​ಸಂಚಾರಿ ವಿಜಯ್​ ಹೆಸರು ಬಳಸಿಕೊಂಡು ಪ್ರಚಾರ ಪಡೆದವರಿಗೆ ಸ್ನೇಹಿತ ವೀರೇಂದ್ರ ಮಲ್ಲಣ್ಣ ತಿರುಗೇಟು

Sanchari Vijay Death: ‘ವಿಜಯ್ ಬಗ್ಗೆ ಮಾತನಾಡಿ ಪ್ರಚಾರ ಪಡೆದುಕೊಳ್ಳುತ್ತಿರುವವರಿಗೆ ನಿಜವಾದ ಸಂಚಾರಿ ವಿಜಯ್ ಪರಿಚಯವೇ ಇಲ್ಲ. ವಿಜಯ್ ಬಡವರಾಗಿರಲಿಲ್ಲ. ನಾವು ಕಂಡ ಶ್ರೀಮಂತ ಅವರು, ಹೃದಯ ಶ್ರೀಮಂತ’ ಎಂದು ಅವರ ಸ್ನೇಹಿತ ವಿರೇಂದ್ರ ಮಲ್ಲಣ್ಣ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

​ಸಂಚಾರಿ ವಿಜಯ್​ ಹೆಸರು ಬಳಸಿಕೊಂಡು ಪ್ರಚಾರ ಪಡೆದವರಿಗೆ ಸ್ನೇಹಿತ ವೀರೇಂದ್ರ ಮಲ್ಲಣ್ಣ ತಿರುಗೇಟು
ಸಂಚಾರಿ ವಿಜಯ್​, ವೀರೇಂದ್ರ ಮಲ್ಲಣ್ಣ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್​ ಅವರು ನಿಧನರಾಗುತ್ತಿದ್ದಂತೆಯೇ ಅವರ ಬಗ್ಗೆ ಅನೇಕರು ಮಾತನಾಡಲು ಆರಂಭಿಸಿದರು. ತಾವು ಸಂಚಾರಿ ವಿಜಯ್​ಗೆ ಅತಿ ಆಪ್ತರು ಎಂದು ಹೇಳಿಕೊಂಡ ಕೆಲವರು ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು ತೆರೆದಿಟ್ಟರು. ಆದರೆ ಆ ಮಾತುಗಳಲ್ಲಿ ಹುರುಳಿಲ್ಲ ಎಂದು ಅವರ ಆಪ್ತ ಗೆಳೆಯ, ನಿರ್ದೇಶಕ ವೀರೇಂದ್ರ ಮಲ್ಲಣ್ಣ ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ದೀರ್ಘ ಲೇಖನ ಬರೆದಿದ್ದಾರೆ.

