ಕನ್ನಡದ ‘ಕಾಂತಾರ’ ಸಿನಿಮಾ (Kantara Movie) ದೇಶಾದ್ಯಂತ ಈ ಪರಿ ಯಶಸ್ಸು ಕಾಣುತ್ತದೆ ಎಂದು ಬಹುತೇಕರು ನಿರೀಕ್ಷಿಸಿರಲಿಲ್ಲ. ಸೆ.30ರಂದು ಸಿನಿಮಾ ಬಿಡುಗಡೆ ಆದ ಬಳಿಕ ಜನರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಉತ್ತಮ ಪ್ರದರ್ಶನ ಕಾಣಲು ಆರಂಭಿಸಿತು. ಅಂತಿಮವಾಗಿ ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿತು. ‘ಕಾಂತಾರ’ ಸಿನಿಮಾದಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಇಂದು ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಅವರು ಖ್ಯಾತ ಲೇಖಕ ಚೇತನ್ ಭಗತ್ (Chetan Bhagat) ಜೊತೆ ‘ಕಾಂತಾರ’ ಯಶಸ್ಸಿನ ಕುರಿತು ಮಾತನಾಡಿದ್ದಾರೆ.
‘ಟೈಮ್ಸ್ ನೌ ಸಮಿಟ್ 2022’ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ನಟ ಅನುಪಮ್ ಖೇರ್, ಲೇಖಕ ಚೇತನ್ ಭಗತ್ ಜೊತೆ ರಿಷಬ್ ಶೆಟ್ಟಿ ಅವರು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ಸಿನಿಮಾಗಳ ಸೋಲು ಮತ್ತು ದಕ್ಷಿಣ ಭಾರತದ ಚಿತ್ರಗಳ ಗೆಲುವಿನ ಬಗ್ಗೆ ಮಾತನಾಡಲಾಗಿದೆ. ಅದರಲ್ಲಿ ‘ಕಾಂತಾರ’ ಚಿತ್ರವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಲಾಯ್ತು. ಈ ವೇಳೆ ಮಾತನಾಡುತ್ತ, ತಮ್ಮ ಸಿನಿಮಾ ದೇಶಾದ್ಯಂತ ಯಶಸ್ಸು ಕಂಡಿದ್ದಕ್ಕೆ ಕಾರಣ ಏನು ಇರಬಹುದು ಎಂದು ರಿಷಬ್ ಶೆಟ್ಟಿ ವಿಶ್ಲೇಷಣೆ ಮಾಡಿದ್ದಾರೆ.
‘ಲಾಕ್ಡೌನ್ ಬಳಿಕ ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ನೆಲೆದ ಕಥೆಗಳನ್ನು ಹೆಚ್ಚಾಗಿ ವೀಕ್ಷಿಸಲು ಬಯಸುತ್ತಿದ್ದಾರೆ. ಭಾರತದ ಬಹುತೇಕ ಕಮರ್ಷಿಯಲ್ ಸಿನಿಮಾಗಳು ಪಾಶ್ಚಿಮಾತ್ಯ ಚಿತ್ರಗಳಿಗೆ ಪ್ರಭಾವಿತ ಆಗಿರುತ್ತವೆ. ಭಾರತದ ನೆಲದ ಕಥೆಗಳು ಒಟಿಟಿಯಲ್ಲಿ ಸಿಗಲ್ಲ. ಅದು ಸಿಗೋದು ನಮ್ಮ ಹಳ್ಳಿಗಳಲ್ಲಿ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಕಾಂತಾರ ಚಿತ್ರದಲ್ಲಿ ನಾನು ನನ್ನ ಹಳ್ಳಿಯ ಕಥೆಯನ್ನು ಹೇಳಿದ್ದೇನೆ. ಪ್ರಾದೇಶಿಕ ವಿಷಯವೇ ಹೆಚ್ಚು ಸಾರ್ವತ್ರಿಕ ಆಗುತ್ತದೆ ಅಂತ ನಾನು ನಂಬಿದ್ದೇನೆ. ದೈವಾರಾಧನೆ ಬಗ್ಗೆ ನಾವು ಸಿನಿಮಾ ಮಾಡಿದ್ದೇವೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ನಮ್ಮ ಬದುಕಿನ ಶೈಲಿ ಕೃಷಿಗೆ ಅಂಟಿಕೊಂಡಿರುತ್ತದೆ. ಕಾಂತಾರದಲ್ಲಿ ದೈವಾರಾಧನೆ ತೋರಿಸಿದ ರೀತಿಯೇ ದೇಶದ ಪ್ರತಿ ಹಳ್ಳಿಯ ಜನರು ಒಂದು ಶಕ್ತಿಯನ್ನು ನಂಬುತ್ತಾರೆ. ಅದು ನಮ್ಮೆಲ್ಲರ ಭಾವನೆಯ ವಿಷಯ. ಪ್ರಾಯಶಃ ಆ ವಿಚಾರವೇ ಎಲ್ಲರಿಗೂ ಕನೆಕ್ಟ್ ಆಗಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಭಾರತೀಯ ಚಿತ್ರರಂಗಕ್ಕೆ ಹಿಂದಿ ಸಿನಿಮಾಗಳ ದೊಡ್ಡ ಕೊಡುಗೆ ಇದೆ. ಅವು ಕೂಡ ಗೆಲ್ಲುತ್ತಿವೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ನಾವು ಏನು ಹೇಳಬೇಕು’ ಎಂದು ಹೇಳುವ ಮೂಲಕ ಬಾಲಿವುಡ್ನಲ್ಲೂ ಗೆಲ್ಲುವ ಚಿತ್ರಗಳು ಬರುತ್ತಿವೆ ಎಂದು ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:17 pm, Sun, 27 November 22