ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್
Sanchari Vijay Death: ಮೇಲೊಬ್ಬ ಮಾಯಾವಿ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತು ಚಕ್ರವರ್ತಿ ಚಂದ್ರಚೂಡ್ ಜೊತೆಯಾಗಿ ಕೆಲಸ ಮಾಡಿದ್ದರು. ಆದರೆ ಆ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ವಿಜಯ್ ಇಹಲೋಹ ತ್ಯಜಿಸುವಂತಾಗಿದ್ದು ನೋವಿನ ಸಂಗತಿ.
ಭೀಕರ ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಭಿಮಾನಿಗಳಿಗಿಂತಲೂ ಹೆಚ್ಚಾಗಿ ಅವರ ಸ್ನೇಹಿತರು ಮತ್ತು ಕುಟುಂಬದವರಿಗೆ ಇದರಿಂದ ಆಗಿರುವ ನೋವು ಹೇಳತೀರದು. ನಟ, ಪತ್ರಕರ್ತ, ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ಕೂಡ ಸಂಚಾರಿ ವಿಜಯ್ ಜೊತೆ ಆಪ್ತ ಒಡನಾಟ ಇಟ್ಟುಕೊಂಡಿದ್ದರು. ವಿಜಯ್ ನಿಧನದಿಂದ ಅವರಿಗೂ ಸಂಕಟ ಆಗಿದೆ. ಈ ನಡುವೆ ಎಲ್ಲರೂ ಮೆಚ್ಚುವಂತಹ ಒಂದು ಕಾರ್ಯವನ್ನು ಚಕ್ರವರ್ತಿ ಚಂದ್ರಚೂಡ್ ಮಾಡಿದ್ದಾರೆ.
ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಒಂದು ಗಿಣಿಯನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ಎಲ್ಲ ಮೃಗಾಲಯಗಳ ಬಾಗಿಲು ಮುಚ್ಚಿವೆ. ಇದರಿಂದಾಗಿ ಅಲ್ಲಿನ ಪ್ರಾಣಿ ಪಕ್ಷಿಗಳ ಆಹಾರ ಮತ್ತು ದಿನನಿತ್ಯದ ನಿರ್ವಹಣೆ ಕಷ್ಟ ಆಗುತ್ತಿದೆ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಳ್ಳುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರೆ ನೀಡಿದ್ದರು. ಅದಕ್ಕೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಸ್ಪಂದಿಸಿದ್ದಾರೆ.
ಅಗಲಿದ ತಮ್ಮ ಗೆಳಯ ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಗಿಣಿಯೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಹೆಸರಿನಲ್ಲಿ ಒಂದು ವರ್ಷದ ಅವಧಿಗೆ ಆ ಗಿಣಿಯ ಸಂಪೂರ್ಣ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ. ಅದರ ಪ್ರಮಾಣಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಸ್ವಾಮಿ ಸಂಚಾರಿ ವಿಜಯ್, ನಿಮಗೆ ಗಿಣಿ ಇಷ್ಟ. ಅದಕ್ಕೇ ದತ್ತು ತೆಗೆದುಕೊಂಡಿದ್ದೇನೆ ನೋಡಿ ನಿಮ್ಮ ಹೆಸರಲ್ಲಿ’ ಎಂದು ಅವರು ಬರೆದುಕೊಂಡಿದ್ದಾರೆ.
‘ಮೇಲೊಬ್ಬ ಮಾಯಾವಿ’ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತು ಚಕ್ರವರ್ತಿ ಚಂದ್ರಚೂಡ್ ಜೊತೆಯಾಗಿ ಕೆಲಸ ಮಾಡಿದ್ದರು. ಆದರೆ ಆ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ವಿಜಯ್ ಇಹಲೋಹ ತ್ಯಜಿಸುವಂತಾಗಿದ್ದು ನೋವಿನ ಸಂಗತಿ. ಮೇಲೊಬ್ಬ ಮಾಯಾವಿ ಮಾತ್ರವಲ್ಲದೆ ಲಂಕೆ, ಅವಸ್ಥಾಂತರ, ಪಿರಂಗಿಪುರ, ಪುಕ್ಸಟ್ಟೆ ಲೈಫು, ತಲೆದಂಡ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಅಷ್ಟರಲ್ಲಾಗಲೇ ವಿಧಿ ತನ್ನ ಕ್ರೌರ್ಯ ಪ್ರದರ್ಶಿಸಿದೆ.
ಜೂ. 12 ರಾತ್ರಿ ವಿಜಯ್ಗೆ ರಸ್ತೆ ಅಪಘಾತ ಆಯಿತು. ಜೂ.15ರಂದು ಅವರು ನಿಧನರಾದರು ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದರು. ಅದೇ ದಿನ ಸಂಜೆ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಇದನ್ನೂ ಓದಿ:
Sanchari Vijay: ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಉಚಿತವಾಗಿ ನೋಡಬಹುದು; ಇಲ್ಲಿದೆ ಲಿಂಕ್
Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು
Published On - 12:41 pm, Thu, 17 June 21