‘ಸಂಚಾರಿ ವಿಜಯ್ ಅಜಾಗರೂಕತೆಯಿಂದ ನಡೆದುಕೊಳ್ಳುವವರೂ ಆಗಿರಲಿಲ್ಲ, ಅವರಲ್ಲಿ ಬೇಜಾವಬ್ದಾರಿತನವೂ ಇರಲಿಲ್ಲ. ವಿಜಯ್ ಅವರು ಕಾರು ಮಾರಿಕೊಂಡರು, ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋದರು ಎಂಬ ಸುದ್ದಿಗಳಿಗೆ ಹೆಚ್ಚು ಒತ್ತು ಕೊಟ್ಟರು ಕೆಲವರು. ವಿಜಯ್ ಅವರ ಮನೆಯಲ್ಲಿ ಇದ್ದುದ್ದು ಒಂದೇ ಕಾರ್ ಅಲ್ಲ. ಆರ್ಥಿಕ ಸಮಸ್ಯೆಯ ಕಾರಣಕ್ಕೆ ಕಾರು ಮಾರಾಟ ಮಾಡಿದರು ಎಂಬುದು ಸುಳ್ಳು. ವಿಜಯ್ ಅವರಿಗೆ ಆರ್ಥಿಕ ಸಮಸ್ಯೆಗಳು ಇರಲಿಲ್ಲ, ಆ ಕಾರಣಕ್ಕೆ ಅವರು ಮದುವೆ ಆಗದೆ ಉಳಿದಿದ್ದರು ಎಂದು ಯಾರೋ ಒಬ್ಬರು ಕೊಟ್ಟ ಹೇಳಿಕೆ ಸುಳ್ಳು. ಮದುವೆ ಯಾಕಾಗಿಲ್ಲ ಎಂದು ಕೇಳಿದವರಿಗೆ ತಮಾಷೆಯಾಗಿ ನೀಡಿದ ಹಾರಿಕೆಯ ಉತ್ತರಗಳನ್ನು ಗಂಭೀರವಾಗಿ ಪರಿಗಣಿಸಬಾರದಿತ್ತು. ಮದುವೆ ಎಂಬುದು ಅವರ ವೈಯಕ್ತಿಕ ವಿಚಾರವಾಗಿತ್ತು. ಅವರಿಗೆ ಮನೆ ಬಾಡಿಗೆ ಕಟ್ಟಲು ಆಗುತ್ತಿರಲಿಲ್ಲ ಎಂಬ ಹೇಳಿಕೆಯೂ ಸುಳ್ಳು, ವಿಜಯ್ ಅವರದ್ದು ಸ್ವಂತ ಮನೆ. ಸಹೋದರನ ಜೊತೆ ಸೇರಿ ಕಟ್ಟಿಕೊಂಡ ಮೂರಂತಸ್ತಿನ ಮನೆ ಅವರದ್ದು. ವಿಜಯ್ ಅವರ ಬಗ್ಗೆ ಮಾತನಾಡುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿರುವವರಿಗೆ ನಿಜವಾದ ಸಂಚಾರಿ ವಿಜಯ್ ಪರಿಚಯವೇ ಇಲ್ಲ. ಸಂಚಾರಿ ವಿಜಯ್ ಬಡವರಾಗಿರಲಿಲ್ಲ. ನಾವು ಕಂಡ ಶ್ರೀಮಂತ ಅವರು, ಹೃದಯ ಶ್ರೀಮಂತ.‌

ಅಪರೂಪಕ್ಕೆ ಅಥವ ಅಕಸ್ಮಾತ್ತಾಗಿ ವಿಜಯ್ ಅವರು ನಮ್ಮ ಜೊತೆ ಬೈಕ್ ನಲ್ಲಿ ಓಡಾಡಬೇಕಾದ ಸಂದರ್ಭ ಬಂದಾಗ ಹೆಲ್ಮೆಟ್ ಹಾಕದೆ ಬೈಕ್ ಹತ್ತಿ ಕೂತದ್ದು ಎಂದೂ ಕಂಡಿಲ್ಲ. ಯಾವುದಾದರೂ ಕೆಲಸಕ್ಕೆ ತುರ್ತಾಗಿ ಹೋಗಬೇಕಾಗಿ ಬಂದಾಗ ನಮ್ಮ ಬೈಕುಗಳನ್ನು ತೆಗೆದುಕೊಂಡು ಹೋಗುವಾಗಲೂ ಹೆಲ್ಮೆಟ್ ಹಾಕದೇ ಹೋಗುತ್ತಿದ್ದವರಲ್ಲ. ಮೊದಲನೆಯದಾಗಿ ಅವರು ಕಾರಲ್ಲೇ ಓಡಾಡುತ್ತಿದ್ದ ವ್ಯಕ್ತಿ. ಈ ಟ್ರಾಫಿಕ್ಕಿನಲ್ಲಿ ಕಾರು ಡ್ರೈವ್ ಮಾಡಲು ಹಿಂಸೆ ಅನ್ನಿಸಿದಾಗ ಎಷ್ಟೋ ಬಾರಿ ಆಟೋ, ಕ್ಯಾಬ್, ಮೆಟ್ರೋ ರೈಲಿನಲ್ಲಿ ಓಡಾಡಿದವರು. ವಿಜಯ್ ಅತಿ ವೇಗಕ್ಕೆ ಹೆದರುತ್ತಿದ್ದವರು. ಈ ಬಾರಿಯ ಲಾಕ್-ಡೌನ್ ಶುರುವಾಗುವ ಮುನ್ನ ನಾವು ಹೈದರಾಬಾದ್ ನಲ್ಲಿ ಇದ್ವಿ. ವಾಪಾಸ್ ಕಾರಿನಲ್ಲಿ ಬರುವಾಗ ಬೆಂಗಳೂರಿನಲ್ಲಿ ರಾತ್ರಿ ಒಂಭತ್ತು ಗಂಟೆಯಿಂದ ಕರ್ಫ್ಯೂ ಶುರುವಾಗುತ್ತದೆ ಎಂಬ ಸುದ್ದಿ ತಿಳಿದು ನಮ್ಮ ಕಾರನ್ನು ವೇಗವಾಗಿ ಓಡಿಸಲೇಬೇಕಾಯ್ತು. ಆಗ ವಿಜಯ್ ‘ಪರ್ವಾಗಿಲ್ಲ ನಿಧಾನಕ್ಕೇ ಹೋಗಿ, ಲೇಟ್ ಆದ್ರೂ ಸರಿ, ಪೊಲೀಸರ ಜೊತೆ ಮಾತನಾಡೋಣ..’ ಎಂದು ಕಾರಿನ ವೇಗ ಕಡಿಮೆ ಮಾಡಿಸಿದ್ದವರು. ಕಳೆದ ವರ್ಷದ ಅಂತ್ಯದಲ್ಲಿ ನಾವೆಲ್ಲಾ ಗೋವಾಗೆ ಹೋಗಿಬರುವ ಪ್ರಯಾಣದುದ್ದಕ್ಕೂ ಹಿಂದಿನ ಸೀಟಲ್ಲೂ ಸೀಟ್ ಬೆಲ್ಟ್ ಹಾಕಿ ಕುಂತಿದ್ದವರು. ಅವರ ಮನೆಯ ಪಕ್ಕದ ರಸ್ತೆಯ ಅಂಗಡಿಗೆ ಹೋಗುವಾಗಲೂ ಕಾರಿನಲ್ಲೇ ಹೋಗಿ ಬರುತ್ತಿದ್ದ ಸಂಚಾರಿ ವಿಜಯ್ ಅವರು ಅಕಸ್ಮಾತ್ತಾಗಿ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಿದ್ದೇ ಶಾಪವಾಯಿತೋ ಏನೋ?

ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಸಹೋದರರೊಳಗೊಬ್ಬ ಹದಿನೈದು ವಯಸ್ಸಿನ ಹುಡುಗ ವಿಜಯ್ ಕುಮಾರ್ ಬಿ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಆಗುವ ತನಕ ಸಾಗಿ ಬಂದ ದಾರಿ ಅಂತಿಂತದ್ದಲ್ಲ. ಹಳ್ಳಿಯಲ್ಲಿ ಓದಿ, ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ, ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯ ಓದಿಕೊಂಡು, ಸೈನ್ ಬೋರ್ಡ್ ಆರ್ಟಿಸ್ಟ್ ಆಗಿ, ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ, ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡಿಕೊಂಡು, ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ರಂಗಭೂಮಿಯಲ್ಲಿ ದುಡಿದು, ತನ್ನ ಸಹೋದರನನ್ನು ಓದಿಸಿಕೊಂಡು, ನಟನೆಯಲ್ಲಿ ಪಕ್ವವಾಗಿ, ಧಾರವಾಹಿ ಮತ್ತು ಸಿನಿಮಾಗಳಲ್ಲಿ ತೊಡಗಿಸಿಕೊಂಡು, ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾದ ದಣಿವರಿಯದ ಸಂಚಾರಿ ವಿಜಯ್ ಕನ್ನಡ ಚಿತ್ರರಂಗವಲ್ಲದೇ ಬೇರಾವುದೇ ಚಿತ್ರರಂಗದವರಾಗಿದ್ದಿದ್ದರೆ ಅಲ್ಲಿನ ಉದ್ಯಮಗಳು ಅವರನ್ನು ಇನ್ನೂ ಉತ್ತಮ ಮಟ್ಟದಲ್ಲಿ ದುಡಿಸಿಕೊಳ್ಳುತ್ತಿದ್ದವೇನೋ! ಅಪ್ಪನ ಪಾತ್ರವಾಗಲಿ, ಮಗನ ಪಾತ್ರವಾಗಲಿ, ಯುವಕನ ಪಾತ್ರವಾಗಲಿ, ಮಧ್ಯವಯಸ್ಕನ ಪಾತ್ರವಾಗಲಿ, ವೃದ್ಧನ ಪಾತ್ರವಾಗಲಿ, ಹೆಣ್ಣಿನ ಪಾತ್ರವಾಗಲಿ, ಅಂಗವಿಕಲನ ಪಾತ್ರವಾಗಲಿ, ಮಾನಸಿಕ ಅಸ್ವಸ್ಥನ ಪಾತ್ರವಾಗಲಿ, ಗಂಭೀರ ಪಾತ್ರವಾಗಲಿ, ಹಾಸ್ಯಪಾತ್ರವಾಗಲಿ, ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಪ್ರತಿಭೆ ಸಂಚಾರಿ ವಿಜಯ್. ಅಂತಹ ಸಂಚಾರಿ ವಿಜಯ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ದುಡಿಸಿಕೊಂಡದ್ದು ಅವರ ಪರಿಚಿತರು, ಆಪ್ತರು ಮತ್ತು ಗೆಳೆಯರು ಮಾತ್ರ.

