ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್ ಡೈರೆಕ್ಟರ್, ಸಂತೋಷ್ ಆನಂದ್ರಾಮ್ ಡೈಲಾಗ್ ರೈಟರ್
ಪುನೀತ್ ರಾಜ್ಕುಮಾರ್ ಅವರು ನಿರ್ದೇಶನ ಮಾಡಬೇಕು ಎಂದಿದ್ದನ್ನು ಕೇಳಿ ಶಿವರಾಜ್ಕುಮಾರ್ ಎಗ್ಸೈಟ್ ಆದರು. ‘ಸಲಗ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಹೀಗೊಂದು ಘಟನೆ ನಡೆಯಿತು.
ನಟ ದುನಿಯಾ ವಿಜಯ್ ಅವರು ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿದ್ದಾರೆ. ಈ ವಿಚಾರದಲ್ಲಿ ಅವರು ಪುನೀತ್ ರಾಜ್ಕುಮಾರ್ ಅವರಿಗೂ ಸ್ಫೂರ್ತಿ ಆಗಿದ್ದಾರೆ. ಭಾನುವಾರ (ಅ.10) ನಡೆದ ಪ್ರೀ-ರಿಲೀಸ್ ಇವೆಂಟ್ಗೆ ಅತಿಥಿಯಾಗಿ ಬಂದಿದ್ದ ಪುನೀತ್ ಅವರು ಈ ವಿಚಾರವನ್ನು ಹೇಳಿಕೊಂಡರು. ‘ಒಂದು ಕಾಲದಲ್ಲಿ ಡೈರೆಕ್ಷನ್ ಮಾಡಬೇಕು ಎಂಬ ಹುಚ್ಚು ನನಗೂ ಇತ್ತು. ಶಿವಣ್ಣನ ಸಿನಿಮಾವನ್ನೇ ನಿರ್ದೇಶನ ಮಾಡಬೇಕು. ಯಾಕೆಂದರೆ ಶಿವಣ್ಣ ಯಾವಾಗಲೂ ನಿರ್ದೇಶಕರ ನಟ’ ಎಂದು ಪುನೀತ್ ಹೇಳಿದರು. ಶೀಘ್ರದಲ್ಲೇ ಈ ಆಸೆ ನೆರವೇರಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಮನದಲ್ಲಿ ಕಾತರ ಹೆಚ್ಚುವಂತೆ ಅವರು ಮಾಡಿದ್ದಾರೆ.
ನಿರ್ದೇಶನದ ವಿಷಯದಲ್ಲಿ ಉಪೇಂದ್ರ ಕೂಡ ಪುನೀತ್ ಅವರಿಗೆ ಸ್ಫೂರ್ತಿ. ಉಪ್ಪಿ ನಿರ್ದೇಶನ ಮಾಡಿದ ಎಲ್ಲ ಚಿತ್ರಗಳೂ ಅಪ್ಪುಗೆ ಇಷ್ಟ. ಅದರಲ್ಲೂ ‘ತರ್ಲೆ ನನ್ ಮಗ’ ಸಿನಿಮಾವನ್ನು ಅವರು ನೂರಾರು ಸಲ ನೋಡಿದ್ದಾರಂತೆ. ಈಗಲೂ ಅವರ ಮೊಬೈಲ್ ಫೋನ್ನಲ್ಲಿ ಆ ಸಿನಿಮಾ ಇಟ್ಟುಕೊಂಡಿದ್ದಾರೆ. ಪುನೀತ್ ನಿರ್ದೇಶನ ಮಾಡಬೇಕು ಎಂದಿದ್ದನ್ನು ಕೇಳಿ ಶಿವರಾಜ್ಕುಮಾರ್ ಎಗ್ಸೈಟ್ ಆದರು.
‘ಒಂದು ಒಳ್ಳೆಯ ಕಾನ್ಸೆಪ್ಟ್ ತೆಗೆದುಕೊಂಡು ಬಂದು, ಅಭಿಮಾನಿಗಳು ಸೀಟ್ ತುದಿಯಲ್ಲಿ ಕುಳಿತು ನೋಡುವಂತಹ ಥ್ರಿಲ್ಲರ್ ಸಿನಿಮಾವನ್ನು ಖಂಡಿತಾ ಮಾಡುತ್ತೇನೆ’ ಎಂದರು ಪುನೀತ್. ‘ನಾನು ನಿಮಗೆ ಸಹಾಯಕ ನಿರ್ದೇಶಕ ಆಗುತ್ತೇನೆ’ ಎಂದು ಉಪೇಂದ್ರ ಭರವಸೆ ಕೊಟ್ಟರು. ‘ಸಂತೋಷ್ ಆನಂದ್ರಾಮ್ ನನಗೆ ಡೈಲಾಗ್ ಬರೆದುಕೊಡುತ್ತಾರೆ. ಚೇತನ್ ಕುಮಾರ್ ನನಗೆ ಸಪೋರ್ಟ್ ಮಾಡೋಕೆ ಇರುತ್ತಾರೆ. ಇವರೆಲ್ಲ ಇರುವಾಗ ನಾನು ಸ್ಟೈಲ್ ಆಗಿ ಬಂದು ಆ್ಯಕ್ಷನ್-ಕಟ್ ಹೇಳುತ್ತೇನೆ’ ಎಂದು ನಗು ಚೆಲ್ಲಿದರು ಪುನೀತ್ ರಾಜ್ಕುಮಾರ್.
ಅಷ್ಟೇ ಅಲ್ಲ, ಸ್ಟೇಜ್ ಮೇಲೆಯೇ ಶಿವಣ್ಣನಿಗೆ ಪುನೀತ್ ಆ್ಯಕ್ಷನ್-ಕಟ್ ಹೇಳಿದರು. ಅವರು ಆ್ಯಕ್ಷನ್ ಎಂದ ತಕ್ಷಣ ‘ಓಂ’ ಸಿನಿಮಾದ ಒಂದು ದೃಶ್ಯವನ್ನು ಶಿವಣ್ಣ ಅಭಿನಯಿಸಿ ತೋರಿಸಿದರು. ಆದಷ್ಟು ಬೇಗ ಪುನೀತ್ ಅವರ ನಿರ್ದೇಶನದ ಆಸೆ ಈಡೇರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಭಾನುವಾರ ನಡೆದ ಈ ಪ್ರೀ ರಿಲೀಸ್ ಇವೆಂಟ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡ ಸಾಕ್ಷಿಯಾಗಿದ್ದರು. ಸಲಗ ತಂಡಕ್ಕೆ ಅವರು ಕೂಡ ಶುಭ ಕೋರಿದರು. ಈ ಚಿತ್ರಕ್ಕೆ ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:
‘ನಮ್ಮ ಫ್ಯಾಮಿಲಿ ಅಂತಲ್ಲ.. ಫ್ಯಾಮಿಲಿ ಅಂದ್ರೆ ಚಿತ್ರರಂಗ’: ನಿನ್ನ ಸನಿಹಕೆ ಚಿತ್ರ ನೋಡಿದ ಬಳಿಕ ಪುನೀತ್ ಮಾತು
ದೊಡ್ಮನೆ ಮಗಳ ಚಿತ್ರ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? ಒಂದೇ ಫ್ರೇಮ್ನಲ್ಲಿ ಶಿವಣ್ಣ, ರಾಘಣ್ಣ, ಪುನೀತ್