ದರ್ಶನ್ಗೆ ಜಾಮೀನು: ನೋವಿನಲ್ಲೂ ಘನತೆ ಮೆರೆದ ರೇಣುಕಾ ಸ್ವಾಮಿ ತಂದೆ
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ಗೆ ಮಧ್ಯಂತರ ಜಾಮೀನು ದೊರೆತಿದೆ. ಆರು ವಾರಗಳ ಜಾಮೀನು ಇದಾಗಿದ್ದು, ಚಿಕಿತ್ಸೆಯ ಕಾರಣಕ್ಕೆ ಜಾಮೀನು ನೀಡಲಾಗಿದೆ. ದರ್ಶನ್ಗೆ ಜಾಮೀನು ಸಿಕ್ಕಿರುವ ಬಗ್ಗೆ ರೇಣುಕಾ ಸ್ವಾಮಿಯ ತಂದೆ ಕಾಶೀನಾಥಯ್ಯ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಮಧ್ಯಂತರ ಜಾಮೀನು ದೊರೆತಿದೆ. ಆರು ವಾರಗಳ ಮಧ್ಯಂತರ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದೆ. ಹೈಕೋರ್ಟ್ ಆದೇಶದಿಂದ ಸಹಜವಾಗಿಯೇ ದರ್ಶನ್ ಪರ ಕುಟುಂಬದವರು ಖುಷಿಯಾಗಿದ್ದಾರೆ. ಆದರೆ ಇನ್ನೊಂದು ಕಡೆ ರೇಣುಕಾ ಸ್ವಾಮಿ ಕುಟುಂಬದವರಿಗೆ ಇದರಿಂದ ಬೇಸರ ಆದಂತಿದೆ. ದಾವಣಗೆರೆಯ ಹರಿಹರದಲ್ಲಿ ಟಿವಿ9 ಜೊತೆ ಮಾತನಾಡಿರುವ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ ನೋವಿನಲ್ಲೂ ಘನತೆ ಮೆರೆದಿದ್ದಾರೆ, ಜವಾಬ್ದಾರಿಯುತ ಮಾತುಗಳನ್ನಾಡಿದ್ದಾರೆ.
ದರ್ಶನ್ಗೆ ಜಾಮೀನು ಸಿಕ್ಕಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ, ‘ಮಧ್ಯಂತರ ಜಾಮೀನು ಸಿಕ್ಕಿದೆ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಅದು ನ್ಯಾಯಾಲಯ ಕೊಟ್ಟಿರುವ ಆದೇಶ, ದರ್ಶನ್ಗೆ ಜಾಮೀನು ಸಿಕ್ಕಿರುವುದು ಅದೊಂದು ಕಾನೂನು ಕ್ರಮ, ಅದಕ್ಕೆ ಗೌರವ ಕೊಡುತ್ತೇವೆ’ ಎಂದಿದ್ದಾರೆ. ಆ ಮೂಲಕ ತಮಗೆ ನೋವಿದ್ದರೂ ಕಾನೂನು ಪ್ರಕ್ರಿಯೆಗೆ, ನ್ಯಾಯಾಲಯದ ಆದೇಶಕ್ಕೆ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?
‘ನಮಗೆ, ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ, ನಾವು ಕಾನೂನು ಹೋರಾಟ ಮಾಡುತ್ತೇವೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ’ ಎಂದಿದ್ದಾರೆ. ಸೊಸೆ, ಮೊಮ್ಮಗನ ಜೊತೆಗೆ ಹರಿಹರಕ್ಕೆ ಅವರು ತೆರಳಿದ್ದರು. ಈ ವೇಳೆ ಅವರು ಟಿವಿ9 ಜೊತೆ ಮಾತನಾಡಿ ದರ್ಶನ್ಗೆ ಜಾಮೀನು ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೆ ರೇಣುಕಾ ಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾ ಸ್ವಾಮಿಯ ಕೊಲೆಯಾದಾಗ ಅವರ ಪತ್ನಿ ಗರ್ಭಿಣಿ ಆಗಿದ್ದರು.
ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಇತರರ ಮೇಲಿದೆ. ಪ್ರಕರಣದಲ್ಲಿ ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ. ಪವಿತ್ರಾ ಗೌಡ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ. ಪ್ರಸ್ತುತ, ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಈ ಜಾಮೀನು ನೀಡಲಾಗಿದ್ದು, ದರ್ಶನ್ ತಮ್ಮಿಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