ರಾಷ್ಟ್ರಪ್ರಶಸ್ತಿ ಪಡೆದ ನಂತರ ಅವರಿಂದ ಅದೇ ರೀತಿಯ ಹೆಣ್ಣು-ಪಾತ್ರಗಳನ್ನು ಮಾಡಿಸಲು ಹೆಚ್ಚು ಜನ ಮುಂದೆ ಬಂದರು, ಆರಂಭದಲ್ಲಿ ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡರು ನಂತರ ಕ್ಷಮಿಸಿ ಎಂದು ವಿನಯದಿಂದಲೇ ಹೇಳಿ ಅಂತಹ ಪಾತ್ರಗಳಿಂದ ದೂರ ಉಳಿದರು. ಹೆಸರಾಂತ ನಿರ್ದೇಶಕರು, ನಿರ್ಮಾಪಕರು ತನಗೆ ಇನ್ನೂ ಹೆಚ್ಚಿನ ಸಾಧ್ಯತೆಯನ್ನು ಕಾಣಬಹುದಾದ ಪಾತ್ರ ನೀಡಬಹುದೆಂದು ಬಯಸಿದರು, ಅವರು ನಿರೀಕ್ಚಿಸಿದ ರೀತಿಯಲ್ಲಿ ಯಾವ ಬೆಳವಣಿಗೆಯೂ ನಡೆಯದೆ ಇದ್ದಾಗ ವಿಜಯ್ ಬೇಸರಿಸಿಕೊಳ್ಳಲಿಲ್ಲ, ಮತ್ತೆ ಎಂದಿನಂತೆ ನಗುತಲೇ ಎಲ್ಲರೊಡನೆ ಬೆರೆತರು. ಮೊದಲಿನಿಂದಲೂ ನಮ್ಮ ಸಿನಿಮಾ ಉದ್ಯಮದಲ್ಲಿ ಆರ್ಟ್-ಸಿನಿಮಾಗಳ ನಟರು-ನಿರ್ದೇಶಕರು, ಪ್ರಶಸ್ತಿ ವಿಜೇತ ನಟರು ಹಾಗೂ ನಿರ್ದೇಶಕರನ್ನು ಗುರುತಿಸುವವರು, ಅವಕಾಶ ಕೊಡುವವರು ಕಡಿಮೆಯೇ. 1975ರ ‘ಚೋಮನ ದುಡಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ವಾಸುದೇವ ರಾವ್ ಅವರಿಗೂ ಸಹ ಹೇಳಿಕೊಳ್ಳುವ ಮಟ್ಟಿಗಿನ ಉತ್ತಮ ಅವಕಾಶಗಳು ಸಿಗಲಿಲ್ಲ. 1986ರ ತಬರನ ಕತೆಯ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಚಾರುಹಾಸನ್ ಅವರು ಆ ನಂತರ ಅಭಿನಯಸಿದ್ದು ಒಂದೋ ಎರಡೋ ಕನ್ನಡ ಸಿನಿಮಾಗಳಲ್ಲಿ ಮಾತ್ರ. ವಿಜಯ್ ಅವರಿಗೆ ಆದದ್ದೂ ಅದೇ!

