‘ಮರ್ದಿನಿ’ ಟ್ರೇಲರ್ನಿಂದ ಹೆಚ್ಚಿದ ಕೌತುಕ; ರೋಚಕ ಕಥೆ ಹೇಳಲು ಸಜ್ಜಾದ ಹೊಸಬರ ಟೀಮ್
ಟ್ರೇಲರ್ ಮೂಲಕ ‘ಮರ್ದಿನಿ’ ಸಿನಿಮಾ ಗಮನ ಸೆಳೆದಿದೆ. ರಿತನ್ಯ ಹೂವಣ್ಣ ಮುಖ್ಯಭೂಮಿಕೆಯಲ್ಲಿ ಇರುವ ಈ ಚಿತ್ರ ಸೆಪ್ಟೆಂಬರ್ 16ರಂದು ಬಿಡುಗಡೆ ಆಗಲಿದೆ.
ಕನ್ನಡದ ‘ಮರ್ದಿನಿ’ ಸಿನಿಮಾ (Mardini Movie) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಇರುವ ಬಹುತೇಕ ಎಲ್ಲರೂ ಹೊಸಬರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ನಿರ್ಮಾಪಕ ಜಗ್ಗಿ ಅವರ ಆಶಯ ಆಗಿತ್ತು. ಅದರಂತೆ ಸಂಪೂರ್ಣ ಹೊಸಬರ ತಂಡವನ್ನು ಕಟ್ಟಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ಕಿರಣ್ ಕುಮಾರ್ ವಿ. ನಿರ್ದೇಶನ ಮಾಡಿದ್ದಾರೆ. ‘ಕೊವಿಡ್ ಸಮಯದಲ್ಲಿ ಶುರುವಾದ ಸಿನಿಮಾ ಇದು. ಮೂರು ಅಲೆ ಬಂದರೂ ಯಾವುದೇ ತೊಂದರೆ ಇಲ್ಲದೇ ಶೂಟಿಂಗ್ ಮುಗಿಸಿದ್ದೇವೆ. ಇದು ಸಾಧ್ಯವಾಗಿದ್ದು ನಿರ್ಮಾಪಕ ಜಗ್ಗಿ ಅವರ ಸಹಕಾರದಿಂದ’ ಎಂದಿದ್ದಾರೆ ನಿರ್ದೇಶಕರು. ನಟಿ ರಿತನ್ಯಾ ಹೂವಣ್ಣ (Ritanya Huvanna) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅವರು ನಟಿಸಿದ್ದಾರೆ. ಅವರಿಗೂ ಇದು ಮೊದಲ ಸಿನಿಮಾ.
ಸೆಪ್ಟೆಂಬರ್ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸದ್ಯ ಟ್ರೇಲರ್ ಬಿಡುಗಡೆ ಮಾಡಿ, ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಹಲವು ವರ್ಷಗಳಿಂದ ಬ್ಯಾನರ್ ಮತ್ತು ಸ್ಟ್ಯಾಂಡಿ ನಿರ್ಮಾಣ ಮಾಡಿದ ಅನುಭವ ಹೊಂದಿರುವ ಜಗ್ಗಿ ಅವರು ‘ಅಂಕಿತ್ ಫಿಲ್ಮ್ಸ್’ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿತನ್ ಹಾಸನ್ ಅವರು ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನ ಮಾಡಿದ್ದಾರೆ.
ಚೊಚ್ಚಲ ಚಿತ್ರದಲ್ಲೇ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ರಿತನ್ಯ ಅವರಿಗೆ ಇದೆ. ‘ನನಗೆ ಚಿಕ್ಕ ವಯಸ್ಸಿನಿಂದ ಮಾಲಾಶ್ರೀ ಎಂದರೆ ತುಂಬ ಇಷ್ಟ. ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದ್ದೆ. ಆದರೆ ಆಯ್ಕೆ ಆಗಿರಲಿಲ್ಲ. ನಿರ್ಮಾಪಕ ಜಗ್ಗಿ ಅವರು ನನಗೆ ಅಣ್ಣನ ರೀತಿ. ಲಾಕ್ಡೌನ್ ಬಳಿಕ ಎಲ್ಲರ ಜೀವನ ಕಷ್ಟ ಆಗಿತ್ತು. ಆ ಸಂದರ್ಭದಲ್ಲಿ ಜಗ್ಗಿ ಅವರು ಸಿನಿಮಾ ಶುರು ಮಾಡಿದರು. ಆಗ ನಾನು ಅವರಿಗೆ ನನ್ನ ಫೋಟೋ ಕಳಿಸಿಕೊಟ್ಟೆ. ಈ ಸಿನಿಮಾದ ಮುಖ್ಯ ಪಾತ್ರಕ್ಕೆ ನಾನು ಆಯ್ಕೆ ಆದೆ. ಶೂಟಿಂಗ್ ನಡುವೆ ನಮ್ಮ ತಂದೆ ತೀರಿಹೋದರು. ಚಿತ್ರತಂಡದ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ’ ಎಂಬುದು ನಾಯಕಿ ರಿತನ್ಯ ಹೂವಣ್ಣ ಅವರ ಮಾತುಗಳು.
ಮಹಿಳಾ ಪ್ರಧಾನ ಕಥೆಯನ್ನೇ ಆಯ್ಕೆ ಮಾಡಿದ್ದು ಯಾಕೆ? ಈ ಪ್ರಶ್ನೆಗೆ ನಿರ್ದೇಶಕ ಕಿರಣ್ ಕುಮಾರ್ ವಿ. ಉತ್ತರ ನೀಡಿದ್ದಾರೆ. ಅಡುಗೆ ಮನೆಯಿಂದ ಆರ್ಮಿ ತನಕವೂ ಮಹಿಳೆಯರ ಮಹತ್ವ ದೊಡ್ಡದಿದೆ. ಅವರ ಜರ್ನಿಯಲ್ಲಿ ಹಲವು ವಿಷಯಗಳಿವೆ. ಅದೇ ರೀತಿ ‘ಮರ್ದಿನಿ’ ಚಿತ್ರದಲ್ಲೂ ಮಹಿಳೆಯರ ಕಥಾವಸ್ತು ಇದೆ. ಮಹಿಳಾ ಪೊಲೀಸ್ ಅಧಿಕಾರಿಯ ಪಾತ್ರ ಈ ಸಿನಿಮಾದಲ್ಲಿ ಪ್ರಧಾನವಾಗಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ರಿತನ್ಯ ಹೂವಣ್ಣ ಜೊತೆಗೆ ಅಕ್ಷಯ್, ಮನೋಹರ್, ಇಂಚರಾ ಜೋಶಿ, ರಚನಾ ಎಸ್, ಸುಶ್ಮಿತಾ ಮುಂತಾದವರು ನಟಿಸಿದ್ದಾರೆ. ಯೂಟ್ಯೂಬ್ನಲ್ಲಿ ಮೂರು ಲಕ್ಷಕ್ಕೂ ಅಧಿಕ ಬಾರಿ ಈ ಚಿತ್ರದ ಟ್ರೇಲರ್ ವೀಕ್ಷಣೆ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.