ಯಶ್ ಅಭಿಮಾನಿಗಳು ಮೃತಪಟ್ಟ ಪ್ರಕರಣ; ವರ್ಷ ಕಳೆದರೂ ನಿಂತಿಲ್ಲ ಹೆತ್ತವರ ಕಣ್ಣೀರು
ಯಶ್ ಅವರ 2023ರ ಜನ್ಮದಿನದಂದು ಮೂವರು ಅಭಿಮಾನಿಗಳು ಫ್ಲೆಕ್ಸ್ ಹಾಕುವಾಗ ಮೃತಪಟ್ಟ ದುರಂತಕ್ಕೆ ಒಂದು ವರ್ಷ. ಕುಟುಂಬಗಳು ಇನ್ನೂ ದುಃಖದಲ್ಲಿದ್ದಾರೆ. ಯಶ್ ಅವರು ಸಾಂತ್ವನ ಹೇಳಿ ಸಹಾಯ ಮಾಡಿದ್ದರೂ, ನಷ್ಟದ ನೋವು ಕಡಿಮೆಯಾಗಿಲ್ಲ. ಈ ವರ್ಷ, ಯಶ್ ಅವರು ವಿದೇಶದಲ್ಲಿರುವುದರಿಂದ ಜನ್ಮದಿನ ಆಚರಣೆ ಇರುವುದಿಲ್ಲ.
ನಟ ಯಶ್ ಅವರಿಗೆ ಜನವರಿ 8 ಜನ್ಮದಿನದ ಸಂಭ್ರಮ. ಆದರೆ ಕಳೆದ ವರ್ಷ ಯಶ್ ಜನ್ಮದಿನದಂದು ಸೂತಕದ ಛಾಯೆ ಆವರಿಸಿತ್ತು. ಅದಕ್ಕೆ ಕಾರಣ ಆಗಿದ್ದು ಯಶ್ ಅಭಿಮಾನಿಗಳ ಸಾವು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಬರ್ತ್ಡೇ ದಿನ ಫ್ಲೆಕ್ಸ್ ಹಾಕಲು ಹೋಗಿದ್ದ ಮೂವರು ಯುವಕರು ಮೃತಪಟ್ಟಿದ್ದರು. ಆ ಬಳಿಕ ಯಶ್ ಅವರು ಅಲ್ಲಿಗೆ ಆಗಮಿಸಿ ಸಂತಾಪ ಹೇಳಿದ್ದರು. ಹಣವನ್ನೂ ನೀಡಿದ್ದರು. ಈಗ ಘಟನೆ ನಡೆದು ವರ್ಷ ಕಳೆದಿದೆ. ಆದಾಗ್ಯೂ ಕುಟುಂಬದ ಕಣ್ಣೀರು ನಿಂತಿಲ್ಲ.
2024ರ ಜನವರಿ 8ರಂದು ಯಶ್ ಅಭಿಮಾನಿಗಳು ಅದ್ದೂರಿಯಾಗಿ ಬರ್ತ್ಡೇ ಆಚರಿಸಲು ನಿರ್ಧರಿಸಿದ್ದರು. ಅದೇ ರೀತಿ ಸೂರಣಗಿ ಗ್ರಾಮದಲ್ಲಿ ಜನವರಿ 7ರ ರಾತ್ರಿ ಯಶ್ ಕಟೌಟ್ ನಿಲ್ಲಿಸಲು ಫ್ಯಾನ್ಸ್ ಮುಂದಾದರು. ಆದರೆ, ಕಂಬ ವಿದ್ಯುತ್ ಲೈನ್ಗೆ ತಾಗಿ ಮುರಳಿ ನಡುವಿನಮನಿ, ನವೀನ್ ಹರಿಜನ್ ಹಾಗೂ ಹನಮಂತ ಹರಿಜನ್ ಮೃತ ಪಟ್ಟಿದ್ದರು. ಕೆಲವರಿಗೆ ಗಾಯ ಆಗಿತ್ತು.
ಮನೆಗೆ ಆಧಾರ ಸ್ತಂಬವಾಗಬೇಕಿದ್ದ ಮಕ್ಕಳ ಕಳೆದುಕೊಂಡಿದ್ದ ಕುಟುಂಬ ಕಣ್ಣೀರಲ್ಲಿ ಕೈ ತೊಳೆದಿತ್ತು. ಅಭಿಮಾನಿಗಳು ಮೃತಪಟ್ಟ ಸುದ್ದಿ ತಿಳಿದು ಯಶ್ ಸೂರಣಗಿಗೆ ಆಗಮಿಸಿ ಸಾಂತ್ವನ ಹೇಳಿದ್ದರು. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಸಹಾಯ ಮಾಡಿದ್ದರು.
ನಿಂತಿಲ್ಲ ಕಣ್ಣೀರು..
ವರ್ಷ ಕಳೆದರೂ ಕುಟುಂಬದವರ ಕಣ್ಣೀರು ನಿಂತಿಲ್ಲ. ನಿತ್ಯ ಮಕ್ಕಳ ನೆನೆದು ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳನ್ನು ಕಳುಹಿಸಲೇಬಾರದಿತ್ತು ಎಂದು ಗೋಳಾಡುತ್ತಿದ್ದಾರೆ. ಕಾಡುತ್ತಿರುವ ಕಡು ಬಡತನದ ಜೊತೆ ಮಗನಿಲ್ಲ ಎನ್ನುವ ನೋವು ಕುಟುಂಬದವರನ್ನು ಮತ್ತಷ್ಟು ಹೈರಾಣವಾಗಿಸಿದೆ. ಆದರೆ, ಮೃತಪಟ್ಟ ಮಗ ಏನೇ ಮಾಡಿದರೂ ಹಿಂದಿರುಗುವುದಿಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಪಾಲಕರಿಗೆ ಆಗುತ್ತಿಲ್ಲ.
ಇದನ್ನೂ ಓದಿ: ಯಶ್ ಜನ್ಮದಿನಕ್ಕೆ ಸೂಪರ್ ಸರ್ಪ್ರೈಸ್; ಪೋಸ್ಟರ್ ಮೂಲಕ ಅಪ್ಡೇಟ್ ಕೊಟ್ಟ ‘ಟಾಕ್ಸಿಕ್’ ಟೀಂ
ಈ ವರ್ಷ ಇಲ್ಲ ಆಚರಣೆ
ಈ ವರ್ಷ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ಗಾಗಿ ವಿದೇಶದಲ್ಲಿ ಇರುತ್ತಾರೆ. ಈ ಕಾರಣಕ್ಕೆ ಬರ್ತ್ಡೇ ಆಚರಿಸಿಕೊಳ್ಳುವುದಿಲ್ಲ ಹಾಗೂ ಅಭಿಮಾನಿಗಳ ಭೇಟಿ ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೆ, ಫ್ಲೆಕ್ಸ್, ಬ್ಯಾನರ್ ಹಾಕೋದು ಬೇಡ ಎಂದು ಅವರು ಅಭಿಮಾನಿಗಳ ಬಳಿ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Tue, 7 January 25