ಸಂಚಾರಿ ವಿಜಯ್ ಯಾರ ಬಳಿಯೂ ಪಾತ್ರಗಳಿಗಾಗಿ ಬೇಡಲಿಲ್ಲ, ಪಾತ್ರಗಳು ಸಿಗಲಿಲ್ಲ ಎಂದು ಕುಗ್ಗಲಿಲ್ಲ. ತಮ್ಮದೊಂದು ಸಿನಿಮಾಗೆ ಅನ್ಯಾಯವಾಗುತ್ತಿದೆ ಎಂದು ತಿಳಿದಾಗಲು ಪ್ರತಿಭಟಿಸದೇ ‘ಇಟ್ಸ್ ಓಕೆ’ಎಂದು ನಕ್ಕು ಅಂದಿನ ಬೆಳವಣಿಗೆಯ ಬಗ್ಗೆ ನಾಲ್ಕು ಮಾತನಾಡಿ ಸುಮ್ಮನಾಗಿದ್ದರು. ಬಹುಶಃ ಆ ಸಾತ್ವಿಕ ಗುಣದ ಕಾರಣಕ್ಕೇ ಸಂಚಾರಿ ವಿಜಯ್ ಅವರಿಗೆ ಶತ್ರುಗಳಿಲ್ಲ. ಸಂಚಾರಿ ವಿಜಯ್ ತಮ್ಮ ಮುವತ್ತೆಂಟು ವರ್ಷಗಳ ಬದುಕಿನಲ್ಲಿ ಬಹುದೂರದ ಮುಳ್ಳಿನ ದಾರಿ ತುಳಿದು, ತುಸು ದೂರ ಹೆದ್ದಾರಿಯಲ್ಲಿ ಒಳ್ಳೆಯ ಹಾಡು ಕೇಳುತ್ತಾ ಕಾರು ಡ್ರೈವ್ ಮಾಡಿ ಪಯಣಿಸಿದ್ದರು.‌ ಎರಡು ತಿಂಗಳ ಹಿಂದೆ ಅವರ ಊರಿಗೆ ಹೋದಾಗ ತೋಟದಲ್ಲಿ ಎಳ್ನೀರು ಕುಡಿದು ತೆಂಗಿನ ಮರದ ಕೆಳಗೆ ಮಲಗಿ ‘ಅಬ್ಬಾ, ಎಷ್ಟ್ ತಂಪಾಗಿದೆ, ಇಲ್ಲಿ ಬಂದು ಮಲಗೋದೇ ಸುಖ’ ಎಂದಿದ್ದವರು, ಇದ್ದಕ್ಕಿದ್ದಂತೆ ಎಲ್ಲವನ್ನು ಬಿಟ್ಟು ತಮ್ಮ ಊರಿನ ಅದೇ ತೋಟದಲ್ಲಿ ಚಪ್ಪರದ ಕೆಳಗೆ ಹೂವಿನ ರಾಶಿಯನ್ನು ಹೊದ್ದು ಮಣ್ಣಿನೊಳಗೆ ಮಲಗಿದರು.

