ಸಲ್ಮಾನ್ ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿಯೇ ಇಲ್ಲ, ಇದು ಶುದ್ಧ ಸುಳ್ಳು

ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ 'ಭಯೋತ್ಪಾದಕ' ಎಂದು ಘೋಷಿಸಿದೆ ಎಂಬುದು ಶುದ್ಧ ಸುಳ್ಳು ಸುದ್ದಿ. ಸೌದಿ ಅರೇಬಿಯಾದಲ್ಲಿ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆಯ ನಂತರ ಈ ವದಂತಿ ಹರಡಿತು. ಆದರೆ, ಪಾಕಿಸ್ತಾನದಿಂದ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಇದು ಫೇಕ್ ನ್ಯೂಸ್ ಆಗಿದ್ದು, ವೈರಲ್ ಆಗಿರುವ ವರದಿಗಳು ಆಧಾರರಹಿತವಾಗಿವೆ.

ಸಲ್ಮಾನ್ ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿಯೇ ಇಲ್ಲ, ಇದು ಶುದ್ಧ ಸುಳ್ಳು
ಸಲ್ಮಾನ್ ಖಾನ್
Updated By: ರಾಜೇಶ್ ದುಗ್ಗುಮನೆ

Updated on: Oct 27, 2025 | 8:08 AM

ನಟ ಸಲ್ಮಾನ್ ಖಾನ್ (Salman Khan) ಅವರನ್ನು ಪಾಕಿಸ್ತಾನ ಸರ್ಕಾರ ‘ಭಯೋತ್ಪಾದಕ’ ಎಂದು ಘೋಷಿಸಿದೆ ಎನ್ನಲಾಗಿತ್ತು. ಇದಕ್ಕೆ ಕಾರಣ ಸೌದಿ ಅರೇಬಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಪಾಕಿಸ್ತಾನ ಮತ್ತು ಬಲೂಚಿಸ್ತಾನವನ್ನು ಬೇರೆ ಎಂದು ಉಲ್ಲೇಖಿಸಿದ್ದರು. ಇದು ಪಾಕಿಸ್ತಾನ ಸರ್ಕಾರಕ್ಕೆ ಬಹಳಷ್ಟು ಮುಜುಗರ ಉಂಟುಮಾಡಿತ್ತು. ಈ ಹೇಳಿಕೆಯ ನಂತರ, ಅಸಮಾಧಾನಗೊಂಡ ಪಾಕಿಸ್ತಾನದ ಸರ್ಕಾರವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಸಲ್ಮಾನ್ ಅವರನ್ನು ನೇರವಾಗಿ ಭಯೋತ್ಪಾದಕ ಎಂದು ಘೋಷಿಸಿದೆ ಎಂದು ವರದಿ ಆಗಿತ್ತು. ಆದರೆ, ಇದು ಫೇಕ್ ನ್ಯೂಸ್.

ಪಾಕಿಸ್ತಾನದ 1997ರ ಭಯೋತ್ಪಾದನಾ ವಿರೋಧಿ ಕಾಯ್ದೆಯ ನಾಲ್ಕನೇ ಶೆಡ್ಯೂಲ್ ಪ್ರಕಾರ ಭಯೋತ್ಪಾದಕ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳನ್ನು ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ ಸೇರಿದವರು ಪಾಕಿಸ್ತಾನಕ್ಕೆ ತೆರಳುವಂತಿಲ್ಲ. ಇದಕ್ಕೆ ಸಲ್ಮಾನ್ ಖಾನ್ ಹೆಸರು ಸೇರಿದೆ ಎಂದು ಹೇಳಲಾಗಿತ್ತು.

ಆದರೆ, ಇದು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಫೇಕ್ ನೋಟಿಫಿಕೇಷನ್​ಗಳನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿ ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಕಡೆಯಿಂದ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.  ಒಂದೊಮ್ಮೆ ಪಾಕಿಸ್ತಾನ ಈ ರೀತಿ ಘೋಷಣೆ ಮಾಡಿದ್ದರೂ, ಪಾಕಿಸ್ತಾನದ ಕಾನೂನಿಗೆ ಭಾರತದಲ್ಲಿ ಯಾವುದೇ ನ್ಯಾಯವ್ಯಾಪ್ತಿ ಇಲ್ಲ. ಆದ್ದರಿಂದ, ಪಾಕಿಸ್ತಾನದಲ್ಲಿ ಸಲ್ಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದರೂ ಅವರನ್ನು ಬಂಧಿಸಲಾಗುವುದುಇಲ್ಲ.

ಇದನ್ನೂ ಓದಿ
‘ಮುತ್ತಿಟ್ಟು, ಬಟ್ಟೆಗೆ ಕೈ ಹಾಕಿದ’; ಕರಾಳ ಅನುಭವ ಹಂಚಿಕೊಂಡ ನಟಿ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ
4ನೇ ಭಾನುವಾರವೂ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಡಬಲ್ ಡಿಜಿಟ್ ಕಲೆಕ್ಷನ್
‘ಸೀತಾ ರಾಮ’ ಮುಗಿದ ಬಳಿಕ ಏನು ಮಾಡ್ತಿದ್ದಾಳೆ ಸಿಹಿ? ಇಲ್ಲಿದೆ ವಿವರ

ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬಿಗ್ ಬಾಸ್​ ನಡೆಸಿಕೊಟ್ಟ ಸಲ್ಮಾನ್ ಖಾನ್? ವಿಡಿಯೋ ವೈರಲ್

ಸಲ್ಮಾನ್ ಖಾನ್ ಹೇಳಿದ್ದೇನು?

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಆಯೋಜಿಸಲಾದ ‘ಜಾಯ್ ಫೋರಮ್ 2025′ ನಲ್ಲಿ ನಟ ಸಲ್ಮಾನ್ ಖಾನ್ ಉಪಸ್ಥಿತರಿದ್ದರು. ಈ ವೇಳೆ ಅವರು ಮಾತನಾಡುವಾಗ ‘ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ (ಸೌದಿ ಅರೇಬಿಯಾದಲ್ಲಿ) ಬಿಡುಗಡೆ ಮಾಡಿದರೆ ಅದು ಸೂಪರ್ ಹಿಟ್ ಆಗುತ್ತದೆ. ತಮಿಳು, ತೆಲುಗು ಅಥವಾ ಮಲಯಾಳಂನಲ್ಲಿ ಸಿನಿಮಾ ಮಾಡಿದರೆ ನೂರಾರು ಕೋಟಿ ಗಳಿಸಬಹುದು. ಏಕೆಂದರೆ ಬೇರೆ ಬೇರೆ ಭಾಷೆಯ ಜನರು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಕೆಲಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ’ ಎಂದು ಹೇಳಿದ್ದರು. ಅವರು ಪಾಕಿಸ್ತಾನ ಹಾಗೂ ಬಲೂಚಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಚರ್ಚೆಗೆ ಕಾರಣ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.