Sanchari Vijay: ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟ ಕುಟುಂಬಸ್ಥರು
ಸಂಚಾರಿ ವಿಜಯ್ ಅವರ ಅಂತ್ಯಸಂಸ್ಕಾರ ಮಾಡಿ ಇಂದಿಗೆ (ಜೂ.17) ಮೂರನೇ ದಿನ. ಹೀಗಾಗಿ, ಪಂಚನಹಳ್ಳಿ ಬಳಿಯ ತೋಟದಲ್ಲಿರುವ ಸಮಾಧಿಗೆ ತೆರಳಿದ ವಿಜಯ್ ಸಹೋದರರು, ಕುಟುಂಬಸ್ಥರು, ಸ್ನೇಹಿತ ರಘು ಭಾಗಿಯಾಗಿ ಹಾಲು-ತುಪ್ಪ ಬಿಟ್ಟಿದ್ದಾರೆ.
ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಅಂತ್ಯಸಂಸ್ಕಾರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಜೂನ್ 15ರಂದು ನೆರವೇರಿಸಲಾಗಿದೆ. ಇಂದಿಗೆ (ಜೂನ್ 17) ಅವರನ್ನು ಮಣ್ಣು ಮಾಡಿ ಮೂರನೇ ದಿನ. ಹೀಗಾಗಿ, ಸಂಪ್ರದಾಯದಂತೆ ಕುಟುಂಬಸ್ಥರು ಸಂಚಾರಿ ವಿಜಯ್ ಸಮಾಧಿಗೆ ಹಾಲು, ತುಪ್ಪ ಬಿಟ್ಟಿದ್ದಾರೆ.
ಇತ್ತೀಚೆಗೆ ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್ ಮೃತಪಟ್ಟ ಬಗ್ಗೆ ಜೂನ್ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್ ಅಂತ್ಯಸಂಸ್ಕಾರ ನೆರವೇರಿತು. ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ವೈಎಸ್ವಿ ದತ್ತ ಸರ್ಕಾರದ ಪರವಾಗಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ವಿಜಯ್ ಅಂತ್ಯಸಂಸ್ಕಾರ ಮಾಡಿ ಮೂರು ದಿನ ಕಳೆದಿದೆ. ಹೀಗಾಗಿ, ಪಂಚನಹಳ್ಳಿ ಬಳಿಯ ತೋಟದಲ್ಲಿರುವ ಸಮಾಧಿಗೆ ತೆರಳಿದ ವಿಜಯ್ ಸಹೋದರರು, ಕುಟುಂಬಸ್ಥರು, ಸ್ನೇಹಿತ ರಘು ಭಾಗಿಯಾಗಿ ಹಾಲು-ತುಪ್ಪ ಬಿಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಇಡೀ ಕುಟುಂಬ ಹಾಗೂ ಊರಿನವರಲ್ಲಿ ದುಃಖ ಮಡುಗಟ್ಟಿದೆ.
1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್ ಜನಿಸಿದರು. ವಿಜಯ್ ಕುಮಾರ್ ಬಿ. ಎಂಬುದು ಅವರಿಗೆ ಇಟ್ಟ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದವರು. ‘ಸಂಚಾರಿ’ ಥಿಯೇಟರ್ ಗ್ರೂಪ್ನಿಂದ ಬಂದ ಕಾರಣ ಸ್ಯಾಂಡಲ್ವುಡ್ನಲ್ಲಿ ಸಂಚಾರಿ ವಿಜಯ್ ಎಂದೇ ಅವರು ಖ್ಯಾತಿ ಪಡೆದುಕೊಂಡಿದ್ದರು.
ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್