಇದಕ್ಕೆ ರವಿ ಬಸ್ರೂರು ಅವರು ನೇರ ಮಾತುಗಳಲ್ಲಿ ಉತ್ತರ ನೀಡಿದ್ದರು. ‘ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ರಿಮೇಕ್ ಆದರೂ ಇವರು ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿದೆ’ ಎಂದಿದ್ದರು ರವಿ ಬಸ್ರೂರು. ಟ್ರೇಲರ್ ನೋಡಿದ ಅನೇಕರು ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾರೆ.
‘ಉಗ್ರಂ’ ಸಿನಿಮಾದಲ್ಲಿರುವ ಫ್ರೆಂಡ್ಶಿಪ್ ಕಥೆಯನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನವನ್ನು ಪ್ರಶಾಂತ್ ನೀಲ್ ಮಾಡುತ್ತಿರಬಹುದು ಎಂದು ಟ್ರೇಲರ್ ನೋಡಿದವರು ಊಹಿಸಿದ್ದಾರೆ. ‘ಸಲಾರ್’ ಟ್ರೇಲರ್ನಲ್ಲಿ ‘ಉಗ್ರಂ’ ಸಿನಿಮಾದ ಛಾಯೆ ಕಾಣಿಸಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ‘ಸಲಾರ್’ ಸಿದ್ಧವಾಗಿದೆ.
‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ಪ್ರಭಾಸ್, ಪೃಥ್ವಿರಾಜ್ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕೆ ಇದೆ. ಅದ್ದೂರಿ ಸೆಟ್ಗಳು ಗಮನ ಸೆಳೆದಿವೆ. ಮೇಕಿಂಗ್ ಅದ್ದೂರಿಯಾಗಿದ್ದರೂ ‘ಕೆಜಿಎಫ್ 2’ ಶೇಡ್ ಕಾಣಿಸಿರುವುದರಿಂದ ಅನೇಕರು ಬೇಸರಗೊಂಡಿದ್ದಾರೆ. ಡಿಸೆಂಬರ್ 22ರಂದು ಸಿನಿಮಾ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ‘ಉಗ್ರಂ’ನಿಂದ ‘ಸಲಾರ್’ ಚಿತ್ರದವರೆಗೆ: ಪ್ರಶಾಂತ್ ನೀಲ್ ಸಿನಿಮಾಗೆ ಈ ಹೀರೋ ಪಾತ್ರಗಳೇ ಸ್ಫೂರ್ತಿ
ಇತ್ತೀಚೆಗೆ ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡಿದ್ದರು. ‘ಹೀರೋನ ವಿಲನ್ ರೀತಿ ತೋರಿಸೋದು ನನಗೆ ಇಷ್ಟ. ಅದುವೇ ನನ್ನ ಸಿನಿಮಾದ ಶಕ್ತಿ ಎಂದಿದ್ದರು. ಅದು ‘ಸಲಾರ್’ ಸಿನಿಮಾದಲ್ಲೂ ಮುಂದುವರಿಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Sat, 2 December 23