ದುನಿಯಾ ಚಿತ್ರದಲ್ಲಿ ವಿಜಯ್ ಹೀರೋ ಆಗಲು ಕಾರಣವಾಗಿದ್ದು ಚಿತ್ರದುರ್ಗದ ಏಕನಾಥೇಶ್ವರಿ ದೇವರು!
Salaga: ನಟ ದುನಿಯಾ ವಿಜಯ್ ತುಂಬ ಕಷ್ಟದಿಂದ ಬೆಳೆದು ಬಂದವರು. ಚಿತ್ರರಂಗದಲ್ಲಿ ಅವರ ಜರ್ನಿ ಅಚ್ಚರಿ ಮೂಡಿಸುವಂಥದ್ದು. ಅವರು ಹೀರೋ ಆಗಿದ್ದರ ಹಿಂದೆ ಏಕನಾಥೇಶ್ವರಿ ದೇವರ ಆಶೀರ್ವಾದ ಇದೆ.
ದುನಿಯಾ ವಿಜಯ್ ನಟನೆಯ ‘ಸಲಗ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಮೂಲಕ ವಿಜಯ್ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ದುನಿಯಾ ಸಿನಿಮಾ ಮೂಲಕ ಹೀರೋ ಆದರು. ಈಗ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿನ ಏಕನಾಥೇಶ್ವರಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಏಕನಾಥೇಶ್ವರಿ ದೇವರ ಬಗ್ಗೆ ದುನಿಯಾ ವಿಜಯ್ ಅವರಿಗೆ ಅಪಾರ ಭಕ್ತಿ ಇದೆ. ಚಿತ್ರದುರ್ಗಕ್ಕೆ ಬಂದಾಗಲೆಲ್ಲ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಮನಸಾರೆ ಪೂಜೆ ಸಲ್ಲಿಸುತ್ತಾರೆ. ಅದಕ್ಕೆ ಒಂದು ಪ್ರಮುಖ ಕಾರಣ ಇದೆ. ಅದೇನೆಂದರೆ, ದುನಿಯಾ ವಿಜಯ್ ಅವರು ಹೀರೋ ಆಗಿದ್ದರ ಹಿಂದೆ ಏಕನಾಥೇಶ್ವರಿ ದೇವರ ಕೃಪೆ ಇದೆ. ಅದರ ಬಗ್ಗೆ ವಿಜಯ್ ಈಗ ನೆನಪು ಮಾಡಿಕೊಂಡಿದ್ದಾರೆ.
‘ದುನಿಯಾ’ ಚಿತ್ರದಲ್ಲಿ ಹೀರೋ ಆಗುವುದಕ್ಕೂ ಮುನ್ನ ಅನೇಕ ಚಿತ್ರಗಳಲ್ಲಿ ವಿಜಯ್ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅದೇ ರೀತಿ ‘ಕಲ್ಲರಳಿ ಹೂವಾಗಿ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಆ ಚಿತ್ರದ ಶೂಟಿಂಗ್ ಚಿತ್ರದುರ್ಗದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ವಿಜಯ್ ಹೀರೋ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಏಕನಾಥೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದರು.
‘ಆ ಚಿತ್ರದ ಶೂಟಿಂಗ್ಗೆ ಬಂದಾಗ ನಾನು ಹರಕೆ ಮಾಡಿಕೊಂಡಿದ್ದೆ. ಅಮ್ಮಾ.. ನಾನು ಹೀರೋ ಆಗಬೇಕು ಎಂದುಕೊಂಡಿದ್ದೇನೆ. ತಯಾರಿ ನಡೀತಾ ಇದೆ. ಅಕಾಸ್ಮಾತ್ ನಾನು ಹೀರೋ ಆದರೆ, ನಿಮ್ಮ ಮಡಿಲು ತುಂಬಿ ಹೋಗುತ್ತೇನೆ ಅಂತ ಹರಕೆ ಮಾಡಿಕೊಂಡಿದ್ದೆ. ಅದು ನಿಜವಾಯಿತು. ಹಾಗಾಗಿ ಇಲ್ಲಿಗೆ ಬಂದಾಗೆಲ್ಲ ಆ ದೇವಿಯನ್ನು ನೆನಪಿಸಿಕೊಳ್ಳುತ್ತೇನೆ. ಪ್ರತಿಯೊಂದು ಸ್ಥಳದಲ್ಲೂ ಒಂದೊಂದು ಶಕ್ತಿ, ಮಹಿಮೆ ಇದೆ. ಅದು ಇಲ್ಲ ಅಂದಿದ್ದರೆ ನಾನು ಇಷ್ಟ ಜನರ ಜೊತೆ ಸೇರಲು ಸಾಧ್ಯವಾಗುತ್ತಿರಲಿಲ್ಲ. ಅದೆಲ್ಲ ದೇವರ ಕೃಪೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
2007ರಲ್ಲಿ ತೆರೆಕಂಡ ದುನಿಯಾ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆ ಚಿತ್ರದ ಬಳಿಕ ನಿರ್ದೇಶಕ ಸೂರಿ ಮತ್ತು ವಿಜಯ್ ಹೆಸರಿನ ಜೊತೆಗೆ ದುನಿಯಾ ಎಂಬ ಪದ ಸೇರಿಕೊಂಡಿತು. ಆ ಚಿತ್ರದ ಮೂಲಕ ನಟಿ ರಶ್ಮಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು.
ಇದನ್ನೂ ಓದಿ: ಫೇಮಸ್ ಆಯ್ತು ಸಲಗ ಟ್ಯಾಟೂ..! ಅಭಿಮಾನಿಯ ಅಭಿಮಾನ ನೋಡಿ ಭಾವುಕರಾದ ನಟ ದುನಿಯಾ ವಿಜಯ್
ಡೆಲಿವರಿ ಬಾಯ್ ಕಾಮರಾಜ್ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್! ನ್ಯಾಯಕ್ಕಾಗಿ ಒತ್ತಾಯ