ಕಳೆದ ಒಂದು ವರ್ಷದಲ್ಲಿ ಸಾವಿರಾರು ಜನರಿಗೆ ಅನ್ನವಿಕ್ಕಿ, ನೂರಾರು ಜನರಿಗೆ ಔಷಧ ನೀಡಿ, ಚಿಕಿತ್ಸೆಗೆ ಬೆಡ್-ಆಕ್ಸಿಜನ್, ಔಷಧ ಸಿಗದೆ ಚಿಕಿತ್ಸೆಗೆ ಪರದಾಡುತ್ತಿದ್ದ ಹತ್ತಾರು ಕೋವಿಡ್ ಸೋಂಕಿತರ ಜೀವ ಉಳಿಸಿ, ಮೂರು ದಿನಗಳ ಕಾಲ ಅನ್ನಾಹಾರ ಬಿಟ್ಟು ಪ್ರಯತ್ನ ಪಟ್ಟರೂ ಒಂದು ಪುಟ್ಟ ಬಾಲಕಿಯ ಜೀವ ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವು ಹಾಗೂ ಅಸಹಾಯಕತೆಯಲ್ಲಿ ಇಡೀ ದಿನ ಕಣ್ಣೀರು ಹಾಕಿ, ತನ್ನ ದುಡಿಮೆಯ ಬಹುಪಾಲು ಹಣವನ್ನು ಸಮಾಜಕ್ಕೇ ಖರ್ಚು ಮಾಡಿ, ಅಪಘಾತಕ್ಕೆ ತುತ್ತಾಗುವ ಮೂರು ದಿನಗಳ ಮುಂಚೆಯೂ ತನ್ನ ಉಳಿತಾಯ ಖಾತೆಯ ಕೊನೆಯ ರೂಪಾಯಿಗಳನ್ನೂ ಬಡಜನರ ಅನ್ನಕ್ಕೆ ದಾರಿಯಾಗಲು ನೀಡಿ, ದಿನಸಿ ಕಿಟ್ ಹಂಚಿ, ಕಟ್ಟ ಕಡೆಗೆ ತನ್ನ ಅಂಗಾಂಗಳನ್ನು ಕೊಟ್ಟು ಐದು ಜನರ ಜೀವ ಉಳಿಸಿ, ಈ ಜಗತ್ತನ್ನು ನೋಡಲು ಇಬ್ಬರಿಗೆ ಕಣ್ಣುಗಳನ್ನು ಕೊಡುತ್ತಲೇ ತನ್ನ ಉಸಿರು ಚೆಲ್ಲಿದರು ಸಂಚಾರಿ ವಿಜಯಕುಮಾರ್. ವಿಜಯ್ ಆಸ್ಪತ್ರೆ ಸೇರಿ ಪ್ರಾಣಪಕ್ಷಿ ಹಾರುವ ಮುನ್ನವೇ ಅವರನ್ನು ಸುದ್ದಿಗಳ ಮೂಲಕ ಕೊಲ್ಲಲಾಯಿತು. ಉಸಿರು ಬಿಟ್ಟ ನಂತರವೂ ಹಲವರ ವೈಯಕ್ತಿಕ ಪ್ರಚಾರಕ್ಕಾಗಿ ವಿಜಯ್ ಅವರು ಸರಕಾಗಿದ್ದಾರೆ. ವಿಜಯ್ ಅವರ ವೈಯಕ್ತಿಕ ಸೂಕ್ಷ್ಮಗಳು ಗೊತ್ತಿಲ್ಲದವರೆಲ್ಲಾ ಅವರ ಹೆಸರು ಬಳಸಿಕೊಂಡು ಭರಪೂರ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿಂದಲೋ ಎಲ್ಲವನ್ನು ಕಾಣುವ ವಿಜಯ್ ಖಂಡಿತವಾಗಿ ಎಲ್ಲರನ್ನು ಕ್ಷಮಿಸಿ ನಗುತ್ತಿರುತ್ತಾರೆ.

ಈ ಬರಹ ಮುಗಿಸುವ ಮುನ್ನ..

