ನಟಿಗೆ ಲೈಂಗಿಕ ಕಿರುಕುಳ: ನಟ, ನಿರ್ದೇಶಕ ಹೇಮಂತ್ ಬಂಧನ
Actress complaint: ನಟಿಯೊಬ್ಬರಿಗೆ ಸಿನಿಮಾನಲ್ಲಿ ಅವಕಾಶ ನೀಡಿ, ಪ್ರಚಾರಕ್ಕೆಂದು ಮುಂಬೈಗೆ ಕರೆದೊಯ್ದು, ಅಲ್ಲಿ ನಟಿಗೆ ಗೊತ್ತಿಲ್ಲದೆ ಮದ್ಯ ಕುಡಿಸಿ ಆಕೆಯ ಖಾಸಗಿ ವಿಡಿಯೋಗಳನ್ನು ಮಾಡಿಕೊಂಡು ಈಗ ನಟಿಗೆ ಬ್ಲಾಕ್ಮೇಲ್ ಮಾಡುತ್ತಿರುವ ಆರೋಪದಲ್ಲಿ ಸಿನಿಮಾ ನಟ, ನಿರ್ದೇಶಕ ನಿರ್ಮಾಪಕರೂ ಆಗಿರುವ ಹೇಮಂತ್ ಅನ್ನು ಬಂಧಿಸಲಾಗಿದೆ.

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಪದೇ ಪದೇ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ನಟಿಯ ಆರೋಪದ ಬೆನ್ನಲ್ಲೆ ನಿರ್ದೇಶಕನನ್ನು ಬಂಧಿಸಲಾಗಿದೆ. ಈ ಹಿಂದೆ ‘ರಿಚ್ಚಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿ, ನಟಿಸಿ ನಿರ್ಮಾಣವನ್ನೂ ಮಾಡಿದ್ದ ಹೇಮಂತ್ ಅನ್ನು ಇದೀಗ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ನಟಿಯೊಬ್ಬರು ಹೇಮಂತ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ದೂರಿನಲ್ಲಿ ಹೇಳಿರುವಂತೆ, 2022ರಲ್ಲಿ ನಟಿಗೆ ನಟ ಹೇಮಂತ್ ಪರಿಚಯ ಆಗಿದ್ದರು. ರಿಚ್ಚಿ ಎಂಬ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿದ್ದರು. ಸಿನಿಮಾದ ಪ್ರಚಾರಕ್ಕೆಂದು 2023ರ ಆಗಸ್ಟ್ 5 ರಂದು ಸುದ್ದಿಗೋಷ್ಠಿಗೆಂದು ಮುಂಬೈಗೆ ಹೋದಾಗ ಮಾಕ್ಟೇಲ್ನಲ್ಲಿ ಮದ್ಯ ಬೆರೆಸಿ ನಟಿಗೆ ಕುಡಿಸಿದ್ದರಂತೆ. ನಟಿಗೆ ಮತ್ತು ಬರಿಸಿ ಅವರ ಖಾಸಗಿ ವಿಡಿಯೋಗಳು, ಚಿತ್ರಗಳನ್ನು ತೆಗೆದುಕೊಂಡಿರುವ ನಟ ಹೇಮಂತ್, ಬಳಿಕ ನಟಿಯನ್ನು ಲೈಂಗಿಕವಾಗಿ ಬಳಸಿಕೊಂಡು ಆ ಬಳಿಕ ಬ್ಲಾಕ್ಮೇಲ್ ಮಾಡಿರುವುದಾಗಿ ನಟಿ ದೂರು ನೀಡಿದ್ದರು. ನಟಿಯ ದೂರಿನ ಬೆನ್ನಲ್ಲೆ ಹೇಮಂತ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಒಟಿಟಿಗಳಿಂದ ನಿರ್ಲಕ್ಷ್ಯ, ಕನ್ನಡ ಸಿನಿಮಾಗಳ ನೆರವಿಗೆ ಬಂದ ಸರ್ಕಾರ
ಅಂದಹಾಗೆ ನಟ ಹೇಮಂತ್ ಮತ್ತು ನಟಿಯ ನಡುವೆ ಈ ಹಿಂದೆಯೂ ಸಹ ಜಗಳ ನಡೆದಿತ್ತು. ನಟಿ ತಮ್ಮ ‘ರಿಚ್ಚಿ’ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ‘ರಿಚ್ಚಿ’ ಸಿನಿಮಾದ ನಿರ್ಮಾಪಕರೂ ಆಗಿರುವ ಹೇಮಂತ್, ಫಿಲಂ ಚೇಂಬರ್ಗೆ ದೂರು ನೀಡಿದ್ದರು. ಅದಕ್ಕೂ ಹಿಂದೆ 2023 ರಲ್ಲಿ ನಟಿ ಹಾಗೂ ಆಕೆಯ ತಾಯಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಮಂತ್ ಫಿಲಂ ಚೇಂಬರ್ ಮೆಟ್ಟಿಲೇರಿದ್ದರು. ಆ ಸಮಯದಲ್ಲಿ ಫಿಲಂ ಚೇಂಬರ್ನವರು ಮಧ್ಯಸ್ಥಿಕೆವಹಿಸಿ ಸಂಧಾನ ಮಾಡಿಸಿದ್ದರು. ಈಗ ನಟಿ ಲೈಂಗಿಕ ಕಿರುಕುಳ ದೂರು ನೀಡಿದ್ದು, ಹೇಮಂತ್ ಪೊಲೀಸರ ಅತಿಥಿಯಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Tue, 7 October 25