ವಿಜಯ್ ಅವರು ಗೆಳೆತನಕ್ಕೂ ಮೀರಿದ ಒಂದು ಸೆಳೆತ-ಶಕ್ತಿ, ಮಾನವೀಯ ರೂಪ ಮತ್ತು ಉತ್ಸಾಹ ತುಂಬುವ ಚೇತನ. ಮುಂಚಿನ ದಿನಗಳಲ್ಲಿ ವಾರಕ್ಕೆ ಮೂರು-ನಾಲ್ಕು ಭೇಟಿ ಇರುತ್ತಿತ್ತು, ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಒಂದು ವಿಡಿಯೋ ಚಾಟ್ ಇರುತ್ತಿತ್ತು, ವರ್ಷ ವರ್ಷವೂ ಒಂದು ಅಥವ ಎರಡು ಪ್ರವಾಸಗಳಲ್ಲಿ ಅವರೂ ಜೊತೆ ಇರುತ್ತಿದ್ದರು, ಹಾಲಿವುಡ್ ಸಿನಿಮಾಗಳ ಸಂಭಾಷಣೆಗಳನ್ನು ಅದೇ ಶೈಲಿಯಲ್ಲಿ ಆ ಪಾತ್ರಧಾರಿಯ ಧ್ವನಿಯನ್ನು ಅನುಕರಿಸಿ ಹೇಳಿ ಧ್ವನಿ‌ಮುದ್ರಿಸಿ ಕಳುಹಿಸಿ ‘ಯಾವ ಸಿನಿಮಾದ್ದು ಹೇಳಿ ನೋಡೋಣ?’ ಎಂದು ಗೆಳೆಯರ ತಲೆಗೆ ಹುಳು ಬಿಡುತ್ತಿದ್ದರು. ಅವಕಾಶ ಸಿಕ್ಕಾಗೆಲ್ಲಾ ಕಾಲೆಳೆದು ತಮಾಷೆ ಮಾಡುತ್ತಿದ್ದರು, ಸಲುಗೆಯಲ್ಲಿ ಗೆಳೆಯರು ಸಹ ವಿಜಯ್ ಅವರನ್ನು ತುಸು ಹೆಚ್ಚೇ ರೇಗಿಸಿದ್ದಾರೆ. ಯಾರ ಮನಸ್ಸಿಗೂ ನೋವಾಗುವಂತೆ ರೇಗಿಸಿದವರಲ್ಲ, ಅದೇ ರೀತಿ ವಿಜಯ್ ಅವರನ್ನು ಯಾರೇ ರೇಗಿಸಿದರೂ, ರೇಗಿಸಿದವರೊಡನೆ ತಾವೂ ನಕ್ಕು ತಿಳಿಯಾಗಿದ್ದಾರೆ. ಗೆಳೆಯರ ಜೊತೆ ಯಾವುದಾದರೂ ವಿಷಯಕ್ಕೆ ಚರ್ಚೆ ಬಿಸಿಯಾದಾಗ ವಿಜಯ್ ಅವರಿಗೆ ಕೋಪವೂ ಬರುತ್ತಿತ್ತು, ಆದರೆ ಹತ್ತು ಸೆಕೆಂಡುಗಳ ಕಾಲವೂ ಆ ಕೋಪವನ್ನು ಉಳಿಸಿಕೊಳ್ಳಲಾಗದೆ ಕಿಸುಕ್ ಎಂದು ನಕ್ಕುಬಿಡುತ್ತಿದ್ದವರು. ಅಪರೂಪಕ್ಕೊಮ್ಮೆ ಅತಿ ಎನಿಸುವಷ್ಟು ಭಾವುಕರಾಗುತ್ತಿದ್ದದನ್ನು ಬಿಟ್ಟರೆ ಸದಾ ಹಸನ್ಮುಖಿಯಾಗಿ, ತಮಾಷೆ ಮಾಡಿಕೊಂಡು ಇರುತಿದ್ದ ಸಂಚಾರಿ ವಿಜಯ್ ನಮ್ಮ ಎದೆಯಲ್ಲಿ ಸಾವಿರಾರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಸಿನಿಮಾ ಪ್ರೇಕ್ಷಕರು ನೋಡಲೆಂದು ಇನ್ನೂ ಮೂರು ಸಿನಿಮಾಗಳ ಕೆಲಸಗಳನ್ನು ಮುಗಿಸಿಕೊಟ್ಟು ಹೋಗಿದ್ದಾರೆ. ತಲೆದಂಡ, ಪುಗ್ಸಟ್ಟೆ ಲೈಫು ಮತ್ತು ಮೇಲೊಬ್ಬ ಮಾಯಾವಿ ಎಂಬ ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಸಂಚಾರಿ ವಿಜಯ್ ಅಭಿನಯದ ಆ ಮೂರು ಸಿನಿಮಾಗಳನ್ನು ಪ್ರೇಕ್ಷಕರು ನೋಡಬಹುದು, ನಂತರ ಕಾಲ ಕಳೆದಂತೆ ಜನ ಮತ್ತು ಜಗ ಅವರನ್ನು ಮರೆಯಬಹುದು, ಸಿನಿಮಾ ಉದ್ಯಮ ಮರೆಯಬಹುದು, ಆದರೆ ಕೆಲವರ ಪಾಲಿಗೆ ಸಂಚಾರಿ ವಿಜಯ್ ಎಂದರೆ ಎರಡು ದಿನಗಳು ಅತ್ತು ಕಣ್ಣೀರು ಹಾಕಿ ಸಮಾಧಾನ ಮಾಡಿಕೊಂಡು ಮರೆಯುವ ವ್ಯಕ್ತಿಯೂ ಅಲ್ಲ, ವ್ಯಕ್ತಿತ್ವವೂ ಅಲ್ಲ.. ಅವರು ಸಂಚಾರಿ, ನಮ್ಮ ಜೊತೆಗೆ ಜೀವಂತವಾಗಿ ಸಂಚರಿಸುವ ಸಹಚಾರಿ’.

-ವೀರೇಂದ್ರ ಮಲ್ಲಣ್ಣ

ಇದನ್ನೂ ಓದಿ:

​ಸಂಚಾರಿ ವಿಜಯ್​ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ

‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